ಬೆಂಗಳೂರು (ಡಿ. 21): ಲೋಕಪಾಲ್‌ ಕಾಯಿದೆ ಅಡಿಯಲ್ಲಿ ಡಿ.31ರ ಒಳಗಾಗಿ ಕಡ್ಡಾಯವಾಗಿ ಆಸ್ತಿ ಮತ್ತು ಸಾಲಗಳನ್ನು ಘೋಷಿಸಿಕೊಳ್ಳಬೇಕಿದ್ದ ಕೇಂದ್ರ ಸರಕಾರಿ ನೌಕರರಿಗೆ ಈ ಬಾರಿ ವಿನಾಯಿತಿ ನೀಡಲಾಗಿದೆ.

ಈ ಸಂಬಂಧ ಹೊಸ ನಿಯಮಗಳನ್ನು ಸಿದ್ಧಪಡಿಸುತ್ತಿರುವ ಹಿನ್ನೆಲೆಯಲ್ಲಿ ಡಿ.31ರ ಒಳಗೆ ಆಸ್ತಿ ಮತ್ತು ಸಾಲಗಳ ಬಗ್ಗೆ ಸ್ವಯಂ ಘೋಷಣೆ ನೀಡುವುದು ಅಗತ್ಯವಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ. ಪರಿಷ್ಕೃತ ನಿಯಮಗಳಡಿ ಆಸ್ತಿ ಘೋಷಣೆಗೆ ಸಮಯ ನಿಗದಿಪಡಿಸಿ ಆದೇಶ ಹೊರಡಿಸಲಾಗುವುದು. ಅಲ್ಲಿಯವರೆಗೂ ಈ ವಿನಾಯಿತಿ ಮುಂದುವರಿಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಲೋಕಪಾಲ್‌ ಕಾಯಿದೆ ಸೆಕ್ಷನ್‌ 44ರ ಪ್ರಕಾರ, ಡಿ.31ರ ಒಳಗಾಗಿ ಕೇಂದ್ರ ಸರಕಾರಿ ನೌಕರರು ಆಸ್ತಿ ಮತ್ತು ಸಾಲಗಳ ವಿವರ ಘೋಷಿಸಬೇಕೆಂದು ಕಳೆದ ಜುಲೈನಲ್ಲಿ ಸರಕಾರ ಆದೇಶ ಹೊರಡಿಸಿತ್ತು. ಅಲ್ಲದೆ, ಮಾ.31, 2015 ರ ಅವಧಿಯವರೆಗೂ ಇದ್ದ ಆಸ್ತಿ ಮತ್ತು ಸಾಲಗಳ ವಿವರವನ್ನು ಒಳಗೊಂಡ ವಾರ್ಷಿಕ ರಿಟರ್ನ್ಸ್‌ 2016ರ ಡಿ.31ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಲೋಕಪಾಲ್‌ ಕಾಯಿದೆಯಡಿ ಕೇಂದ್ರ ಸರಕಾರಿ ನೌಕರರು ವಿದೇಶಿ ಬ್ಯಾಂಕ್‌ ಖಾತೆಗಳಲ್ಲಿರುವ ಠೇವಣಿ, ದುಬಾರಿ ವರ್ಣಚಿತ್ರಗಳು, ಪುರಾತನ ಕಲಾಕೃತಿಗಳು, ಪೀಠೋಪಕರಣ, ಎಲೆಕ್ಟ್ರಾನಿಕ್‌ ಉಪಕರಣಗಳು, ಚಿರಾಸ್ತಿ, ವಿಮೆ, ಬಾಂಡ್‌ಗಳು, ಮ್ಯೂಚುಯಲ್‌ ಫಂಡ್‌ ಮತ್ತು ಷೇರುಗಳ ವಿವರವನ್ನು ಘೋಷಣೆಯಲ್ಲಿ ಒದಗಿಸಬೇಕು.