ಇನ್ನೇನು ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಇದೇ ವೇಳೆ ಸಮೀಕ್ಷಾ ವರದಿಯೊಂದು  ಬಿಡುಗಡೆಯಾಗಿದ್ದು ಮೂರು ರಾಜ್ಯಗಳಲ್ಲಿ 2 ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎನ್ನಲಾಗಿದೆ. 

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, 3 ಸಮೀಕ್ಷೆಗಳು ಪ್ರಕಟಗೊಂಡಿವೆ. 

3 ಸಮೀಕ್ಷೆಗಳು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವಿನ ಸುಳಿವು ನೀಡಿದ್ದು, ರಾಜಸ್ಥಾನ ಕಾಂಗ್ರೆಸ್ ವಶವಾಗಲಿದೆ ಎಂದು ಹೇಳಿವೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ.

ಮಧ್ಯ ಪ್ರದೇಶ : ಎಬಿಪಿ ನ್ಯೂಸ್ ಮತ್ತು ಲೋಕನೀತಿ ಸಿಎಸ್ ಡಿಎಸ್ ಸಮೀಕ್ಷೆ ಅನ್ವಯ 230 ಸದಸ್ಯಬಲದ ಮಧ್ಯಪ್ರದೇಶದಲ್ಲಿ ಬಿಜೆಪಿ116 ಸ್ಥಾನ ಗೆಲ್ಲಲಿದೆ. ಇದು ಕಳೆದ ಬಾರಿ ಅದು ಗೆದ್ದಿದ್ದಕ್ಕಿಂತ 49 ಸೀಟು ಕಡಿಮೆ. ಕಾಂಗ್ರೆಸ್ ಕಳೆದ ಬಾರಿಗಿಂತ 47 ಸ್ಥಾನ ಹೆಚ್ಚು ಗೆದ್ದು ತನ್ನ ಬಲವನ್ನು 105 ಕ್ಕೆ ಏರಿಸಿಕೊಳ್ಳಲಿದೆ. ಇತರರು 9 ಸ್ಥಾನ ಗೆಲ್ಲಲಿದ್ದಾರೆ. ಇದೇ ವೇಳೆ ಇಂಡಿಯಾ ಟೀವಿ ಸಿಎನ್‌ಎಕ್ಸ್ ಸಮೀಕ್ಷೆ ಅನ್ವಯ ಬಿಜೆಪಿ 122, ಕಾಂಗ್ರೆಸ್ 95, ಇತರರು 13 ಸ್ಥಾನ ಗೆಲ್ಲಲಿದ್ದಾರೆ. ಇಂಡಿ ಯಾ ಟುಡೇ- ಪಿಎಸ್‌ಇ ಸಮೀಕ್ಷೆ ಅನ್ವಯ, ಬಿಜೆಪಿ ಗೆಲ್ಲುವ ಸಾಧ್ಯತೆ ಶೇ.52 ರಷ್ಟಿದೆ.

ಛತ್ತೀಸ್ ಗಢ :  ಎಬಿಪಿ ನ್ಯೂಸ್ ಮತ್ತು ಲೋಕನೀತಿ ಸಿಎಸ್ ಡಿಎಸ್ ಸಮೀಕ್ಷೆಯಲ್ಲಿ 90 ಸ್ಥಾನ ಬಲದ ಛತ್ತೀಸ್‌ಗಢದಲ್ಲಿ ಬಿಜೆಪಿ ಕಳೆದ ಬಾರಿಗಿಂತ 7 ಸ್ಥಾನ ಹೆಚ್ಚು ಗೆಲ್ಲುವ ಮೂಲಕ ತನ್ನ ಬಲವನ್ನು 56ಕ್ಕೆ ಹೆಚ್ಚಿಸಿಕೊಳ್ಳಲಿದೆ. ಕಾಂಗ್ರೆಸ್ 14 ಸ್ಥಾನ ಕಳೆದುಕೊಳ್ಳುವ ಮೂಲಕ 25 ಸ್ಥಾನಕ್ಕೆ ತಲುಪಲಿದೆ. ಇತರರು 9 ಸ್ಥಾನ ಗೆಲ್ಲಲಿದ್ದಾರೆ. ಇನ್ನು ಇಂಡಿಯಾ ಟೀವಿ ಸಿಎನ್‌ಎಕ್ಸ್ ಸಮೀಕ್ಷೆ ಅನ್ವಯ ಬಿಜೆಪಿ 50 ಸ್ಥಾನ, ಕಾಂಗ್ರೆಸ್ 30 ಸ್ಥಾನ, ಇತರರು, 10 ಸ್ಥಾನ ಗೆಲ್ಲಲಿದ್ದಾರೆ. ಇಂಡಿಯಾಟುಡೇ, ಪಿಎಸ್‌ಇ ಸಮೀಕ್ಷೆ ಅನ್ವಯ ಬಿಜೆಪಿ ಮರಳುವ ಸಾಧ್ಯತೆ ಶೇ. 55ರಷ್ಟಿದೆ.

ರಾಜಸ್ಥಾನ : ಎಬಿಪಿ ನ್ಯೂಸ್ ಮತ್ತು ಲೋಕನೀತಿ ಸಿಎಸ್ ಡಿಎಸ್ ಸಮೀಕ್ಷೆಯಲ್ಲಿ 200 ಸದಸ್ಯ ಬಲದ ರಾಜಸ್ಥಾನದಲ್ಲಿ ಬಿಜೆಪಿ ಕಳೆದ ಬಾರಿಗಿಂತ 79 ಕಡಿಮೆ ಸ್ಥಾನ ಗೆದ್ದು 84 ಸೀಟಿಗೆ ಕುಸಿಯಲಿದೆ. ಕಾಂಗ್ರೆಸ್ ಕಳೆದ ಬಾರಿಗಿಂತ 89 ಸ್ಥಾನ ಹೆಚ್ಚಿಗೆ ಗೆದ್ದು ತನ್ನ ಬಲವನ್ನು 110ಕ್ಕೆ ಏರಿಸಿಕೊಳ್ಳಲಿದೆ. ಇತರರು 6 ಸ್ಥಾನ ಗೆಲ್ಲಲಿದ್ದಾರೆ. ಇದೇ ವೇಳೆ ಇಂಡಿಯಾ ಟೀವಿ ಸಿಎನ್‌ಎಕ್ಸ್ ಸಮೀಕ್ಷೆ ಅನ್ವಯ ಬಿಜೆಪಿ 75, ಕಾಂಗ್ರೆಸ್ 115 ಮತ್ತು ಇತರರು 10 ಸ್ಥಾನ ಗೆಲ್ಲಲಿದ್ದಾರೆ. ಇಂಡಿಯಾಟುಡೇ, ಪಿಎಸ್‌ಇ ಸಮೀಕ್ಷೆ ಅನ್ವಯ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಕೇವಲ ಶೇ. 35ರಷ್ಟಿದೆ.