ಹಿರಿಯ ಕಾಂಗ್ರೆಸ್ ನಾಯಕನಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಲಾಗಿದ್ದು, ಕಿರಿಯ ನಾಯಕನಿಗೆ ಉಪಮುಖ್ಯಮಂತ್ರಿ ಪಟ್ಟವನ್ನು ಕಾಂಗ್ರೆಸ್ ನಲ್ಲಿ ನೀಡಲಾಗಿದೆ.  ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಹಿರಿಯ ನಾಯಕ ಅಶೋಕ್‌ ಗೆಹ್ಲೋಟ್‌ ಅವರನ್ನು ಕಾಂಗ್ರೆಸ್‌ ಆಯ್ಕೆ ಮಾಡಿದೆ. 

ನವದೆಹಲಿ : ಹಲವು ಸುತ್ತಿನ ಮಾತುಕತೆ, ರಾಜಿ ಸಂಧಾನದ ಬಳಿಕ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಹಿರಿಯ ನಾಯಕ ಅಶೋಕ್‌ ಗೆಹ್ಲೋಟ್‌ ಅವರನ್ನು ಕಾಂಗ್ರೆಸ್‌ ಆಯ್ಕೆ ಮಾಡಿದೆ. ಆ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ರಾಜಸ್ಥಾನದ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಿದೆ.

ರಾಜಸ್ಥಾನದಲ್ಲಿ ಪಕ್ಷಕ್ಕೆ ಮರಳಿ ಅಧಿಕಾರ ದಕ್ಕಿದ ಹಿನ್ನೆಲೆಯಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಮುಖಂಡ ಅಶೋಕ್‌ ಗೆಹ್ಲೋಟ್‌ ಹಾಗೂ ಯುವ ನಾಯಕ ಸಚಿನ್‌ ಪೈಲಟ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಸಚಿನ್‌ ಪೈಲಟ್‌ ಪರ ಅವರ ಸಮುದಾಯವಾದ ಗುಜ್ಜರ್‌ ಜನರು ರಾಜಸ್ಥಾನದಲ್ಲಿ ಹಿಂಸೆಗೆ ಇಳಿದ ಹಿನ್ನೆಲೆಯಲ್ಲಿ ಈ ವಿಷಯ ಕಗ್ಗಂಟಾಗಿತ್ತು. ಹಲವು ಬಾರಿ ಮಾತುಕತೆ ನಡೆಸಿ, ಇಬ್ಬರ ಮನವೊಲಿಸಿದ ಕಾಂಗ್ರೆಸ್‌, ಇಬ್ಬರಿಗೂ ಹುದ್ದೆ ನೀಡಿದೆ.

ಗೆಹ್ಲೋಟ್‌ ಅವರನ್ನು ಸಿಎಂ ಹಾಗೂ ಪೈಲಟ್‌ ಅವರನ್ನು ಡಿಸಿಎಂ ಹುದ್ದೆಗೆ ಆಯ್ಕೆ ಮಾಡಿರುವುದನ್ನು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿಯೂ ಆಗಿರುವ ರಾಜಸ್ಥಾನದ ವೀಕ್ಷಕ ಕೆ.ಸಿ. ವೇಣುಗೋಪಾಲ್‌ ಪ್ರಕಟಿಸಿದರು.

ಮೂರನೇ ಸಲವೂ ಹೋರಾಟ: ಅಶೋಕ್‌ ಗೆಹ್ಲೋಟ್‌ ಅವರು ಚುನಾವಣೆಯಲ್ಲಿ ಪಕ್ಷ ಗೆದ್ದ ಬಳಿಕವೂ ಹೋರಾಟ ನಡೆಸಿ ಸಿಎಂ ಪಟ್ಟಕ್ಕೇರುತ್ತಿರುವುದು ಇದು ಮೂರನೇ ಬಾರಿ. 1998ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಜಾಟ್‌ ಸಮುದಾಯದ ನಾಯಕರು ತಮಗೇ ಸಿಎಂ ಹುದ್ದೆ ಬೇಕು ಎಂದು ಪಟ್ಟು ಹಿಡಿದಿದ್ದರು. 2008ರಲ್ಲಿ ಜಾಟ್‌ ಸಮುದಾಯ ಪ್ರತಿಭಟನೆ ನಡೆಸಿದ್ದರೆ, ಗೆಹ್ಲೋಟ್‌ ಹಾಗೂ ಕೇಂದ್ರದ ಅಂದಿನ ಸಚಿವ ಸೀಸ್‌ ರಾಮ್‌ ಓಲಾ ಬೆಂಬಲಿಗರು ಕಿತ್ತಾಡಿಕೊಂಡಿದ್ದರು. ಸೋನಿಯಾ ಮಧ್ಯಪ್ರವೇಶದ ಬಳಿಕ ಗೆಹ್ಲೋಟ್‌ಗೆ ಹುದ್ದೆ ಸಿಕ್ಕಿತ್ತು.