ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಜು.5ರಿಂದ ಸಂಜೆಯ ವೇಳೆಯೂ ಆಶ್ಲೇಷ ಬಲಿ ಸೇವೆ ಆರಂಭಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಳದಲ್ಲಿ ಆಶ್ಲೇಷ ಬಲಿ ಸೇವೆಯನ್ನು ಬೆಳಗ್ಗಿನ ಸಮಯ ಮಾತ್ರ ನಡೆಸಲಾಗುತ್ತಿತ್ತು. ಆದರೆ ಸೇವೆ ನೆರವೇರಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಒತ್ತಡ ಉಂಟಾಗುತ್ತಿದೆ. 

ಇದನ್ನು ಮನಗಂಡ ದೇವಳದ ಆಡಳಿತ ಮಂಡಳಿ ಸಾಯಂಕಾಲದ ವೇಳೆಯೂ ಆಶ್ಲೇಷ ಬಲಿ ಸೇವೆ ನಡೆಸಲು ನಿರ್ಧರಿಸಿದೆ ಎಂದರು. ಸಾಯಂಕಾಲದ ಆಶ್ಲೇಷ ಬಲಿ ಸೇವೆಗೆ ಮಧ್ಯಾಹ್ನ 12.30ರಿಂದ ಸಾಯಂಕಾಲ 4.30ರವರೆಗೆ ಸೇವಾ ರಶೀದಿ ನೀಡಲಾಗುವುದು. ಸಂಜೆ 5ಕ್ಕೆ ಆಶ್ಲೇಷ ಬಲಿ ಸೇವೆ ಆರಂಭವಾಗಿ, ಒಂದು ಪಾಳಿಯಲ್ಲಿ ಮಾತ್ರ ನಡೆಯುತ್ತದೆ ಎಂದು ಹೇಳಿದರು.

ಪ್ರತಿದಿನ ಆಶ್ಲೇಷ ಬಲಿ ಸೇವೆಯ ಸುಮಾರು 400 ರಿಂದ 500 ನಡೆಯುತ್ತದೆ. ವಿಶೇಷ ಹಾಗೂ ರಜಾ ದಿನಗಳ ಸಂದರ್ಭದಲ್ಲಿ ಇದರ ಸಂಖ್ಯೆ 1200 ರಿಂದ 1400 ತಲುಪುತ್ತದೆ. ಆದಕಾರಣ ಸಂಜೆ ವೇಳೆಯೂ ಸೇವೆ ಆರಂಭಿಸಲಾಗುತ್ತಿದೆ. ಅಲ್ಲದೇ ಇದೀಗ ಸೇವೆ ನೆರವೇರುತ್ತಿರುವ ಸ್ಥಳ ಚಿಕ್ಕದಾಗಿದ್ದು, ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ. ಆದಕಾರಣ ಆಶ್ಲೇಷ ಬಲಿ ಸೇವೆಯ ಸ್ಥಳವನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ ಎಂದರು.