ಕೇಂದ್ರ ಸಚಿವ ಅರುಣ್‌ ಜೇಟ್ಲಿ ದಾಖಲಿಸಿರುವ 10 ಕೋಟಿ ಮೊತ್ತದ ಮಾನನಷ್ಟಕೇಸನ್ನು ಕೋರ್ಟ್‌ನ ಹೊರಗೆ ಇತ್ಯರ್ಥಪಡಿಸುವ ಬಗ್ಗೆ ಕೇಜ್ರಿವಾಲ್‌ ಮುಂದಿಟ್ಟಿದ್ದ ಪ್ರಸ್ತಾಪವನ್ನು ಜೇಟ್ಲಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ನವದೆಹಲಿ: ಕೇಂದ್ರ ಸಚಿವ ಅರುಣ್‌ ಜೇಟ್ಲಿ ದಾಖಲಿಸಿರುವ 10 ಕೋಟಿ ಮೊತ್ತದ ಮಾನನಷ್ಟಕೇಸನ್ನು ಕೋರ್ಟ್‌ನ ಹೊರಗೆ ಇತ್ಯರ್ಥಪಡಿಸುವ ಬಗ್ಗೆ ಕೇಜ್ರಿವಾಲ್‌ ಮುಂದಿಟ್ಟಿದ್ದ ಪ್ರಸ್ತಾಪವನ್ನು ಜೇಟ್ಲಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಒಂದು ವೇಳೆ ಪ್ರಕರಣದ ತೀರ್ಪು ಕೇಜ್ರಿ ವಿರುದ್ಧವಾಗಿ ಬಂದರೆ ಅವರು 10 ಕೋಟಿ ರು. ನಷ್ಟಭರಿಸಿಕೊಡಬೇಕಾಗಿ ಬರಲಿದೆ. ಇದು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿರುವ ಆಮ್‌ಆದ್ಮಿ ಪಕ್ಷ ಮತ್ತು ಕೇಜ್ರಿಯನ್ನು ಹೊಸ ಸಂಕಷ್ಟಕ್ಕೆ ದಬ್ಬಲಿದೆ ಎಂದು ಹೇಳಲಾಗಿದೆ.

ಏನಿದು ಪ್ರಕರಣ?

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಅಸೋಸಿಯೇಷನ್‌ನಲ್ಲಿ 2000ದಿಂದ 2013ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಜೇಟ್ಲಿ ಹಣಕಾಸು ಅವ್ಯವಹಾರ ನಡೆಸಿದ್ದಾರೆ ಎಂದು ಕೇಜ್ರಿ ಆರೋಪಿಸಿದ್ದರು. ಈ ಸಂಬಂಧ ಜೇಟ್ಲಿ 2015ರಲ್ಲಿ 10 ಕೋಟಿ ರು. ಮೊತ್ತದ ಮಾನನಷ್ಟಮೊಕದ್ದಮೆ ದಾಖಲಿಸಿದ್ದರು.

ಕೇಜ್ರಿ ವಿರುದ್ಧ ದೇಶಾದ್ಯಂತ 13 ಮಾನನಷ್ಟುಕೇಸು ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳು ಹಾಜರಾಗುವುದು ಮತ್ತು ಅವುಗಳ ನಿರ್ವಹಣೆ ಕೇಜ್ರಿಗೆ ಸಮಸ್ಯೆಯಾಗಿದೆ. ಇದು 2019ರ ಲೋಕಸಭಾ ಚುನಾವಣೆ ವೇಳೆ ಪಕ್ಷದ ಹೋರಾಟಕ್ಕೆ ಅಡ್ಡಿ ಆಗಬಹುದು ಎಂಬುದು ಕೇಜ್ರಿ ಆತಂಕ. ಹೀಗಾಗಿಯೇ ಚುನಾವಣೆಗೂ ಮುನ್ನ ಈ ಎಲ್ಲಾ ಕೇಸುಗಳನ್ನು ಕೋರ್ಟ್‌ ಹೊರಗೆ ಇತ್ಯರ್ಥಪಡಿಸಲು ಕೇಜ್ರಿ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಂಜಾಬ್‌ ನಾಯಕ ಮಜೀಠಿಯಾ, ಕೇಂದ್ರ ಸಚಿವ ಗಡ್ಕರಿ ಮತ್ತು ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ರ ಪುತ್ರನ ಕ್ಷಮೆಯನ್ನು ಕೇಜ್ರಿ ಇತ್ತೀಚೆಗೆ ಯಾಚಿಸಿದ್ದರು.