ನವದೆಹಲಿ(ಅ.01): ಮಾಜಿ ಹಣಕಾಸು ಸಚಿವ ದಿವಂಗತ ಅರುಣ್​ ಜೇಟ್ಲಿ ಅವರಿಗೆ ನೀಡಲಾಗುವ ಪಿಂಚಣಿಯನ್ನು ಅವರ ಕುಟುಂಬ ನಿರಾಕರಿಸಿದೆ. ಈ ಪಿಂಚಣಿ ಹಣವನ್ನು ರಾಜ್ಯಸಭೆಯಲ್ಲಿ ದುಡಿಯುವ ಬಡ ಸಿಬ್ಬಂದಿಗೆ ನೀಡುವಂತೆ ಜೇಟ್ಲಿ ಪತ್ನಿ ಮನವಿ ಮಾಡಿದ್ದಾರೆ.  

ಈ ಕುರಿತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವರಿಗೆ ಪತ್ರ ಬರೆದಿರುವ  ಜೇಟ್ಲಿ ಪತ್ನಿ, ರಾಜ್ಯಸಭೆಯ ಬಡ ಸಿಬ್ಬಂದಿಗೆ ಜೇಟ್ಲಿ ಪಿಂಚಣಿ ಹಣವನ್ನು ಮೀಸಲಿಡುವಂತೆ ಮನವಿ ಮಾಡಿದ್ದಾರೆ.

ರಾಜ್ಯಸಭೆಯ ಕ್ಲಾಸ್​- IVನೇ ವಿಭಾಗದ ಬಡ ನೌಕರರಿಗೆ ಪಿಂಚಣಿ ಹಣ ಮೀಸಲಿಡಿ ಎಂದು ಸಂಗೀತಾ ಜೇಟ್ಲಿ ತಮ್ಮ ಉಪರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕಳೆದ ಆ.24ರಂದು ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ, ದೀರ್ಘಕಾಲ ರಾಜ್ಯಸಭೆಯ ಸದಸ್ಯರಾಗಿದ್ದರಲ್ಲದೇ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.