ಬೆಂಗಳೂರು(ಆ. 07) 'ಹತಾಶೆಯ ಸಮಯ, ಹತಾಶೆಯ ಅಂಕಿ ಅಂಶ, ಆರ್ಟಿಕಲ್ 370 ಎಂಬ 70 ವರ್ಷಗಳ ಹತಾಶೆ! ಅಭಿನಂದನೆಗಳು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ.. ದೇಶ ಮೊದಲು ಎಂಬ ನಿಮ್ಮ ವಿಚಾರದಲ್ಲಿ ನವ ಭಾರತದ ನಾವೆಲ್ಲ ನಿಮ್ಮ ಜತೆಗೆ ಇರುತ್ತೇವೆ'  ಹೀಗೆಂದು ಟ್ವೀಟ್ ಮಾಡಿರುವುದು ಕಾಂಗ್ರಸ್ ಶಾಸಕಿ ಅಂಜಲಿ ನಿಂಬಾಳ್ಕರ್.

ಬೆಳಗಾವಿ ಜಿಲ್ಲೆ ಖಾನಾಪುರದ ಕಾಂಗ್ರೆಸ್ ಶಾಸಕಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಹಾಡಿ ಹೊಗಳಿದ್ದಾರೆ, ಅಭಿನಂದನೆ ಸಲ್ಲಿಸಿದ್ದಾರೆ. ಇದೇ ಮೊದಲು ಎಂಬಂತೆ ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರು ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮವನ್ನು ಶ್ಲಾಘಿಸಿದ್ದಾರೆ.

ಸಂವಿಧಾನ ತಿದ್ದುಪಡಿ ಮಾಡದೆಯೇ 370ನೇ ವಿಧಿ ರದ್ದು: ಇದು ಹೇಗಾಯ್ತು? ಇಲ್ಲಿದೆ ಮಾಹಿತಿ

ಕಾಂಗ್ರೆಸ್ ಶಾಸಕರು ತಂಡೋಪತಂಡವಾಗಿ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಅಂಜಲಿ ನಿಂಬಾಳ್ಕರ್ ಸಹ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದಾದ ನಂತರದ ರಾಜಕಾರಣದ ಬದಲಾವಣೆಯಲ್ಲಿ ರಾಜ್ಯದಲ್ಲಿದ್ದ ದೋಸ್ತಿ ಸರ್ಕಾರ ಪತನವಾಗಿ ಬಿಜೆಪಿ  ಅಧಿಕಾರಕ್ಕೆ ಏರಿದೆ. ಇದೆಲ್ಲದರ ನಡುವೆ ಅಂಜಲಿ ನಿಂಬಾಳ್ಕರ್ ಮಾಡಿರುವ ಟ್ವೀಟ್ ಸಹಜವಾಗಿಯೇ ರಾಜಕಾರಣದ ಚರ್ಚೆ ಹುಟ್ಟುಹಾಕುವ ಸಾಧ್ಯತೆಯನ್ನು ಹೆಚ್ಚಿಸಿದೆ.