ನವದೆಹಲಿ[ಏ.06]: ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವುದು ಅಷ್ಟುಸುಲಭವಿಲ್ಲ. ಸಂವಿಧಾನಕ್ಕೇ ತಿದ್ದುಪಡಿ ಆಗಬೇಕು. ಸಂವಿಧಾನರಚನಾ ಸಮಿತಿಯ ಸಭೆ ಕರೆಯಬೇಕು ಎಂಬೆಲ್ಲಾ ವಾದಗಳನ್ನು ಕೇಂದ್ರ ಸರ್ಕಾರ ತನ್ನ ಚತುರ ನಡೆಯಿಂದ ಸುಳ್ಳಾಗಿಸಿದೆ. 370ನೇ ಕಲಂನಲ್ಲೇ ಇದ್ದ ಅಂಶವೊಂದನ್ನು ಬಳಸಿಕೊಂಡು ಆ ವಿಧಿಯನ್ನೇ ನಿರುಪಯುಕ್ತಗೊಳಿಸುವಲ್ಲಿ ಸಫಲವಾಗಿದೆ.

370ನೇ ವಿಧಿಯನ್ನು ರದ್ದುಗೊಳಿಸಲು ಸಂವಿಧಾನ ತಿದ್ದುಪಡಿಯಾಗಬೇಕು ಎಂದು 368ನೇ ಕಲಂ ಹೇಳುತ್ತದೆ. ಆದರೆ ಸರ್ಕಾರ 370ನೇ ವಿಧಿಯಲ್ಲೇ ಇದ್ದ 3ನೇ ಸೆಕ್ಷನ್‌ ಅನ್ನು ಆಧಾರವಾಗಿಟ್ಟುಕೊಂಡು ಇಡೀ ಕಲಂ ಅನ್ನೇ ನಿಷ್ಕ್ರಿಯಗೊಳಿಸಿದೆ.

370ನೇ ವಿಧಿಯ 3ನೇ ಸೆಕ್ಷನ್‌ನಲ್ಲಿ ‘ಈ ಪರಿಚ್ಛೇದದಲ್ಲಿ ಏನೇ ಅಂಶಗಳು ಇದ್ದರೂ ರಾಷ್ಟ್ರಪತಿಗಳು ಸಾರ್ವಜನಿಕ ಅಧಿಸೂಚನೆ ಮೂಲಕ ಇಡೀ ಕಲಂ ಅನ್ನು ನಿಷ್ಕಿ್ರಯಗೊಳಿಸಬಹುದು ಅಥವಾ ಕೆಲವೊಂದು ಬದಲಾವಣೆಗಳನ್ನು ಮಾಡಬಹುದು’ ಎಂಬ ಅಂಶವಿದೆ. ಅದು ಸರ್ಕಾರಕ್ಕೆ ಪ್ರಬಲ ಅಸ್ತ್ರವಾಗಿ ಸಿಕ್ಕ ಕಾರಣ, 370ನೇ ವಿಧಿಯನ್ನು ರಾಷ್ಟ್ರಪತಿಗಳ ಆದೇಶದ ಮೂಲಕ ನಿಷ್ಕಿ್ರಯಗೊಳಿಸಲಾಗಿದೆ. ಇದರ ಬೆನ್ನಲ್ಲೇ ಭಾರತೀಯ ಸಂವಿಧಾನ ತಕ್ಷಣದಿಂದಲೇ ಜಾರಿಗೆ ಬರುವಂತೆ ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗಲಿದೆ ಎಂಬ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.

ರಾಷ್ಟ್ರಪತಿಗಳ ಈ ಆದೇಶದೊಂದಿಗೆ ಜಮ್ಮು-ಕಾಶ್ಮೀರದಲ್ಲಿದ್ದ ಪ್ರತ್ಯೇಕ ಸಂವಿಧಾನ ಅಸ್ತಿತ್ವ ಕಳೆದುಕೊಂಡಿದ್ದರೆ, ಭಾರತೀಯ ದಂಡ ಸಂಹಿತೆಗೆ ಪ್ರತಿಯಾಗಿ ಆ ರಾಜ್ಯದಲ್ಲಿದ್ದ ರಣಬೀರ್‌ ದಂಡ ಸಂಹಿತೆ ಕೂಡ ಇತಿಹಾಸ ಸೇರಿದೆ.

370ನೇ ವಿಧಿ ನಿಷ್ಕ್ರಿಯಗೊಳ್ಳುತ್ತಿದ್ದಂತೆ 35 (ಎ) ಪರಿಚ್ಛೇದವೂ ರದ್ದಾಗಿದೆ. ಜವಾಹರಲಾಲ್‌ ನೆಹರು ಅವರು ಪ್ರಧಾನಿಯಾಗಿದ್ದಾಗ ರಾಷ್ಟ್ರಪತಿಗಳ ಆದೇಶದ ಮೂಲಕ ಅದನ್ನು ಸೇರ್ಪಡೆಗೊಳಿಸಲಾಗಿತ್ತು.

ಕಾಶ್ಮೀರ ವಿಧಾನಸಭೆ ಅಸ್ತಿತ್ವದಲ್ಲಿಲ್ಲದ ರಾಷ್ಟ್ರಪತಿಗಳ ಆದೇಶಕ್ಕೆ ಸಂಸತ್ತಿನ ಒಪ್ಪಿಗೆ ಬೇಕೇ ಬೇಕು!

ಸಂವಿಧಾನದ 370ನೇ ವಿಧಿಯನ್ನು ರಾಷ್ಟ್ರಪತಿಗಳು ತಮ್ಮ ಆದೇಶದ ಮೂಲಕ ನಿಷ್ಕಿ್ರಯಗೊಳಿಸಿದ್ದರೂ ಸರಳ ಬಹಮತದೊಂದಿಗೆ ಸಂಸತ್ತಿನ ಒಪ್ಪಿಗೆಯನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಬೇಕಾಗಿದೆ.

370ನೇ ವಿಧಿಯ ಸೆಕ್ಷನ್‌ 3 ಬಳಸಿ ಆ ವಿಧಿಯನ್ನೇ ನಿಷ್ಕ್ರಿಯಗೊಳಿಸಲು ರಾಷ್ಟ್ರಪತಿಗಳಿಗೆ ಅವಕಾಶವಿದೆ. ಅದಕ್ಕಾಗಿ ಜಮ್ಮು-ಕಾಶ್ಮೀರದ ಸಂವಿಧಾನ ರಚನಾ ಸಮಿತಿಯಿಂದ ಶಿಫಾರಸು ಬಂದಿರಬೇಕು ಎಂಬ ನಿಯಮವಿದೆ. ಆದರೆ ಈಗಾಗಲೇ ವಿಸರ್ಜನೆಯಾಗಿರುವ ಆ ಸಮಿತಿಯನ್ನು ಮರು ಸಂಘಟಿಸುವುದು ದುಸ್ತರವಾದ ಕಾರಣ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಮೂಲಕ ಈ ವಿಚಾರದಲ್ಲಿ ಅತ್ಯಂತ ಜಾಣ ನಡೆ ಇಟ್ಟಿದೆ.

ಜಮ್ಮು-ಕಾಶ್ಮೀರದ ವಿಧಾನಸಭೆಯನ್ನೇ ಸಂವಿಧಾನ ರಚನಾ ಸಮಿತಿ ಎಂದು ಪರಿಗಣಿಸಿ ರಾಷ್ಟ್ರಪತಿಗಳಿಂದ ಆದೇಶ ಹೊರಬೀಳುವಂತೆ ನೋಡಿಕೊಂಡಿದೆ. ವಿಧಾನಸಭೆ ಈಗಾಗಲೇ ವಿಸರ್ಜನೆಯಾಗಿರುವ ಕಾರಣ, ವಿಧಾನಸಭೆ ಅಧಿಕಾರವನ್ನು ರಾಜ್ಯಪಾಲರಿಗೆ ನೀಡಲಾಗಿದೆ. ಹೀಗಾಗಿ ಸಂವಿಧಾನ ರಚನಾ ಸಮಿತಿಯ ಬದಲಿಗೆ ವಿಧಾನಸಭೆ, ಅದು ಅಸ್ತಿತ್ವದಲ್ಲಿಲ್ಲದ ಕಾರಣ ರಾಜ್ಯಪಾಲರು 370ನೇ ವಿಧಿ ನಿಷ್ಕಿ್ರಯ ಕೋರಿ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಸದ್ಯ ರಾಜ್ಯಪಾಲರ ಆಳ್ವಿಕೆ ಇರುವ ಕಾರಣ ಅಲ್ಲಿನ ವಿಧಾನಸಭೆಯ ಎಲ್ಲ ಅಧಿಕಾರವನ್ನು ಸಂಸತ್ತು ಚಲಾಯಿಸಬೇಕಾಗಿದೆ. ರಾಜ್ಯಪಾಲರೊಬ್ಬರೇ ಅನುಮತಿಸಲಾಗದು. ಹೀಗಾಗಿ 370ನೇ ವಿಧಿಯನ್ನು ರಾಷ್ಟ್ರಪತಿಗಳು ತಮ್ಮ ಆದೇಶದ ಮೂಲಕ ನಿಷ್ಕಿ್ರಯಗೊಳಿಸಿದ್ದರೂ ಸಂಸತ್ತಿನ ಉಭಯ ಸದನಗಳಲ್ಲಿ ಸರಳ ಬಹುಮತದೊಂದಿಗೆ ಆ ಆದೇಶವನ್ನು ಅಂಗೀಕರಿಸಬೇಕಾಗಿದೆ. ಅಲ್ಲಿಗೆ 370ನೇ ವಿಧಿ ಅಧಿಕೃತವಾಗಿ ಅಧಿಕಾರ ಕಳೆದುಕೊಂಡಂತಾಗಲಿದೆ.

ಈ ನಡುವೆ, ಜಮ್ಮು-ಕಾಶ್ಮೀರ ರಾಜ್ಯವನ್ನು ವಿಭಜಿಸಿ ಜಮ್ಮು- ಕಾಶ್ಮೀರ ಹಾಗೂ ಲಡಾಖ್‌ ಎಂಬ 2 ಕೇಂದ್ರಾಡಳಿತ ಪ್ರದೇಶ ಸೃಷ್ಟಿಗಾಗಿ ಕೇಂದ್ರ ಸರ್ಕಾರ ಮರುವಿಂಗಡಣಾ ಮಸೂದೆಯನ್ನು ಮಂಡಿಸಿದೆ. ಅದಕ್ಕೂ ಸಂಸತ್ತಿನ ಒಪ್ಪಿಗೆ ಬೇಕಾಗುತ್ತದೆ.

ಒಂದು ವೇಳೆ ಒಪ್ಪಿಗೆ ದೊರೆಯದಿದ್ದರೂ, ಸುಗ್ರೀವಾಜ್ಞೆ ಹಾದಿಯಂತೂ ಇದ್ದೇ ಇದೆ. ಆ.7ಕ್ಕೆ ಸಂಸತ್‌ ಅಧಿವೇಶನಕ್ಕೆ ತೆರೆ ಬೀಳಲಿದೆ. ಆನಂತರ ಸುಗ್ರೀವಾಜ್ಞೆ ಹೊರಡಿಸಬಹುದಾಗಿದೆ.