"ಸ್ವಾತಂತ್ರ್ಯಾನಂತರ ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತೇವೆ. ಯಾವುದೇ ಅಕ್ರಮ ನಗದು ಕಂಡು ಬಂದರೆ ಅಂಥವರನ್ನು ಸುಮ್ಮನೆ ಬಿಡುವುದಿಲ್ಲ..."

ಕೋಬೆ, ಜಪಾನ್(ನ. 12): ಐನ್ನೂರು ಮತ್ತು ಸಾವಿರ ರೂಪಾಯಿ ಮುಖಬೆಲೆಯ ಹಳೆಯ ನೋಟುಗಳನ್ನು ನಿಷೇಧಿಸುವ ಸರಕಾರದ ನಿರ್ಧಾರವನ್ನು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ. ಜಪಾನ್ ಪ್ರವಾಸದಲ್ಲಿರುವ ಮೋದಿ ಅಲ್ಲಿಯ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಾ, ಕಪ್ಪು ಹಣ ಹೊಂದಿದವರ ವಿರುದ್ಧ ಸರಕಾರ ಪ್ರಯೋಗಿಸಿರುವ ಅತಿ ದೊಡ್ಡ ಅಸ್ತ್ರ ಇದು ಎಂದು ಬಣ್ಣಿಸಿದ್ದಾರೆ. ಸ್ವಲ್ಪ ಕಷ್ಟವಾದರೂ ಸರಕಾರದ ಈ ನಿರ್ಧಾರವನ್ನು ಒಪ್ಪಿಕೊಂಡು ಬೆಂಬಲಿಸಿರುವ ಜನತೆಗೆ ತಾನು ಋಣಿಯಾಗಿರುವುದಾಗಿ ಪ್ರಧಾನಿ ಹೇಳಿದ್ದಾರೆ.

"ನಾನು ಪ್ರತಿಯೊಬ್ಬ ಭಾರತೀಯನಿಗೂ ಸೆಲ್ಯೂಟ್ ಹೊಡೆಯುತ್ತೇನೆ. ಅನೇಕ ಕುಟುಂಬಗಳಿಗೆ ಮದುವೆ ಸಮಾರಂಭವಿದ್ದವು; ಆರೋಗ್ಯ ಸಮಸ್ಯೆಗಳಿದ್ದವು... ಆದರೂ ಸರಕಾರದ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ" ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ಖಡಾಖಂಡಿತವಾಗಿ ಕಾಳಧನಿಕರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಮೋದಿ ಈ ವೇಳೆ ಭರವಸೆ ನೀಡಿದ್ದಾರೆ. "ಸ್ವಾತಂತ್ರ್ಯಾನಂತರ ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತೇವೆ. ಯಾವುದೇ ಅಕ್ರಮ ನಗದು ಕಂಡು ಬಂದರೆ ಅಂಥವರನ್ನು ಸುಮ್ಮನೆ ಬಿಡುವುದಿಲ್ಲ... ಈ ಕೆಲಸಕ್ಕಾಗಿ ಸಾಕಷ್ಟು ಜನರನ್ನು ಬೇಕಾದರೂ ನಿಯೋಜಿಸುತ್ತೇವೆ. ಪ್ರಾಮಾಣಿಕ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಯಾವ ಕಳ್ಳರೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ" ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಇದೇ ವೇಳೆ, ಈ ನಗದು ರದ್ದು ಮಾಡುವ ಸರಕಾರದ ಕ್ರಮ ಆತುರದ್ದಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. "ತೆರಿಗೆ ಕಟ್ಟಡದ ಆಸ್ತಿಯನ್ನು ತೋರಿಸಲು ಜನರಿಗೆ ನಾವು 50 ದಿನ ಕಾಲಾವಕಾಶ ನೀಡಿದ್ದೆವು" ಎಂದವರು ತಿಳಿಸಿದ್ದಾರೆ.