ಬಳ್ಳಾರಿ (ಜೂ.17) : ಸರ್ಕಾರದಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಮೈತ್ರಿ ಸರ್ಕಾರದ ವಿರುದ್ಧ ಸ್ವಪಕ್ಷೀಯರೇ ತಿರುಗಿ ಬಿದ್ದಿದ್ದಾರೆ. ಕೈನ ಮಾಜಿ ಹಾಗೂ ಹಾಲಿ ಶಾಸಕರಿಬ್ಬರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಜಿಂದಾಲ್ ಗೆ ಸರ್ಕಾರ ಭೂಮಿ ಪರಭಾರೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ  ಕೈ ಶಾಸಕ ಆನಂದ್ ಸಿಂಗ್ ಹಾಗೂ ಮಾಜಿ ಶಾಸಕ ಅನಿಲ್ ಲಾಡ್ ಜಂಟಿ  ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ಹಾಗೂ ಜಿಂದಾಲ್ ಕಂಪನಿ ವಿರುದ್ಧ ತಾವು ನಡೆಯುತ್ತಿಲ್ಲ. ಆದರೆ ಸರ್ಕಾರ ತೆಗೆದುಕೊಂಡ ನಿರ್ಧಾರ ತಪ್ಪು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಪರಭಾರೆ ಬದಲು ಲೀಸ್ ಗೆ ನೀಡಲಿ ಅಭ್ಯಂತರ ಇಲ್ಲ. ನಮ್ಮ ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿಲ್ಲ. ಜಿಲ್ಲೆಯ ಜನರ ಕೂಗು ಹಾಗೂ ಜನರ ಒತ್ತಾಯದಿಂದ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು. 

ನಮ್ಮ ಹೋರಾಟಕ್ಕೆ ಅನಿಲ್ ಲಾಡ್ ಬೆಂಬಲ ನೀಡಿದ್ದಾರೆ. ಜಿಂದಾಲ್ ಸೇರಿದಂತೆ ಜಿಲ್ಲೆಯ ವಿವಿಧ ಕಂಪನಿಗಳು ಜಿಲ್ಲೆಯಲ್ಲಿ ಎಷ್ಟು ಯುವಕರಿಗೆ ಉದ್ಯೋಗ ನೀಡಿದ್ದಾರೆ.? ಎಷ್ಟು ಗ್ರಾಮಗಳ ಅಭಿವೃದ್ಧಿ ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಹೋರಾಟದಲ್ಲಿ ರಾಜಕೀಯ ಬೆರಸುವುದು ಬೇಡ ಎಂದು ಶಾಸಕ ಆನಂದ್ ಸಿಂಗ್ ಹೇಳಿದರು.

ಇನ್ನು ಈ ಬಗ್ಗೆ ಮಾಜಿ ಶಾಸಕ ಅನಿಲ್ ಲಾಡ್ ಪ್ರತಿಕ್ರಿಯಿಸಿ, ಉಪ ಸಮಿತಿಗೆ ನಾವು ಡ್ರಾಫ್ ಮಾಡಿ ಕೊಡುತ್ತೇವೆ.  ಜಿಂದಾಲ್ ಕಂಪನಿಗೆ ನೀಡಿದ ಭೂಮಿ ಕೇವಲ 1.20 ಲಕ್ಷ ರೂ. ಆದರೆ ಈ ಭೂಮಿ ಇಂಡಸ್ಟ್ರಿಯಲ್  ಕನ್ವರ್ಷನ್ ಮಾಡಿದಾಗ ಕೊಟ್ಯಂತರ ರು. ಬೆಲೆ ಬಾಳುತ್ತದೆ. ಎಕರೆಗೆ ಒಂದು ಕೋಟಿಯಂತೆ ಬೆಲೆ ಬರುತ್ತದೆ. ಇದನ್ನ ಬ್ಯಾಂಕ್ ನಲ್ಲಿ ಒತ್ತೆ ಇಡುವಂತೆ ಷರತ್ತು ಹಾಕಬೇಕು. ಚಿಕ್ಕಪುಟ್ಟ ಉದ್ಯಿಗಳಿಗಾದರೆ ಇದೇ ದರದಲ್ಲಿ ಭೂಮಿ ನೀಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. 

ಇಬ್ಬರು ನಾಯಕರು ಸೇರಿ ಸರ್ಕಾರ ಜಿಂದಾಲ್ ಗೆ ಭೂಮಿ ನೀಡಿರುವ ಸಂಬಂಧ ಹೋರಾಟಕ್ಕೆ ಇಳಿದಿದ್ದಾರೆ.