ಎಷ್ಟೋ ವರ್ಷಗಳಿಂದ ಅಲ್ಪ ಸಂಬಳಕ್ಕೆ ದುಡಿಯುತ್ತಿದ್ದರೂ ಸರ್ಕಾರ ನಮ್ಮ ಸಮಸ್ಯೆಯನ್ನ ಅರ್ಥ ಮಾಡಿಕೊಂಡಿಲ್ಲ. ಹಾಗಾಗಿ ನಮ್ಮ ಬೇಡಿಕೆಗಳನ್ನ ಈಡೇರಿಸಲು ಸರ್ಕಾರವನ್ನ ಆಗ್ರಹಿಸಲು ಈ ರೀತಿಯ ಧರಣಿಗೆ ಮುಂದಾಗಿದ್ದೇವೆ ಎಂದು ಪ್ರತಿಭಟನಾ ನಿರತ ಮಹಿಳೆಯರು ತಿಳಿಸಿದ್ದಾರೆ.
ಬೆಂಗಳೂರು(ಮಾ.21): ಕನಿಷ್ಠ ವೇತನ ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗದಿರುವ ಕಾರಣ ಅಂಗನವಾಡಿ ಕಾರ್ಯಕರ್ತೆಯರು ಧರಣಿಯನ್ನು ಮುಂದುವರಿಸಿದ್ದಾರೆ.
ಇದೀಗ ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಹಲವು ಸದಸ್ಯರು ಬೇಡಿಕೆ ಈಡೇರಿಸಲು ಹಲವು ಸುತ್ತಿನ ಮಾತುಕತೆ ಕೈಗೊಂಡರೂ ಧರಣಿನಿರತರು ತಮ್ಮ ಪಟ್ಟು ಬಿಡುತ್ತಿಲ್ಲ.
ಎಷ್ಟೋ ವರ್ಷಗಳಿಂದ ಅಲ್ಪ ಸಂಬಳಕ್ಕೆ ದುಡಿಯುತ್ತಿದ್ದರೂ ಸರ್ಕಾರ ನಮ್ಮ ಸಮಸ್ಯೆಯನ್ನ ಅರ್ಥ ಮಾಡಿಕೊಂಡಿಲ್ಲ. ಹಾಗಾಗಿ ನಮ್ಮ ಬೇಡಿಕೆಗಳನ್ನ ಈಡೇರಿಸಲು ಸರ್ಕಾರವನ್ನ ಆಗ್ರಹಿಸಲು ಈ ರೀತಿಯ ಧರಣಿಗೆ ಮುಂದಾಗಿದ್ದೇವೆ ಎಂದು ಪ್ರತಿಭಟನಾ ನಿರತ ಮಹಿಳೆಯರು ತಿಳಿಸಿದ್ದಾರೆ.
ಸಿಎಂ ಅಸಮಾಧಾನ
ಅಂಗನವಾಡಿ ಕಾರ್ಯಕರ್ತರ ಬಗ್ಗೆ ಈ ಸದನದ ಸದಸ್ಯರ ಕಳಕಳಿ ನನಗೆ ಅರ್ಥವಾಗುತ್ತೆ, ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನವನ್ನು ಶೇಕಡಾ 90ರಷ್ಟು ಕೊಡ್ತಿತ್ತು. ರಾಜ್ಯ ಸರ್ಕಾರವೂ ಹೆಚ್ಚಿಸುತ್ತಾ ಬಂದಿದೆ. 1500ರೂಪಾಯಿ ಗೌರವಧನ ಕೊಡುವಾಗ 1350ರೂ ಕೇಂದ್ರವೇ ಕೊಡ್ತಿತ್ತು, 150ರೂ ರಾಜ್ಯ ಸರ್ಕಾರ ಕೊಡ್ತಿತ್ತು- ಆದ್ರೆ 2016-17ರಲ್ಲಿ ಕೇಂದ್ರ ಸರ್ಕಾರ 90:10ರಷ್ಟು ಇದದನ್ನು 60:40ಗೆ ಇಳಿಸಿದೆ. ಕೇಂದ್ರ ಸರ್ಕಾರ ಹೀಗೆ ಇಳಿಕೆ ಮಾಡಬಾರದಿತ್ತು-ಇದು ಕೇಂದ್ರ ಸರ್ಕಾರದ ಕಾರ್ಯಕ್ರಮ. ಆದರೆ ಕೇಂದ್ರದ ನಿರ್ಧಾರದಿಂದ ರಾಜ್ಯ ಸರ್ಕಾರದ ಮೇಲೆ ಹೊರೆ ಹೆಚ್ಚಾಗಿದೆ. ಆದರೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸಲು ಸರ್ಕಾರ ಮುಂದಾಗಲಿದ್ದು, ಇದಕ್ಕಾಗಿ ಏಪ್ರಿಲ್'ನಲ್ಲಿ ಸಭೆ ಕರೆಯಲಾಗಿದೆ' ಎಂದಿದ್ದಾರೆ.
ಆದರೆ ಸರ್ಕಾರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರೂ ಕಾರ್ಯಕರ್ತೆಯರು ಧರಣಿ ನಿಲ್ಲಿಸದಿರುವುದಕ್ಕೆ ಸಿಎಂ ಸಂಪುಟದ ಸಹೋದ್ಯೋಗಿಗಳೊಂದಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಕುಡಿಯವ ನೀರು, ಆ್ಯಂಬುಲೆನ್ಸ್, ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡುವಂತೆ ಸಚಿವೆ ಉಮಾಶ್ರೀಗೆ ಸೂಚನೆ ನೀಡಿದ್ದು, ಸ್ಥಳದಲ್ಲಿ ಹೆಚ್ಚಿನ ಮಹಿಳಾ ಪೊಲೀಸರ ನಿಯೋಜಸಲು ತಿಳಿಸಿದ್ದಾರೆ.
ಸಂಬಳ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧೆಡೆಯಿಂದ ಬಂದಿರುವ 10 ಸಾವಿರಕ್ಕೂ ಅಂಗನವಾಡಿ ಕಾರ್ಯಕರ್ತೆಯರು ನಿನ್ನೆಯಿಂದ ಫ್ರೀಡಂ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೇಡಿಕೆಗಳೇನು?
* ಸಹಾಯಕರ ತಿಂಗಳ ಗೌರವಧನವನ್ನು 3,500ದಿಂದ 7 ಸಾವಿರಕ್ಕೆ ಹೆಚ್ಚಿಸಬೇಕು
* ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 7ರಿಂದ 10 ಸಾವಿರಕ್ಕೆ ಹೆಚ್ಚಿಸಬೇಕು
* ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ, ಪೊಲಿಯೋ ಹನಿ ಅಭಿಯಾನಕ್ಕೆ ಪ್ರತ್ಯೇಕ ಸಿಬ್ಬಂದಿ
* ಅಂಗನವಾಡಿ ಸಿಬ್ಬಂದಿ ನೇಮಕ ನಿಯಮಗಳು ತೆಗೆಯುವುದಕ್ಕೂ ನಿಯಮ ರೂಪಿಸಬೇಕು
* ಕಾರ್ಯಕರ್ತರ ಸೇವಾ ಜೇಷ್ಠತೆ ಆಧಾರದ ಮೇಲೆ ಭತ್ಯೆ ಹೆಚ್ಚಿಸಬೇಕು
* ಆರ್'ಟಿಐ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ತರಬಾರದು
* ನೌಕರರೆಂದು ಪರಿಗಣಿಸಿ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಕೊಡಬೇಕು
* ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯತಿಗೆ ಪ್ರತ್ಯೇಕ ನಿಯಮ ರೂಪಿಸಬೇಕು
* ಆರೋಗ್ಯ ಸಂಬಂಧಿ ವಿಚಾರಗಳಿಗೆ ವೇತನ ಸಹಿತ ರಜೆ ನೀಡಬೇಕು
* ಅಂಗನವಾಡಿ ಕಾರ್ಯಕರ್ತೆಯರ ಖಾಲಿ ಸ್ಥಾನಗಳನ್ನು ಕೂಡಲೇ ಭರ್ತಿ ಮಾಡಬೇಕು
