ಹೇಳೋದಕ್ಕೆ ಅದು ದುಡಿಮೆ ಆದರೆ ಸಂಬಳ ಸಿಗೋದು ಮಾತ್ರ ಅತ್ಯಲ್ಪ. ಹೀಗೆ, ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅಹೋರಾತ್ರಿ ರಸ್ತೆಯಲ್ಲೇ ಮಲಗಿ ಮಹಿಳಾ ಕಾರ್ಯಕರ್ತೆಯರು ಧರಣಿ ನಡೆಸಿದ್ರು. ಆದರೆ, ಸರ್ಕಾರದ ಮಂತ್ರಿಗಳು ಮಾತ್ರ ಹಾಯಾಗಿ ನಿದ್ದೆಗೆ ಜಾರಿದರು.

ಬೆಂಗಳೂರು(ಮಾ.21): ಹೇಳೋದಕ್ಕೆ ಅದು ದುಡಿಮೆ ಆದರೆ ಸಂಬಳ ಸಿಗೋದು ಮಾತ್ರ ಅತ್ಯಲ್ಪ. ಹೀಗೆ, ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅಹೋರಾತ್ರಿ ರಸ್ತೆಯಲ್ಲೇ ಮಲಗಿ ಮಹಿಳಾ ಕಾರ್ಯಕರ್ತೆಯರು ಧರಣಿ ನಡೆಸಿದ್ರು. ಆದರೆ, ಸರ್ಕಾರದ ಮಂತ್ರಿಗಳು ಮಾತ್ರ ಹಾಯಾಗಿ ನಿದ್ದೆಗೆ ಜಾರಿದರು.

ರಾಜ್ಯದ ಮೂಲೆ ಮೂಲೆಯಿಂದ ಬಂದ ಸಹಸ್ರಾರು ಅಂಗನಾವಾಡಿ ಕಾರ್ಯಕರ್ತೆರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇಡೀ ರಾತ್ರಿ ರಸ್ತೆ ಮಧ್ಯೆಯೇ ಕುಳಿತು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ಕನಿಷ್ಠ ವೇತನ ಸೇರಿದಂತೆ ಇನ್ನೂ ಹಲವು ಬೇಡಿಕೆ ಈಡೇರಿಸುವಂತೆ ಹಲವು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಕ್ಕೆ ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರ ಮಾತ್ರ ನೆಪ ಹೇಳಿ ಮನವೊಲಿಸುತ್ತಲೇ ಬಂದಿತ್ತು. ಆದರೆ, ಇದೀಗ ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದಾರೆ.

ಇನ್ನು, ಧರಣಿ ನಿರತ ಮಹಿಳೆಯರ ಗೋಳು ಹೇಳತೀರದಾಗಿದೆ. ದೂರದೂರಿನಿಂದ ಬೆಂಗಳೂರಿಗೆ ತಮ್ಮ ಪುಟ್ಟ ಮಕ್ಕಳೊಂದಿಗೆ ಬಂದು ಧರಣಿ ನಡೆಸುತ್ತಿರುವುದು ಮನಕಲಕುವಂತಿದೆ. ಮಹಿಳೆಯರೇ ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸ್ತಾ ಇದ್ರೂ ಸರ್ಕಾರ ಮಾತ್ರ ಇದನ್ನ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಎಷ್ಟೋ ವರ್ಷಗಳಿಂದ ಅಲ್ಪ ಸಂಬಳಕ್ಕೆ ದುಡಿಯುತ್ತಿದ್ದರೂ ಸರ್ಕಾರ ನಮ್ಮ ಸಮಸ್ಯೆಯನ್ನ ಅರ್ಥ ಮಾಡಿಕೊಂಡಿಲ್ಲ. ಹಾಗಾಗಿ ನಮ್ಮ ಬೇಡಿಕೆಗಳನ್ನ ಈಡೇರಿಸಲು ಸರ್ಕಾರವನ್ನ ಆಗ್ರಹಿಸಲು ಈ ರೀತಿಯ ಧರಣಿಗೆ ಮುಂದಾಗಿದ್ದೇವೆ ಎಂದು ಪ್ರತಿಭಟನಾ ನಿರತ ಮಹಿಳೆಯರು ತಿಳಿಸಿದ್ದಾರೆ.

ಇಷ್ಟೆಲ್ಲಾ, ಆದ ಬಳಿಕವಾದರೂ, ಸರ್ಕಾರ ಈ ಬಡ ಮಹಿಳೆಯರ ಬೇಡಿಕೆ ಈಡೇರುತ್ತಾ, ಸಿದ್ದರಾಮಯ್ಯ ನಿದ್ದೆಯಿಂದ ಎದ್ದು, ಬೀದಿಯಲ್ಲಿ ಮಲಗಿರುವ ಹೆಣ್ಣುಮಕ್ಕಳ ನೋವಿಗೆ ಸ್ಪಂದಿಸುತ್ತಾರಾ ಕಾದು ನೋಡಬೇಕಿದೆ.