ಗಣರಾಜ್ಯೋತ್ಸವದ ರಜೆ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಕೊಪ್ಪಳದ ಕೆಎಂಸಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ತಂಡ ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಕೇರಳ ಮೂಲದ ವಿದ್ಯಾರ್ಥಿನಿ ಕಲ್ಯಾಣಿ (22) ನೀರಿನ ಸುಳಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.

ಕಾರವಾರ, ಉತ್ತರಕನ್ನಡ (ಜ.26): ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಸಮುದ್ರದಲ್ಲಿ ಈಜಾಡಲು ತೆರಳಿದ್ದ ಕೇರಳ ಮೂಲದ ಯುವತಿಯೊಬ್ಬಳು ನೀರಿನ ಸುಳಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಗಣರಾಜ್ಯೋತ್ಸವದ ರಜೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು.

ಕೊಪ್ಪಳದಿಂದ ಬಂದಿದ್ದ 17 ಮಂದಿ ವಿದ್ಯಾರ್ಥಿಗಳ ತಂಡ

ಕೊಪ್ಪಳದ ಕೆಎಂಸಿ (KMC) ವೈದ್ಯಕೀಯ ಕಾಲೇಜಿನ 17 ಮಂದಿ ವಿದ್ಯಾರ್ಥಿಗಳು ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಸಂಜೆ ವೇಳೆ ಎಲ್ಲರೂ ಸಮುದ್ರದ ಅಲೆಗಳ ಜೊತೆ ಆಟವಾಡಲು ನೀರಿನಲ್ಲಿ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಅಲೆಗಳ ಭೀಕರತೆಗೆ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಸಾವು ಗೆದ್ದು ಬಂದ ವಿದ್ಯಾರ್ಥಿ; ಸುಳಿಗೆ ಬಲಿಯಾದ ಕಲ್ಯಾಣಿ

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಮದ್ ಅಲಿ (22) ಎಂಬ ವಿದ್ಯಾರ್ಥಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಹೇಗೋ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡ ಆತನನ್ನು ತಕ್ಷಣವೇ ಗೋಕರ್ಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಕೇರಳ ಮೂಲದ ವಿದ್ಯಾರ್ಥಿನಿ ಕಲ್ಯಾಣಿ (22) ಸಮುದ್ರದ ಸುಳಿಗೆ ಸಿಲುಕಿ ನೀರಿನಲ್ಲಿ ನಾಪತ್ತೆಯಾಗಿದ್ದರು.

ಆಸ್ಪತ್ರೆಗೆ ತಲುಪುವಷ್ಟರಲ್ಲಿ ಕೊನೆಯುಸಿರು ಎಳೆದ ಯುವತಿ

ನಾಪತ್ತೆಯಾಗಿದ್ದ ಕಲ್ಯಾಣಿಗಾಗಿ ಸ್ಥಳೀಯರು ಮತ್ತು ಪ್ರವಾಸಿಗರು ತೀವ್ರ ಹುಡುಕಾಟ ನಡೆಸಿದರು. ಸಾಕಷ್ಟು ಹೊತ್ತಿನ ನಂತರ ಕಲ್ಯಾಣಿ ಪತ್ತೆಯಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ವಿದ್ಯಾರ್ಥಿನಿ ಮೃತಪಟ್ಟಿದ್ದರು.ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಯುವತಿಯ ಅಕಾಲಿಕ ಮರಣದಿಂದ ಆಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರು ಕಂಗಾಲಾಗಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಮುದ್ರದ ಅಲೆಗಳ ಅಬ್ಬರ ಇರುವಾಗ ಪ್ರವಾಸಿಗರು ಜಾಗ್ರತೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.