ಹೈದರಾಬಾದ್(ಜು.1): ತನ್ನ ಮಗಳಿಗೆ 18 ವರ್ಷ ತುಂಬಿದ ದಿನದಂದೇ ಆಕೆಯನ್ನು ಪಾಪಿ ತಂದೆಯೋರ್ವ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ಕುಟುಂಬದೊಂದಿಗೆ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಫಾರ್ಮಸಿ  ವಿದ್ಯಾರ್ಥಿನಿ ಚಂದ್ರಿಕಾ,  ತನ್ನ ತಂದೆಯಿಂದ ಕೊಲೆಯಾಗಿದ್ದಾಳೆ. ಚಂದ್ರಿಕಾ ಮೊಬೈಲ್ ನಲ್ಲಿ ಯುವಕನೋವರ್ವನ ಜೊತೆ ಮಾತನಾಡಿದ್ದೇ ಆಕೆಗೆ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಹುಟ್ಟು ಹಬ್ಬದ ಮರುದಿನ ಚಂದ್ರಿಕಾ ಮೊಬೈಲ್ ನಲ್ಲಿ ಯುವಕನೋರ್ವನ ಜೊತೆ ಮಾತನಾಡುತ್ತಿರುವುದನ್ನು ಕಂಡ ತಂದೆ ಕೊಟ್ಟಯ್ಯ, ಹರಿತವಾದ ಆಯುಧದಿಂದ ಆಕೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ.

ತಲೆಗೆ ಭಾರೀ ಪೆಟ್ಟು ಬಿದ್ದ ಪರಿಣಾಮ ಚಂದ್ರಿಕಾ ಕುಸಿದು ಬಿದ್ದು ಸ್ಥಳದಲ್ಲೇ  ಸಾವನ್ನಪ್ಪಿದ್ದಾಳೆ. ಸದ್ಯ ತಂದೆ ಕೊಟ್ಟಯ್ಯನನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.