ನಾಳೆ ಅಮಿತ್‌ ಶಾ ರಾಜ್ಯಕ್ಕೆ: ಈಶ್ವರಪ್ಪ ನಿವಾಸದಲ್ಲಿ ಭೋಜನ, ಸಿದ್ದಗಂಗಾ ಶ್ರೀಗಳ ಜೊತೆ ರಹಸ್ಯ ಚರ್ಚೆ

First Published 25, Mar 2018, 8:44 AM IST
Amith shah Visit Tomorrow Karnataka
Highlights

20 ನಿಮಿಷ ಶಿವಕುಮಾರ ಸ್ವಾಮೀಜಿಗಳ ಜತೆ ರಹಸ್ಯವಾಗಿ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಕುರಿತ ವಿಚಾರವೂ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ. ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಭಕ್ತರು ಇದೇ ಸಂದರ್ಭ ಶಾ ಅವರಿಗೆ ಅಹವಾಲು ಸಲ್ಲಿಸಲಿದ್ದಾರೆ.

ಬೆಂಗಳೂರು(ಮಾ.25): ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್‌ ಶಾ ಎರಡು ದಿನಗಳ ಭೇಟಿಗಾಗಿ ಸೋಮವಾರ ರಾಜ್ಯಕ್ಕೆ ಆಗಮಿಸಲಿದ್ದು, ಸಿದ್ದಗಂಗಾಶ್ರೀ ಜತೆ ರಹಸ್ಯ ಮಾತುಕತೆ, ಕುವೆಂಪು ಸಮಾಧಿ ಸ್ಥಳ ಕವಿಶೈಲಕ್ಕೆ ಭೇಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ನಾಯಕ ಈಶ್ವರಪ್ಪ ನಿವಾಸದಲ್ಲಿ ಭೋಜನವನ್ನೂ ಸವಿಯಲಿದ್ದಾರೆ.

ಸೋಮವಾರ ಬೆಳಗ್ಗೆ 9.30ಕ್ಕೆ ತುಮಕೂರು ವಿವಿ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿರುವ ಅಮಿತ್‌ ಶಾ, ಅಲ್ಲಿಂದ ನೇರವಾಗಿ ಸಿದ್ದಗಂಗಾ ಮಠಕ್ಕೆ ತೆರಳಲಿದ್ದಾರೆ. 20 ನಿಮಿಷ ಶಿವಕುಮಾರ ಸ್ವಾಮೀಜಿಗಳ ಜತೆ ರಹಸ್ಯವಾಗಿ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಕುರಿತ ವಿಚಾರವೂ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ. ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಭಕ್ತರು ಇದೇ ಸಂದರ್ಭ ಶಾ ಅವರಿಗೆ ಅಹವಾಲು ಸಲ್ಲಿಸಲಿದ್ದಾರೆ.

ಬಳಿಕ ಹೆಲಿಕಾಪ್ಟರ್‌ನಲ್ಲಿ ತಿಪಟೂರಿಗೆ ತೆರಳಿ, ತೆಂಗು ಬೆಳೆಗಾರರ ಸಮಾವೇಶದಲ್ಲಿ ಅಮಿತ್‌ ಶಾ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1.20ಕ್ಕೆ ಕುಪ್ಪಳ್ಳಿಯ ಕವಿಶೈಲದಲ್ಲಿ ಕುವೆಂಪು ಸ್ಮಾರಕ ವೀಕ್ಷಿಸಲಿದ್ದಾರೆ. ತೀರ್ಥಹಳ್ಳಿಯಲ್ಲಿ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಬಾಳೆಬೈಲಿನ ದಿವಂಗತ ನಂದಿತಾ ಕುಟುಂಬದವರನ್ನು ಭೇಟಿ ಮಾಡಲಿದ್ದಾರೆ. ಸಂಜೆ ಶಿವಮೊಗ್ಗದಲ್ಲಿ ರೋಡ್‌ ಶೋ, ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಉದ್ಯಮಿಗಳ ಜತೆ ಸಂವಾದ ನಡೆಸಿ, ಸಾಧು- ಸಂತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ರಾತ್ರಿ ವಿಪಕ್ಷ ನಾಯಕ ಈಶ್ವರಪ್ಪ ನಿವಾಸದಲ್ಲಿ ಭೋಜನ ಸವಿದು, ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

loader