ಬೆಂಗಳೂರು :  ಅತೃಪ್ತ ಶಾಸಕರು ಬಿಜೆಪಿಯತ್ತ ಸುಳಿಯದಂತೆ ತಡೆಯಲು ಸಂಪುಟ ವಿಸ್ತರಣೆ ಮಾಡುವುದೋ ಅಥವಾ ಪುನಾರಚನೆಗೆ ಕೈಹಾಕುವುದೋ ಎಂಬ ಜಿಜ್ಞಾಸೆಯಲ್ಲಿದ್ದ ಮೈತ್ರಿಕೂಟದ ನಾಯಕರು ಇದೀಗ ಕರಡು ಸೂತ್ರವೊಂದನ್ನು ರೂಪಿಸಿಕೊಂಡಿದ್ದಾರೆ. 

1. ತಕ್ಷಣದ ಕ್ರಮವಾಗಿ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಸಂಪುಟ ವಿಸ್ತರಣೆ ಮಾಡುವುದು. 

2. ಆಷಾಢಕ್ಕೆ (ಅರ್ಥಾತ್‌ ಜು.3ಕ್ಕೆ) ಮೊದಲು ಸಂಪುಟ ಪುನಾರಚನೆ ಮಾಡಿ ಎಲ್ಲಾ ರೀತಿಯ ಅತೃಪ್ತರಿಗೆ ಅಧಿಕಾರವನ್ನು ನೀಡುವುದು!

ಇಂತಹದೊಂದು ಕರಡು ಸೂತ್ರವನ್ನು ಮೈತ್ರಿಕೂಟದ ನಾಯಕರು ಸಿದ್ಧಪಡಿಸಿಕೊಂಡಿದ್ದು, ಬುಧವಾರ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಉಭಯ ಪಕ್ಷಗಳ ನಾಯಕರ ಜತೆ ಮಾತುಕತೆ ನಡೆಸಿದ ನಂತರ ಈ ಕರಡು ಸೂತ್ರಕ್ಕೆ ಅಧಿಕೃತ ಒಪ್ಪಿಗೆ ಬೀಳಲಿದೆ. ಇದಾಗುತ್ತಿದ್ದಂತೆಯೇ ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಈ ಮೂಲಗಳ ಪ್ರಕಾರ ಮೊದಲಿಗೆ ನಡೆಯಲಿರುವ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್‌ನ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‌, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಹಾಗೂ ಪಕ್ಷೇತರ ಆರ್‌. ಶಂಕರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು. ಈ ವಿಸ್ತರಣೆ ಕೆಲವೇ ದಿನಗಳಲ್ಲಿ ನಡೆಯಲಿದೆ. ಜೆಡಿಎಸ್‌ ಪಾಲಿನಲ್ಲಿ ಖಾಲಿ ಇರುವ ಎರಡು ಹಾಗೂ ಕಾಂಗ್ರೆಸ್‌ನಲ್ಲಿ ಖಾಲಿಯಿರುವ ಒಂದು ಸ್ಥಾನವನ್ನು ಈ ಮೂಲಕ ಭರ್ತಿ ಮಾಡಿಕೊಳ್ಳುವುದು.

ಅನಂತರ ಕೆಲ ದಿನಗಳನ್ನು ಬಿಟ್ಟು ಅಂದರೆ ಆಷಾಢಕ್ಕೆ ಮುನ್ನ (ಆಷಾಢ ಜುಲೈ 3ರಿಂದ ಆರಂಭಗೊಂಡು ಆಗಸ್ಟ್‌ 1ರವರೆಗೂ ಇರಲಿದೆ) ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಟ್ಟು ದೊಡ್ಡ ಮಟ್ಟದಲ್ಲಿ ಅತೃಪ್ತ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಅತೃಪ್ತಿ ಆಟಕ್ಕೆ ಕೊನೆ ಹಾಡುವ ಕರಡು ಸೂತ್ರವೊಂದನ್ನು ಮೈತ್ರಿ ಕೂಟದ ನಾಯಕರು ಸಿದ್ಧಪಡಿಸಿಕೊಂಡಿದ್ದಾರೆ.

ಈ ಸೂತ್ರವನ್ನು ಮಂಗಳವಾರ ತಡರಾತ್ರಿ ನಗರಕ್ಕೆ ಆಗಮಿಸಿರುವ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರ ಮುಂದಿಡಲಿದ್ದಾರೆ. ಇದೇ ವೇಳೆ ವೇಣುಗೋಪಾಲ್‌ ಕಾಂಗ್ರೆಸ್‌ ಸಚಿವರ ಸಭೆಯನ್ನು ನಡೆಸಲಿದ್ದಾರೆ. ಇದಾದ ನಂತರ ಸೂತ್ರಕ್ಕೆ ಒಮ್ಮತ ಮೂಡಿದರೆ ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ ಕಾರ್ಯ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಅತೃಪ್ತರಲ್ಲೇ ಒಡಕು ತರುವ ಯತ್ನ:

ಮೈತ್ರಿ ಕೂಟದ ನಾಯಕರು ಇಂತಹದೊಂದು ಸೂತ್ರ ರೂಪಿಸಲು ಮುಖ್ಯ ಕಾರಣ ಬಿಜೆಪಿಯತ್ತ ಮುಖ ಮಾಡಿರುವ ಕಾಂಗ್ರೆಸ್‌ನ ಅತೃಪ್ತ ಶಾಸಕರ ಗುಂಪಿನಲ್ಲಿ ಒಡಕು ಹುಟ್ಟು ಹಾಕುವುದು. ವಾಸ್ತವವಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ನಾಯಕರು ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರು. ಆದರೆ, ರಮೇಶ್‌ ಜಾರಕಿಹೊಳಿ ಸಂಪುಟ ಸೇರಲು ಒಪ್ಪುತ್ತಿಲ್ಲ. ಹೀಗಾಗಿ ಜಾರಕಿಹೊಳಿ ಗುಂಪಿನಲ್ಲಿ ಇದ್ದಾರೆ ಎನ್ನಲಾದ ಶಾಸಕರ ಗುಂಪನ್ನು ಛಿದ್ರಗೊಳಿಸಲು ಈ ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ.

ರಮೇಶ್‌ ಜಾರಕಿಹೊಳಿ ಗುಂಪಿನಲ್ಲಿ ಬಿ.ಸಿ. ಪಾಟೀಲ್‌, ನಾಗೇಂದ್ರ, ಮಹೇಶ್‌ ಕುಮಟಳ್ಳಿ, ಶ್ರೀಮಂತ ಪಾಟೀಲ್‌, ಪ್ರತಾಪ್‌ಗೌಡ ಪಾಟೀಲ್‌ ಸೇರಿದಂತೆ ಆರು ಮಂದಿ ಇದ್ದಾರೆ ಎನ್ನಲಾಗಿದೆ. ಇವರ ಜತೆಗೆ ಎಂಟು ಮಂದಿ ಶಾಸಕರೇನಾದರೂ ಬಿಜೆಪಿಯತ್ತ ಸಾಗಿದರೆ ಮೈತ್ರಿ ಸರ್ಕಾರ ಅತಂತ್ರಗೊಳ್ಳಿದೆ. ಅಂದರೆ, ವಿಧಾನಸಭೆಯಲ್ಲಿ ಮೈತ್ರಿಕೂಟದ ಸಂಖ್ಯಾಬಲವು ಬಿಜೆಪಿಗಿಂತ ಕಡಿಮೆಯಾಗಿ ಸರ್ಕಾರ ಅತಂತ್ರಗೊಳ್ಳಲು 14 ಶಾಸಕರು ಬಿಜೆಪಿಯತ್ತ ಸಾಗಬೇಕಾಗುತ್ತದೆ. ಅದರಲ್ಲಿ ಜಾರಕಿಹೊಳಿ ಗುಂಪಿನಲ್ಲಿ ಆರು ಮಂದಿಯಿದ್ದರೆ, ಉಳಿದ ಎಂಟು ಮಂದಿಯನ್ನು ಕೂಡಿಸಿಕೊಂಡರೆ ಸರ್ಕಾರ ಅತಂತ್ರ ಗ್ಯಾರಂಟಿ.

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯತ್ತ ಸಾಗುವಂತಹ ಎಂಟು ಮಂದಿ ಶಾಸಕರು ಕಂಡುಬರುತ್ತಿಲ್ಲ. ಅತೃಪ್ತ ಶಾಸಕರು ಈ ಸಂಖ್ಯೆಯನ್ನು ಕೂಡಿಸಲು ಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಇದು ಮೈತ್ರಿಕೂಟಕ್ಕೆ ಆತ್ಮವಿಶ್ವಾಸವನ್ನು ತುಂಬಿದೆ. ಜತೆಗೆ, ಜಾರಕಿಹೊಳಿಯೊಂದಿಗೆ ಇದ್ದಾರೆ ಎನ್ನಲಾಗುತ್ತಿರುವ ಆರು ಮಂದಿಯ ಗುಂಪನ್ನು ಒಡೆದುಬಿಟ್ಟರೆ ಆಗ ಸರ್ಕಾರ ಕೆಡವುವ ಪ್ರಯತ್ನಕ್ಕೆ ಕೊನೆ ಹಾಡಿದಂತೆ ಆಗುತ್ತದೆ ಎಂಬ ನಂಬಿಕೆ ಮೈತ್ರಿ ಕೂಟದ ನಾಯಕರಿಗೆ ಬಂದಿದೆ. ಹೀಗಾಗಿ ರಮೇಶ್‌ ಜಾರಕಿಹೊಳಿ ಅವರನ್ನೇ ಸೆಳೆಯಲು ಯತ್ನಿಸಿದರು. ಆದರೆ, ಅವರು ಒಪ್ಪದ ಕಾರಣ ಈಗ ಅವರೊಂದಿಗೆ ಇದ್ದಾರೆ ಎಂದು ನಂಬಲಾದ ಬಿ.ಸಿ. ಪಾಟೀಲ್‌ ಹಾಗೂ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಮೊದಲ ಹಂತ. ಎರಡನೇ ಹಂತವಾಗಿ ಪಕ್ಷೇತರರು ಕೂಡ ಬಿಜೆಪಿಯತ್ತ ಹೋಗದಂತೆ ತಡೆಯಲು ಆರ್‌.ಶಂಕರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಹಾಗೂ ಮತ್ತೊಬ್ಬ ಪಕ್ಷೇತರ ಮುಳಬಾಗಿಲು ನಾಗೇಂದ್ರ ಅವರಿಗೆ ಪ್ರಮುಖ ನಿಗಮ ಮಂಡಳಿ ನೀಡಿ, ಅವರ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಅನುದಾನ ನೀಡುವುದು (ಈ ಕಾರ್ಯದಲ್ಲಿ ಶಿವಕುಮಾರ್‌ ಯಶಸ್ವಿಗೊಂಡಿದ್ದು, ನಾಗೇಂದ್ರ ಮನವೊಲಿಸಲಾಗಿದೆ ಎನ್ನಲಾಗಿದೆ).

ಮುಂದಿನ ಹಂತದಲ್ಲಿ ಡಾ. ಸುಧಾಕರ್‌, ಪ್ರತಾಪ್‌ಗೌಡ ಪಾಟೀಲ್‌, ವಿ.ಮುನಿಯಪ್ಪ, ಶ್ರೀಮಂತ ಪಾಟೀಲ್‌, ರೋಷನ್‌ಬೇಗ್‌ ಸೇರಿದಂತೆ ಯಾರಾರ‍ಯರು ಬಿಜೆಪಿಯತ್ತ ಸುಳಿಯುವ ಸಾಧ್ಯತೆ ಇದೆ ಎನಿಸುತ್ತದೆಯೋ ಅವರೆಲ್ಲರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು. ಇದಕ್ಕೆ ಅನುಕೂಲವಾಗುವಂತೆ ಸಂಪುಟದಲ್ಲಿ ಹಾಲಿ ಇರುವ ಪ್ರಮುಖ ಸಚಿವರನ್ನು ಕೈಬಿಡುವುದು ಎಂಬ ಸೂತ್ರ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸೂತ್ರ ಯಶಸ್ವಿಯಾಗಬೇಕಾದರೆ ಕಾಂಗ್ರೆಸ್‌ನ ಸಚಿವರು ಯಾವುದೇ ಆಕ್ಷೇಪ ವ್ಯಕ್ತಪಡಿಸದೆ ಸಚಿವ ಸ್ಥಾನ ತ್ಯಾಗ ಮಾಡಲು ಮುಂದಾಗಬೇಕು. ಇದಕ್ಕೆ ಸಚಿವರ ಮನವೊಲಿಸಲು ವೇಣುಗೋಪಾಲ್‌ ಬುಧವಾರ ಸಚಿವರ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.