Asianet Suvarna News Asianet Suvarna News

ಮರ ನೆಟ್ಟು 3 ಪಟ್ಟು ಲಾಭ ಗಳಿಸಿ, ಕಾವೇರಿ ಉಳಿಸಿ

 ಜಗದ್ವಿಖ್ಯಾತ ಚಿಂತಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಅವರು ‘ಕಾವೇರಿ ಕೂಗು’ ಎಂಬ ವಿಶಿಷ್ಟಆಂದೋಲನದ ಮೂಲಕ ಒಂದೇ ಏಟಿಗೆ ಮೂರು ಗುರಿಯನ್ನು ಹೊಡೆಯುತ್ತಿದ್ದಾರೆ. ಆ ಗುರಿಗಳೇನು ಎನ್ನುವುದನ್ನು ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Kannadaprabha Chief Editor Ravi Hegde interview Spiritual guru Jaggi Vasudev On Cauvery Calling Campaign
Author
Bengaluru, First Published Aug 28, 2019, 10:47 AM IST

 ರವಿ ಹೆಗಡೆ 

ಬೆಂಗಳೂರು (ಆ.28]  ಜಗದ್ವಿಖ್ಯಾತ ಚಿಂತಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಅವರು ‘ಕಾವೇರಿ ಕೂಗು’ ಎಂಬ ವಿಶಿಷ್ಟಆಂದೋಲನದ ಮೂಲಕ ಒಂದೇ ಏಟಿಗೆ ಮೂರು ಗುರಿಯನ್ನು ಹೊಡೆಯುತ್ತಿದ್ದಾರೆ.

1. ಕಾವೇರಿ ನದಿ ದಂಡೆಯ ಆಚೀಚೆ 242 ಕೋಟಿ ಮರ ನೆಟ್ಟು ಹಸಿರು-ಉಸಿರು ಹೆಚ್ಚಿಸುವುದು.

2. ಈ ಪ್ರದೇಶದಲ್ಲಿ ಮಳೆ ನೀರಿನ ಇಂಗುವಿಕೆ ಹೆಚ್ಚಾಗಿ ಭೂಮಿ ಫಲವತ್ತಾಗುವುದು, ಕಾವೇರಿ ತುಂಬಿ ಹರಿಯುವುದು.

3. ಅರಣ್ಯ ಕೃಷಿಯ ಈ ಯೋಜನೆ ಮೂಲಕ ರೈತರ ಆದಾಯ ಮೂರು- ನಾಲ್ಕು ಪಟ್ಟು ಹೆಚ್ಚಾಗುವಂತೆ ಮಾಡುವುದು.

ಇದೆಲ್ಲಾ ಹೇಗೆ ಸಾಧ್ಯ? ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ. ಓದಿ ಹಾಗೂ ಈ ಆಂದೋಲನದಲ್ಲಿ ನೀವೂ ಪಾಲ್ಗೊಳ್ಳಿ.

ಏನಿದು ಕಾವೇರಿಯ ಕೂಗು?

ಇದು ಕಾವೇರಿ ಕೂಗು ಮಾತ್ರವಲ್ಲ. ಇದು ಎಲ್ಲ ನದಿಗಳ ಕೂಗೂ ಹೌದು. ನದಿ ನೀರಿಗಾಗಿ ರೈತರ ಕೂಗೂ ಹೌದು. ಕುಡಿವ ನೀರಿಗಾಗಿ ಪಟ್ಟಣದ ಜನರ ಕೂಗೂ ಹೌದು. ಬೆಳೆದ ಬೆಳೆಗೆ ಬೆಲೆಯಿಲ್ಲದೇ ಕಂಗಾಲಾಗಿರುವ ರೈತರ ದಯನೀಯ ಕೂಗೂ ಹೌದು. ದೇಶಾದ್ಯಂತ ನದಿಗಳು ಬತ್ತುತ್ತಿವೆ. ಕಾವೇರಿ ನದಿಯಂತೂ ವರ್ಷದ ಆರು ತಿಂಗಳು ಒಣಗಿ ಸಮುದ್ರವನ್ನೇ ಸೇರುವುದಿಲ್ಲ. ಈ ನದಿ ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಕದನಗಳಾಗುತ್ತಿವೆ. ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ. ಇಷ್ಟರ ನಡುವೆಯೂ ಬೆಳೆಗೆ ಲಾಭ ಸಿಗದೇ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದಕ್ಕೆಲ್ಲ ಸಮಗ್ರ ಪರಿಹಾರವೇ ಕಾವೇರಿ ಕೂಗು ಆಂದೋಲನ. ಕಾವೇರಿ ನದಿಗುಂಟ ಮುಂದಿನ 12 ವರ್ಷದಲ್ಲಿ 242 ಕೋಟಿ ಮರ ನೆಡುವ ಮೂಲಕ ಮಳೆ ನೀರು ಇಂಗಿ ಭೂಮಿ ಮತ್ತು ನದಿಯ ಒಡಲು ಸೇರುವಂತೆ ಮಾಡುವುದು. ಅದರಿಂದ ಕಾವೇರಿ ನದಿ ತುಂಬಿ ಹರಿಯುವಂತೆ ಮಾಡುವುದು. ಈ ಮರಗಳನ್ನು ನೆಟ್ಟರೈತರ ಆದಾಯ ಈಗಿನ ಆದಾಯಕ್ಕಿಂತ ಮೂರು- ನಾಲ್ಕು ಪಟ್ಟು ಹೆಚ್ಚಾಗುವಂತೆ ಮಾಡುವುದು. ಇದೆಲ್ಲ ಸಾಧ್ಯವಾಗಬೇಕಾದರೆ ನದಿ ದಂಡೆಯ ಆಚೀಚೆ ರೈತರು ತಮ್ಮ ಜಮೀನಿನ ಒಂದಷ್ಟುಭಾಗದಲ್ಲಿ ಬೆಳೆಯನ್ನಷ್ಟೇ ಅಲ್ಲ ಒಂದಷ್ಟುವಾಣಿಜ್ಯ ಮೌಲ್ಯದ ಮರಗಳನ್ನೂ ಬೆಳೆಸಬೇಕು. ಆದರೆ, ಲಾಭವಿಲ್ಲದೇ ಯಾರೂ ತಮ್ಮ ಕೃಷಿ ಜಮೀನಿನಲ್ಲಿ ಮರ ಬೆಳೆಯುವುದಿಲ್ಲ. ಅದಕ್ಕಾಗಿ ಸರ್ಕಾರ ಕೆಲ ಕಾನೂನುಗಳನ್ನು ಮಾರ್ಪಾಡು ಮಾಡಿ ರೈತರಿಗೆ ಆರ್ಥಿಕ ಉತ್ತೇಜನ ನೀಡಬೇಕು. ಇದೆಲ್ಲ ಅಂಶಗಳನ್ನೂ ಒಂದೇ ಚೌಕಟ್ಟಿನಲ್ಲಿ ತರಲು ನಡೆಸಿರುವ ಆಂದೋಲನವೇ ಕಾವೇರಿ ಕೂಗು.

ಸರ್ಕಾರ ಏನು ಮಾಡಬೇಕು?

ನದಿಯ ಆಚೀಚೆ ಕಾಡು ಕಡಿದು ತೋಟ- ಗದ್ದೆಗಳನ್ನು ಮಾಡಲಾಗಿದೆ. ರೈತರು ತಮ್ಮ ಲಾಭಕ್ಕಾಗಿ, ಜೀವನಕ್ಕಾಗಿ ಹೀಗೆ ಮಾಡುವುದು ಸಹಜ. ಆದರೆ, ನಾವೀಗ ನದಿಯಂಚಿನ ಭೂಮಿಯಲ್ಲಿ ಮರದ ಸಾಂದ್ರತೆ ಹೆಚ್ಚಿಸಬೇಕಾಗಿದೆ. ಅದಕ್ಕಾಗಿ ಸರ್ಕಾರಿ ಭೂಮಿಯಲ್ಲಿ ಮರಗಳನ್ನು ನೆಟ್ಟರೆ ಸಾಲದು. ಕೃಷಿ ಜಮೀನಿನಲ್ಲೂ ಮರಗಳನ್ನು ಬೆಳೆಸಬೇಕಾಗಿದೆ. ಆದರೆ, ಯಾವ ರೈತರೂ ತಮ್ಮ ಆದಾಯವನ್ನು ಕಳೆದುಕೊಂಡು ಮರ ಬೆಳೆಸುವುದಿಲ್ಲ. ಅದಕ್ಕಾಗಿ ರೈತರ ಆದಾಯ ಮಾಮೂಲಿ ಆದಾಯಕ್ಕಿಂತ ಹೆಚ್ಚಾಗುವಂತೆ ಮಾಡಲು ಈಗ ನಾವು ಎಗ್ರೋ ಫಾರೆಸ್ಟ್ರಿಯನ್ನು ರೈತರಿಗೆ ಕಲಿಸ ಬೇಕಾಗಿದೆ. ಇದು ಸರ್ಕಾರದ ಕಾನೂನು ನೆರವಿಲ್ಲದೇ ಸಾಧ್ಯವಿಲ್ಲ. ಅದಕ್ಕಾಗಿ ಸರ್ಕಾರದ ಮುಂದೆ ನಾವು 5 ಅಂಶದ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಈಗಾಗಲೇ ನಾವು ಅದನ್ನು ಕೇಂದ್ರ ಸಚಿವರಿಗೆ, ಬೇರೆ ಬೇರೆ ಸರಕಾರಗಳಿಗೆ ಕೂಡ ತಲುಪಿಸಿದ್ದೇವೆ. ತಮಿಳುನಾಡು ಸರಕಾರ ಅದನ್ನು ಸಂಪೂರ್ಣವಾಗಿ ನೆರವೇರಿಸುವುದಾಗಿ ಹೇಳಿದೆ. ಈ ಬೇಡಿಕೆಗಳಿಗಾಗಿ ಹೊಸತಾಗಿ ಕಾರ್ಯಯೋಜನೆ ರೂಪಿಸಬೇಕಾಗಿಲ್ಲ. ಹೊಸತಾಗಿ ಬಜೆಟ್‌ನಲ್ಲಿ ಹಣ ಎತ್ತಿಡಬೇಕಾಗಿಲ್ಲ. ಮರುಯೋಜನೆ ರೂಪಿಸಿದರಷ್ಟೇ ಸಾಕು. ನಮ್ಮ ಬೇಡಿಕೆಗಳು ಇಷ್ಟು.

1. ಅರಣ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವ ರೈತರಿಗೆ ಮೊದಲ ನಾಲ್ಕು ವರ್ಷ ಸಬ್ಸಿಡಿ ಕೊಡಬೇಕು.

2. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಮರಗಳನ್ನು ಕಡಿಯಲು ಸುಲಭವಾಗುವಂತೆ ಕಾನೂನು ರೂಪಿಸುವುದು.

3. ಕಾಫಿ ಬೋರ್ಡ್‌, ರಬ್ಬರ್‌ ಬೋರ್ಡ್‌ ಇದ್ದಂತೆ ಟಿಂಬರ್‌ ಬೋರ್ಡ್‌ ಆರಂಭಿಸಬೇಕು.

4. ಮುರಮುಟ್ಟುಗಳು ಕೃಷಿಯ ಉತ್ಪನ್ನಗಳೇ ಹೊರತು ಕಾಡಿನ ಉತ್ಪನ್ನಗಳು ಅಲ್ಲ.

5. ರೈತರಿಗೆ ಬೇರೆ ಕೃಷಿಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಒಂದು ಎಕರೆವರೆಗೆ ಉಚಿತ ಸಣ್ಣ ನೀರಾವರಿ ಸೌಲಭ್ಯ ಇದೆ. ಅದನ್ನು ಅರಣ್ಯ ಕೃಷಿಯಲ್ಲಿ ತೊಡಗುವವರಿಗೂ ನೀಡಬೇಕು.

ನೀವು ಮೊದಲ ನಾಲ್ಕು ವರ್ಷ ರೈತರಿಗೆ ಸಬ್ಸಿಡಿ ಕೊಡಬೇಕು ಅಂತ ಹೇಳಿದಿರಿ. ಅದು ಹೇಗೆ, ಯಾಕೆ?

ಈಗ ಒಬ್ಬ ರೈತನಿಗೆ 45000 ರು. ಆದಾಯ ಇದೆ ಅಂತ ಇಟ್ಟುಕೊಳ್ಳಿ. ಆತ ಮರ ಬೆಳೆಯಲು ಅಥವಾ ಅರಣ್ಯ ಕೃಷಿಗೆ ಹೋದರೆ ಮೊದಲ ಎರಡು ವರ್ಷ ಆ ಆದಾಯ ಶೇ.15ರಿಂದ ಶೇ.20 ಕಡಿಮೆಯಾಗುತ್ತದೆ. ಮೂರನೇ ಮತ್ತು ನಾಲ್ಕನೇ ವರ್ಷ ಶೇ.30ರಿಂದ ಶೇ.40 ಕಡಿಮೆಯಾಗುತ್ತದೆ. ಐದನೇ ವರ್ಷ ಆದಾಯ ಶೇ.50 ಕಡಿಮೆಯಾಗಬಹುದು. ಲಾಭ ಬರುವುದು ಆರನೇ ವರ್ಷದ ನಂತರ. ಅದೂ ಜಾಸ್ತಿ ಲಾಭ. ಹಾಗಾಗಿ ಆರಂಭದ ನಾಲ್ಕು ವರ್ಷಗಳಲ್ಲಿ ಸರ್ಕಾರ ರೈತನ ಜತೆ ನಿಲ್ಲಬೇಕು. ಸೂಕ್ತ ಸಬ್ಸಿಡಿ ನೀಡಬೇಕು.

ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದೀರಿ. ನೀವು ಏನು ಕೇಳಿದಿರಿ ಮತ್ತು ಅವರು ಏನು ಹೇಳಿದರು?

ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರು ನೆಲ, ಜಲ ಮತ್ತು ರೈತರ ಬಗ್ಗೆ ಆಸಕ್ತಿ ಇಟ್ಟುಕೊಂಡವರು. ಅವರು ಈ ಆಂದೋಲನಕ್ಕೆ ನೆರವು ನೀಡಬೇಕು ಎಂದು ಕೋರಿದ್ದೇವೆ. ಅದಕ್ಕೆ ಯಡಿಯೂರಪ್ಪನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆಂದೋಲನದಲ್ಲಿ ಅವರೂ ಪಾಲ್ಗೊಳ್ಳುತ್ತಾರೆ. ಸೆಪ್ಟೆಂಬರ್‌ 8ರಂದು ಬೆಂಗಳೂರಿನಲ್ಲಿ ನಡೆಯುವ ರಾರ‍ಯಲಿಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ. ನೆಲ ಜಲ ಹಾಗೂ ರೈತರ ಈ ಐದು ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ. ಇನ್ನೊಂದು ಹತ್ತು ದಿನಗಳಲ್ಲಿ ಆ ಕುರಿತ ಕೆಲಸಗಳು ಪ್ರಗತಿಯಾಗಲಿವೆ ಎಂಬ ನಂಬಿಕೆ ನಮಗಿದೆ. ಸೆ. 17ರಂದು ಅರಣ್ಯ ಸಚಿವ, ಕೃಷಿ ಸಚಿವ, ನೀರಾವರಿ ಸಚಿವರು ಮುಂತಾದವರೊಡನೆ ಸಭೆ ನಡೆಸಬೇಕು ಅಂತ ಕೇಳಿಕೊಂಡಿದ್ದೇವೆ. ಇವೆಲ್ಲ ಇನ್ನಷ್ಟೇ ತೀರ್ಮಾನವಾಗಬೇಕಿದೆ.

ಕಳೆದ ವರ್ಷ ರಾರ‍ಯಲಿ ಫಾರ್‌ ರಿವರ್ಸ್‌ ಅಭಿಯಾನ ನಡೆದಾಗಲೂ ಕರ್ನಾಟಕ ಸರಕಾರ ನಿಮ್ಮ ಜೊತೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿತ್ತು. ಅದು ಏನಾಯಿತು?

ಹೌದು. ಆಗ ಇದ್ದದ್ದು ಸಿದ್ದರಾಮಯ್ಯನವರ ಸರ್ಕಾರ. ಒಪ್ಪಂದ ಪತ್ರ ಸಹಿಯಾದ ಮೇಲೆ ಇದು ಮೂರನೇ ಸರಕಾರ. ಹಾಗಾಗಿ ಆ ಕುರಿತಂತೆ ಯಾವುದೇ ಬೆಳವಣಿಗೆ ಆಗಿಲ್ಲ. ಆದರೆ ಅದು ಸರಕಾರಿ ಜಾಗಗಳಲ್ಲಿ ಹತ್ತು ಕೋಟಿ ಗಿಡ ನೆಡುವ ಕುರಿತ ಒಪ್ಪಂದವಾಗಿತ್ತು. ಆ ಕುರಿತು ಸರಕಾರ ಗಮನ ಹರಿಸಬೇಕು.

ಕರ್ನಾಟಕದಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದಾಗ ಬೇರೆ ರಾಜ್ಯದಲ್ಲೂ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗಿತ್ತು. ಅದೇನಾಯಿತು?

ನಾಲ್ಕು ರಾಜ್ಯಗಳು ನಿಜವಾಗಿಯೂ ಒಳ್ಳೆಯ ಕೆಲಸ ಮಾಡುತ್ತಿವೆ. ಛತ್ತೀಸ್‌ಗಢ, ಅಸ್ಸಾಂ, ಒಡಿಶಾ ಮತ್ತು ಮಹಾರಾಷ್ಟ್ರ ಈ ನಾಲ್ಕು ರಾಜ್ಯಗಳು ರಾರ‍ಯಲಿ ಫಾರ್‌ ರಿವರ್ಸ್‌ ಯೋಜನೆಯ ಸಮಯದಲ್ಲಿ ಮಾತು ಕೊಟ್ಟಂತೆ ಗಿಡಗಳನ್ನು ನೆಡುತ್ತಿವೆ. ಅದರಲ್ಲೂ ಮಹಾರಾಷ್ಟ್ರ ಸರ್ಕಾರ ಎಲ್ಲರಿಗೂ ಮಾದರಿಯಾಗಿ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರದ ಯವತ್ಮಾಲ್‌ ಪ್ರದೇಶ ದೇಶದ ಆತ್ಮಹತ್ಯಾ ರಾಜಧಾನಿ ಎಂದೇ ಕರೆಸಿಕೊಂಡ ಪ್ರದೇಶ. ವಗಾಡಿ ನದಿಯ ಪ್ರದೇಶ ಅದು. ಅಲ್ಲಿ ಮಹಾರಾಷ್ಟ್ರ ಸರ್ಕಾರದ ಜೊತೆ ನಾವೇ ಕೈಜೋಡಿಸಿ ಕೆಲಸ ಮಾಡುತ್ತಿದ್ದೇವೆ. ಅದನ್ನು ಹೊರತುಪಡಿಸಿ ಮಹಾರಾಷ್ಟ್ರ ಮೂರು ವರ್ಷಗಳಲ್ಲಿ 50 ಕೋಟಿ ಗಿಡ ನೆಡುವ ಮಾತು ಕೊಟ್ಟಿತ್ತು. ಈಗ ಎರಡು ವರ್ಷ ಸಂದಿದೆ. ಈಗಾಗಲೇ 34 ಕೋಟಿ ಗಿಡಗಳನ್ನು ನೆಟ್ಟಾಗಿದೆ. ಅವರು ಎಷ್ಟುಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆಂದರೆ ಒಂದು ಗಿಡ ಸತ್ತರೆ ತಕ್ಷಣ ಅದೇ ಜಾಗದಲ್ಲಿ ಹೊಸ ಗಿಡ ನೆಡಲಾಗುತ್ತದೆ. ಒಡಿಶಾ, ಛತ್ತೀಸ್‌ಗಢ ಸರಕಾರದ ಅಧೀನದಲ್ಲಿ ಹೆಚ್ಚು ಸರಕಾರಿ ಭೂಮಿಗಳಿವೆ. ಹಾಗಾಗಿ ಅಲ್ಲಿ ಗಿಡ ನೆಡಬಹುದು. ಕರ್ನಾಟಕ ಮತ್ತು ತಮಿಳುನಾಡಲ್ಲಿ ಸರ್ಕಾರಿ ಅಧೀನದಲ್ಲಿರುವ ಜಾಗ ತುಂಬಾ ಕಡಿಮೆ.

ಸರ್ಕಾರಿ ಕೆಲಸ ಎಂದರೆ ಬೇಜವಾಬ್ದಾರಿಯ ಕೆಲಸ ಎನ್ನಲಾಗುತ್ತದೆ. ಆದರೆ, ಮಹಾರಾಷ್ಟ್ರದಲ್ಲಿ ಹೇಗೆ ಯಶಸ್ವಿಯಾಗಿ ಕೆಲಸ ನಡೆಯುತ್ತಿದೆ?

ಮಹಾರಾಷ್ಟ್ರದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪಂಚಾಯತ್‌ ಅಧ್ಯಕ್ಷರು ಕೆಲಸಗಳನ್ನು ನೋಡುತ್ತಾರೆ. ಸಣ್ಣ ಸಣ್ಣ ತಂಡಗಳಾಗಿ ಕೆಲಸ ನಡೆಯುತ್ತದೆ. ಅಲ್ಲಿ ಸರ್ಕಾರವೇ ಗಿಡ ನೆಡುತ್ತದೆ. ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ.

ರೈತರು ಸಾಮಾನ್ಯ ಕೃಷಿಯ ಬದಲಿಗೆ ಅರಣ್ಯ ಕೃಷಿಗೆ ಒತ್ತು ಕೊಟ್ಟರೆ 3-4 ಪಟ್ಟು ಲಾಭ ಮಾಡಬಹುದು ಅಂತ ನೀವು ಹೇಳುತ್ತಿದ್ದೀರಿ...

ಬದಲಿಗೆ ಅಂತ ಅಲ್ಲ. ಸಾಮಾನ್ಯ ಕೃಷಿಯ ಜೊತೆಗೆ ಅರಣ್ಯ ಕೃಷಿ ಮಾಡಬೇಕು ಅಂತ ಹೇಳುವುದು. ತಮ್ಮ ಜಮೀನಿನ ಮೂರನೇ ಒಂದು ಭಾಗದಲ್ಲಿ ಅರಣ್ಯ ಕೃಷಿ ಆರಂಭಿಸಬೇಕು. ಅದು ಲಾಭದಾಯಕ. ಕೃಷಿಯನ್ನು ಲಾಭದಾಯಕವನ್ನಾಗಿ ಮಾಡದೇ ಇದ್ದರೆ ಯಾರೂ ಕೃಷಿ ಭೂಮಿಯಲ್ಲಿ ಇರಲಾರರು. ಈಗ ಕೃಷಿ ಕಡೆಗೆ ಮನಸ್ಸು ಇರುವ ರೈತರ ಸಂಖ್ಯೆ ಬಹಳ ಕಡಿಮೆ ಇದೆ. ತುಂಬಾ ಕಡಿಮೆ ರೈತರಿಗೆ ತಮ್ಮ ಮಕ್ಕಳು ಕೃಷಿ ಮುಂದುವರಿಸಬೇಕು ಅಂತ ಆಸೆ ಇದೆ. ತಮ್ಮ ಮಕ್ಕಳು ಕೂಡ ಕೃಷಿಯಲ್ಲಿ ಮುಂದುವರಿಯಬೇಕು ಅಂತ ಆಸೆ ಪಡುವ ರೈತರ ಸಂಖ್ಯೆ ಕೇವಲ ಶೇ.2. ಇನ್ನು ಇಪ್ಪತ್ತೈದು ವರ್ಷ ಹೀಗೇ ಇದ್ದರೆ ಯಾರೂ ಕೃಷಿ ಭೂಮಿಯಲ್ಲಿ ಇರುವುದೇ ಇಲ್ಲ. ಹಾಗಾಗಿ ಇದೊಂದು ಗಂಭೀರ ಸಮಸ್ಯೆ. ಇದೇ ಥರ ಇದ್ದರೆ ಆಹಾರ ಸಮಸ್ಯೆ ನಮ್ಮನ್ನು ದೊಡ್ಡ ಮಟ್ಟದಲ್ಲಿ ಕಾಡುವುದು ನಿಶ್ಚಿತ. ಆ ಕಾರಣಕ್ಕೆ ರೈತ ಮಕ್ಕಳನ್ನು ಕೃಷಿ ಭೂಮಿಯಲ್ಲೇ ಉಳಿಸಿಕೊಳ್ಳುವುದು ಈ ಹೊತ್ತಿನ ತುರ್ತು. ಅದಕ್ಕೆ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡುವುದೇ ದಾರಿ. ಅರಣ್ಯ ಕೃಷಿ ಆ ಮಟ್ಟಿಗೆ ಮುಖ್ಯವಾದದ್ದು. ನಾವು ಈಗಾಗಲೇ 69760 ರೈತರನ್ನು ಅರಣ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದೇವೆ. ತಮಿಳುನಾಡಿನಲ್ಲಿ ನಾವು ಮನಃಪರಿವರ್ತನೆ ಮಾಡಿದ್ದರೆ ಕರ್ನಾಟಕದಲ್ಲಿ ಕೆಲವರು ಅವರಾಗಿಯೇ ಅರಣ್ಯ ಕೃಷಿ ಶುರು ಮಾಡಿದ್ದಾರೆ. ಅವರ ಆದಾಯ ಶೇ.300 ರಿಂದ 800ರಷ್ಟುಜಾಸ್ತಿಯಾಗಿದೆ. ಅವರ ಭೂಮಿಯಲ್ಲೇ ನೀರು ಇಂಗುತ್ತದೆ. ಆ ಭೂಮಿ ಹೆಚ್ಚು ಫಲವತ್ತಾಗಿದೆ. ಹಾಗಾಗಿ ನಾವು ಅರಣ್ಯ ಕೃಷಿ ಮಾಡುವ ರೈತರ ಸಂಖ್ಯೆಯನ್ನು ಹೆಚ್ಚು ಮಾಡಬೇಕಾಗಿದೆ. ದೇಶದ ಉಳಿದ ರೈತರು ಕೂಡ ಲಾಭದಾಯಕವಾಗಿ ಬದುಕುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅದು ಸಾಧ್ಯವಾಗದೇ ಹೋದರೆ ಗಂಭೀರ ಸಮಸ್ಯೆ ಎದುರಾಗುವುದು ಖಂಡಿತಾ.

ಈಗೀಗ ಕೃಷಿಯತ್ತ ಆಸಕ್ತಿ ಹೆಚ್ಚುತ್ತಿದೆ. ಸಾಫ್ಟ್‌ವೇರ್‌ ಇಂಜಿನಿಯರ್‌ಗಳು, ಬೇರೆ ಬೇರೆ ಹುದ್ದೆಗಳಲ್ಲಿರುವ ನಗರವಾಸಿಗಳು ಹೊಸತಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರಲ್ಲ...

ಅದು ಅವರ ನೆಮ್ಮದಿಗಾಗಿ ಮಾತ್ರ. ಎಲ್ಲೋ ಹೋಗಿ ಒಂದು ಹತ್ತು ಎಕರೆ ತೆಗೆದುಕೊಂಡು ಕೃಷಿ ಮಾಡುತ್ತೇನೆ ಎಂದರೆ ಅದರಿಂದ ದೇಶದ ಸಮಸ್ಯೆ ಪರಿಹಾರ ಆಗುವುದಿಲ್ಲ. ಯಾರು ಕೃಷಿ ಭೂಮಿಯಲ್ಲಿ ಇದ್ದಾರೋ ಅವರು ಕೃಷಿ ಭೂಮಿಯಲ್ಲೇ ಉಳಿಯಬೇಕು. ಆಗಲೇ ಸಮಸ್ಯೆಗೆ ಪರಿಹಾರ.

ಮರ ಬೆಳೆದರೆ ಕಾವೇರಿ ನದಿ ಹೇಗೆ ತುಂಬಿ ಹರಿಯುತ್ತದೆ?

ಮಳೆಯಾದಾಗ ನೀರು ಭೂಮಿಯ ಒಳಗೆ ಇಂಗುವ ಬದಲು ಹರಿದು ಹೋಗುತ್ತದೆ ಹಾಗೂ ಮಳೆಯಾಗದೇ ಇದ್ದಾಗ ಭೂಮಿ ಮತ್ತು ನದಿ ಎರಡೂ ಒಣಗುತ್ತದೆ. ಆದರೆ, ಸಾಕಷ್ಟುಮರಗಳನ್ನು ನೆಟ್ಟರೆ ನೀರು ಹರಿದು ಹೋಗುವ ಬದಲು ಭೂಮಿಯೊಳಗೆ ಇಂಗುತ್ತದೆ. ಒಂದು ಅಧ್ಯಯನ ಹೇಳುವ ಪ್ರಕಾರ 10000 ಮರಗಳಿರುವ ಒಂದು ಜಮೀನು ಇದ್ದರೆ ಆ ಜಮೀನಲ್ಲಿ 38ರಿಂದ 45 ದಶಲಕ್ಷ ಲೀಟರ್‌ ನೀರು ಇಂಗುತ್ತದೆ. ಅಷ್ಟುಅಂತರ್ಜಲ ಸಂಗ್ರಹವಾಗುತ್ತದೆ. ನಾವು ಕಾವೇರಿ ಕೂಗು ಅಭಿಮಾನ ಮೂಲಕ ಉದ್ದೇಶಿಸಿರುವಂತೆ 242 ಕೋಟಿ ಮರಗಳನ್ನು ನೆಟ್ಟರೆ 9ರಿಂದ 12 ಟ್ರಿಲಿಯನ್‌ ಲೀಟರ್‌ಗಳಷ್ಟುನೀರು ಇಂಗುತ್ತದೆ. ಆ ನೀರು ಎಷ್ಟುಎಂದು ಅಂದಾಜು ಸಿಗಬೇಕಿದ್ದರೆ ಈ ಲೆಕ್ಕ ಕೇಳಿ. ಈಗ ಕಾವೇರಿ ನದಿ ಹರಿವು 21.2 ಟ್ರಿಲಿಯನ್‌ ಲೀಟರ್‌ಗಳಷ್ಟೇ. ಆ ಲೆಕ್ಕ ನೋಡಿದರೆ ಶೇ.60 ನೀರು ಮರ ನೆಟ್ಟಪ್ರದೇಶದಲ್ಲಿ ನೀರು ಸಂಗ್ರಹವಾಗಿರುತ್ತದೆ. ಆ ಸಂಗ್ರಹದಿಂದ ಕೆರೆ, ಬಾವಿ ತುಂಬಿದ ನಂತರವೂ ಕನಿಷ್ಠ ಪಕ್ಷ ಶೇ.30ರಿಂದ 40ರಷ್ಟುನೀರು ಕಾವೇರಿ ನದಿಗೆ ಸೇರುತ್ತದೆ.

ನಮ್ಮ ಜನರಿಗೆ ಒಂದು ಸಮಸ್ಯೆಯಿದೆ. ಬರ ಇದ್ದಾಗ ನೀರಿನ ಬಗ್ಗೆ ಜಾಸ್ತಿ ಕಾಳಜಿ ತೋರಿಸುತ್ತೇವೆ. ಮಳೆಯಾದಾಗ ಆ ಕಾಳಜಿಯನ್ನು ಮರೆಯುತ್ತೇವೆ. ನೀವು ಕಾವೇರಿಯ ಕೂಗು ಆಂದೋಲನ ಪ್ರಕಟಿಸಿದಾಗ ತೀವ್ರ ಬರವಿತ್ತು. ಜನರ ಆಸಕ್ತಿ ನೀರಿನ ಸಂರಕ್ಷಣೆಯಲ್ಲಿ ಹೆಚ್ಚಾಗಿತ್ತು. ಈಗ ಪ್ರವಾಹ ಬಂದು ಜನರ ಮೂಡ್‌ ಬದಲಾಗಿದೆ?

ಪ್ರವಾಹ ಮತ್ತು ಬರ ಅನ್ನುವುದು ಬೇರೆ ಬೇರೆ ಸಮಸ್ಯೆ ಅಲ್ಲ, ಒಂದೇ ಸಮಸ್ಯೆ. ಎಲ್ಲಿ ಪ್ರವಾಹ ಬರುತ್ತದೋ ಅಲ್ಲಿ ಕಡ್ಡಾಯವಾಗಿ ಬರ ಬರುತ್ತದೆ. ಯಾಕೆಂದರೆ ನೆಲಕ್ಕೆ ಬಿದ್ದ ನೀರು ಇಂಗಬೇಕಿತ್ತು. ಆದರೆ ಅದು ಓಡಿ ಹೋಗುತ್ತಿದೆ. ನೀರು ಹೋಗಿದ್ದಷ್ಟೇ ಅಲ್ಲ, ಆ ಪ್ರದೇಶವನ್ನು ನಾಶ ಮಾಡಿ ಹೋಗಿದೆ. ಹಾಗಾಗಿ ಮತ್ತೆ ಬರ ಬಂದೇ ಬರುತ್ತದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ, ಈ ವರ್ಷ ಮಳೆಯಾಗಿದೆ ಎಂದು ಅಲಕ್ಷ ಮಾಡದೇ ಮುಂದಿನ ವರ್ಷದ ಬರಕ್ಕಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕು.

ಮರ ಬೆಳೆದು ಕಡಿಯುವುದಕ್ಕೆ ಒಂದು ಕಾನೂನು ರೂಪಿಸಬೇಕು ಅನ್ನುವ ಯೋಚನೆ ನಿಮ್ಮದು. ಏನಿದು?

ಈಗಿನ ಕಾನೂನಿನ ಪ್ರಕಾರ ರೈತ ತನ್ನ ಜಮೀನಿನಲ್ಲಿ ಮರ ಬೆಳೆಯಲು ಯಾವುದೇ ಪರವಾನಗಿ ಬೇಡ. ಆದರೆ, ತನ್ನದೇ ಜಮೀನಿನ ಮರ ಕಡಿಯಲು ಸಾಕಷ್ಟುಪರದಾಡಬೇಕಾಗುತ್ತದೆ. ಹೀಗಾದರೆ, ಯಾವ ರೈತರು ಅರಣ್ಯ ಕೃಷಿ ಮಾಡಿ ಮರಗಳನ್ನು ಬೆಳೆಸುತ್ತಾರೆ? ಮರಗಳನ್ನು ಬೆಳೆದು ನಂತರ ಕಡಿದು ಮಾರಿದರೆ ಲಾಭ ಸಿಗುತ್ತದೆ ಎಂದರೆ ರೈತರು ಮರಗಳನ್ನು ಬೆಳೆಸುತ್ತಾರೆ, ಕಡಿಯುತ್ತಾರೆ, ದುಡ್ಡು ಗಳಿಸುತ್ತಾರೆ, ಮತ್ತೆ ಮರಗಳನ್ನು ಬೆಳೆಸುತ್ತಾರೆ. ಹೀಗೆ ಕೃಷಿ ಚಕ್ರ ಸಾಗುತ್ತದೆ. ಇದಕ್ಕೆ ಸರ್ಕಾರ ತನ್ನ ಈಗಿನ ಕಾನೂನಿಲ್ಲಿ ಸ್ವಲ್ಪ ಬದಲಾವಣೆ ಮಾಡಿ ತನ್ನ ಜಮೀನಿನಲ್ಲಿ ಬೆಳೆದ ಮರಗಳನ್ನು ಕಡಿದು ಮಾರಲು ಅನುವು ಮಾಡಿಕೊಡಬೇಕು. ಆಗ, ರೈತರು ತಮ್ಮ ಜಮೀನಿನಲ್ಲಿ ಮರ ಬೆಳೆಯಲು ಆಸಕ್ತಿ ತೋರಿಸುವ ಜೊತೆಗೆ ಸರ್ಕಾರಿ ಕಾಡು ಕಡಿಯಲು ಹೋಗುವುದಿಲ್ಲ. ಸರಕಾರ ಇದನ್ನು ಅರ್ಥ ಮಾಡಿಕೊಂಡರೆ, ಮನಸ್ಸು ಮಾಡಿದರೆ ಎಲ್ಲಾ ಸಾಧ್ಯವಿದೆ. ದೇಶಕ್ಕೆ ಏನು ಒಳ್ಳೆಯದು ಆಗುತ್ತದೋ ಅದನ್ನು ಮಾಡುವುದೇ ಸರ್ಕಾರದ ಕೆಲಸ ಅಲ್ಲವೇ? ಕರ್ನಾಟಕ ಸರ್ಕಾರ ಕಾವೇರಿಯ ಕೂಗು ಆಂದೋಲನಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂಬ ನಂಬಿಕೆ ನಮಗಿದೆ.

Follow Us:
Download App:
  • android
  • ios