ನವದೆಹಲಿ: ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೇ ತನ್ನ ಲೈಂಗಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾನೆ ಎಂದು ಏರ್‌ ಇಂಡಿಯಾ ಪೈಲಟ್‌ವೊಬ್ಬರು, ಹಿರಿಯ ಕ್ಯಾಪ್ಟನ್‌ ವಿರುದ್ಧ ದೂರು ನೀಡಿದ್ದಾಳೆ. 

ಈ ಹಿನ್ನೆಲೆಯಲ್ಲಿ ಪೈಲಟ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ಕ್ಯಾಪ್ಟನ್‌ ವಿರುದ್ಧ ಏರ್‌ ಇಂಡಿಯಾ ತನಿಖೆ ಕೈಗೊಂಡಿದೆ. ‘ಮೇ 5ರಂದು ಪೈಲಟ್‌ ತರಬೇತಿ ಬಳಿಕ ಕ್ಯಾಪ್ಟನ್‌ ನನ್ನನ್ನು ಹೈದರಾಬಾದ್‌ನ ರೆಸ್ಟೋರೆಂಟ್‌ಗೆ ರಾತ್ರಿಯ ಊಟಕ್ಕೆ ಆಹ್ವಾನಿಸಿದ್ದರು. 

ಅವರೊಂದಿಗೆ ನಾನು ಕೆಲವು ವಿಮಾನಗಳನ್ನು ಹಾರಿಸಿದ್ದರಿಂದ ಊಟಕ್ಕೆ ಬರಲು ನಾನು ಒಪ್ಪಿಕೊಂಡಿದ್ದೆ. ನಾವು ಸುಮಾರು 8 ಗಂಟೆಗೆ ರೆಸ್ಟೋರೆಂಟ್‌ಗೆ ಹೋದೆವು. ಆಗ ಅವರು ನನ್ನ ವೈವಾಹಿಕ ಜೀವನದ ಬಗ್ಗೆ ಪ್ರಸ್ತಾಪಿಸಿದರು. ಪತಿಯಿಂದ ದೂರ ಇದ್ದುಕೊಂಡು ಎಷ್ಟುದಿನ ಹೇಗೆ ನಿಭಾಯಿಸುತ್ತೀಯ. ನಿನಗೆ ಪ್ರತಿದಿನವೂ ಸೆಕ್ಸ್‌ ಬೇಕೆಂದು ಅನಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದರು. 

ಕೂಡಲೇ ನಾನು ಅಲ್ಲಿಂದ ಎದ್ದು ಹೊರಗೆ ಬಂದೆ ಎಂದು ಮಹಿಳಾ ಪೈಲಟ್‌ ದೂರಿನಲ್ಲಿ ತಿಳಿಸಿದ್ದಾಳೆ. ಈ ಸಂಗತಿ ಗಮನಕ್ಕೆ ಬರುತ್ತಿದ್ದಂತೆ ಕ್ಯಾಪ್ಟನ್‌ ವಿರುದ್ಧ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಏರ್‌ ಇಂಡಿಯಾದ ವಕ್ತಾರರೊಬ್ಬರು ತಿಳಿಸಿದ್ದಾರೆ.