ನವದೆಹಲಿ(ಡಿ.12): ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ವಿಶ್ಲೇಷಕರ ತರಹೇವಾರಿ ವಿಶ್ಲೇಷಣೆಗಳ ಮೂಲಕ ದೇಶದ ರಾಜಕೀಯ ಭವಿಷ್ಯದ ಕುರಿತು ಚಿಂತನ ಮಂಥನ ನಡೆಸಿದ್ದಾರೆ.

ಅದರಲ್ಲೂ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಡ್ ರಾಜ್ಯಗಳಲ್ಲಿನ ಕಾಂಗ್ರೆಸ್ ಗೆಲುವಿನ ಮೂಲಕ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅದೃಷ್ಟ ಖುಲಾಯಿಸಿದೆ. ಇಷ್ಟು ದಿನ ರಾಹುಲ್ ಗಾಂಧಿ ಓರ್ವ ಪ್ರಬುದ್ಧ ರಾಜಕಾರಣಿಯಲ್ಲ ಅಂತಿದ್ದವರೆಲ್ಲಾ, ಇದೀಗ ರಾಹುಲ್ ಅವರನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆ ಎಂದು ಹೇಳುತ್ತಿದ್ದಾರೆ.

ಆದರೆ ರಾಹುಲ್ ಗಾಂಧಿ ಮಾತ್ರ ತಮ್ಮ ಗೆಲುವಿನ ಕ್ರೆಡಿಟ್‌ನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿರುವುದು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಮೂರೂ ರಾಜ್ಯಗಳ ಗೆಲವಿನ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್, ತಾವೊಬ್ಬ ಪ್ರಬುದ್ಧ ರಾಜಕಾರಣಿಯಾಗಿ ಹೊರಹೊಮ್ಮಲು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಹೇಳಿದ್ದಾರೆ.

ಮೋದಿ ಗುಣಗಾನ ಮಾಡುತ್ತಲೇ ಕಾಲೆಳೆದಿರುವ ರಾಹುಲ್, ತಮ್ಮ ಮಾತಿನಲ್ಲಿ ಮೋದಿ ಪರವಾಗಿ ನಿಜಕ್ಕೂ ಹೊಗಳಿಕೆಯ ಮಾತುಗಳನ್ನಾಡಿರುವುದು ಸುಳ್ಳಲ್ಲ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ 'ನಾನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಕಷ್ಟು ಪಾಠ ಕಲಿತಿದ್ದೇನೆ' ಎಂದು ಹೇಳಿರುವ ರಾಹುಲ್, ಪ್ರಮುಖವಾಗಿ ರಾಜಕೀಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಅವರಿಂದಲೇ ಅರಿತೇ ಎಂದು ಹೇಳಿದ್ದಾರೆ.

ರಾಹುಲ್ ಧ್ವನಿಯಲ್ಲಿ ವ್ಯಂಗ್ಯವಿತ್ತಾದರೂ, ಅದರಲ್ಲಿ ಸತ್ಯ ಕೂಡ ಅಡಗಿತ್ತು. ಪ್ರಮುಖವಾಗಿ ದೇಶದ ಜನರ ನಾಡಿ ಮಿಡಿತವನ್ನು ಅರಿತು ಕೆಲಸ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿ ನಿಜಕ್ಕೂ ರಾಹುಲ್ ಅವರಿಗೆ ಇಂಪ್ರೆಸ್ ಮಾಡಿರಲಿಕ್ಕೆ ಸಾಕು.

ರಾಹುಲ್ ಬದಲಾಗಿದ್ದು ಹೇಗೆ?:

2014 ರ ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲು ಮತ್ತು ಆ ನಂತರದ ಪ್ರತಿ ವಿಧಾನಸಭೆಯಲ್ಲೂ ಸೋಲುಂಡು ಕಾಂಗ್ರೆಸ್ ಬಳಲಿ ಬೆಂಡಾಗಿತ್ತು. ಎಲ್ಲಾ ಕಡೆಯಿಂದಲೂ ಸೋಲನ್ನೇ ಕಾಣುತ್ತಿದ್ದ ರಾಹುಲ್ ತಮ್ಮ ಕಾರ್ಯ ವೈಖರಿಯನ್ನು ಬದಲು ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದರು.

ಅದರಂತೆ ಕಳೆದ ವರ್ಷದ ಅಂತ್ಯದಲ್ಲಿ ನಡೆದ ಕರ್ನಾಟಕ ವಿಧಾನಸಭೆಯಲ್ಲಿ ರಾಹುಲ್ ನಿಜಕ್ಕೂ ಹೊಸ ಅವತಾರದಲ್ಲಿ ಅಖಾಡಕ್ಕೆ ಇಳಿದಿದ್ದರು. ರಾಜ್ಯದ ಪ್ರಮುಖ ಗುಡಿ ಗುಂಡಾಂತರಗಳನ್ನು ಸುತ್ತಿದ ರಾಹುಲ್, ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ತಮ್ಮ ಹಿಂದೂ ಐಡೆಂಟಿಟಿಯನ್ನು ತುಸು ಜೋರಾಗಿಯೇ ಬಿಂಬಿಸತೊಡಗಿದರು.

ಈಗಿನ ರಾಜಸ್ಥಾನ, ಮಧ್ಯಪ್ರದೇಶ ಚುನಾವಣೆ ಸಂದರ್ಭದಲ್ಲೂ ರಾಹುಲ್ ಪ್ರಮುಖ ಮಂದಿರಗಳಿಗೆ ಭೇಟಿ ನೀಡಿ ತಾವೊಬ್ಬ ನೈಜ ಹಿಂದೂ ಎಂಬುದನ್ನು ಬಿಂಬಿಸುವಲ್ಲಿ ಯಶಸ್ವಿಯಾದಾರು.

ಜನರೊಂದಿಗಿನ ಸಂಪರ್ಕ:

ಹಾಗೆ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರೊಂದಿಗೆ ಇರುವ ಸಂಪರ್ಕ ನಿಜಕ್ಕೂ ಅದ್ಭುತವಾದದು. ತಮ್ಮ ಪ್ರತಿ ಭಾಷಣದಲ್ಲೂ ತಮ್ಮ ಆಪ್ತ ನುಡಿಗಳಿಂದಲೇ ಜನರನ್ನು ಮೋಡಿ ಮಾಡುವ ಕಲೆ ಅವರಿಗೆ ಗೊತ್ತಿದೆ.

ಪ್ರಧಾನಿ ಮೋದಿ ಅವರಿಂದ ಈ ಗುಣವನ್ನು ರಾಹುಲ್ ಗಾಂಧಿ ಅಳವಡಿಸಿಕೊಂಡಂತಿದೆ. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಜನರೊಂದಿಗೆ ಸಂಪರ್ಕ ಬೆಳೆಸಿದ ರೀತಿ ನಿಜಕ್ಕೂ ಪ್ರಶಂಸನೀಯ.

ಮೋದಿಯಿಂದ ಏನು ಮಾಡಬಾರದೆಂದು ಕಲಿತ ರಾಹುಲ್:

ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದಂತೆ ರಾಹುಲ್ ಪ್ರಧಾನಿ ನರೇಂದ್ರ ಮೋದಿ ಅವರಿಂದ ಏನು ಮಾಡಬಾರದು ಎಂಬುದನ್ನು ಕಲಿತಿದ್ದಾರಂತೆ. ಜನರ ಮನಸ್ಸಿನಲ್ಲೇನಿದೆ ಎಂಬುದನ್ನು ಅರಿಯುವಲ್ಲಿ ಮೋದಿ ವಿಫಲವಾದರು ಎಂದು ಈ ವೇಳೆ ರಾಹುಲ್ ಹೇಳಿದ್ದರು.

ಅದೇನೆ ಇರಲಿ ರಾಹುಲ್ ಓರ್ವ ಪ್ರಬುದ್ಧ ರಾಜಕಾರಣಿಯಾಗುವತ್ತ ನಿಜಕ್ಕೂ ದಾಪುಗಾಲು ಇಟ್ಟಿದ್ದು, ರಾಹುಲ್ ಅವರನ್ನು ಹೀಯಾಳಿಸುತ್ತಾ ಮೈಮರೆತರೆ ನಿಜಕ್ಕೂ ಬಿಜೆಪಿಗೆ ಅವರು ಮರ್ಮಾಘಾತ ನೀಡುವಲ್ಲಿ ಅನುಮಾನವಿಲ್ಲ. ಆದರೆ ರಾಹುಲ್ ಅವರ ಈ ಪ್ರಬುದ್ಧತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಯೂ ಇದೆ ಎಂಬುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತದೆ.

ಪಂಚ ಫಲಿತಾಂಶ: ಯಾರ್ಯಾರಿಗೆ ಎಷ್ಟೆಷ್ಟು?..ಸಂಪೂರ್ಣ ವಿವರ

ಗೆದ್ದಿರುವ ಕಾಂಗ್ರೆಸ್‌ಗೆ ಈಗ ಹೊಸ ತಲೆನೋವು!

ಕಾಂಗ್ರೆಸ್‌ ಮುಕ್ತ ಭಾರತ ಸದ್ಯಕ್ಕೆ ಅಸಾಧ್ಯ, ಲೋಕಸಭೆ ಚುನಾವಣೆ ಸುಲಭವಿಲ್ಲ!