ನವದೆಹಲಿ(ಡಿ.11): ಅಂತೂ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಯಾರೂ ಊಹಿಸದ ರೀತಿಯಲ್ಲಿ ಪಂಚ ರಾಜ್ಯಗಳ ಫಲಿತಾಂಶ ಹೊರ ಬಿದ್ದಿದ್ದು, ಇಡೀ ದೇಶವೇ ಅಚ್ಚರಿಯಲ್ಲಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡದ ಕೆಲ ಕ್ಷೇತ್ರಗಳ ಫಲಿತಾಂಶ ಇನ್ನು ಹೊರಬೀಳಬೇಕಿದೆ.

ಕಳೆದ ನಾಲ್ಕುವರೆ ವರ್ಷಗಳಿಗೂ ಹೆಚ್ಚು ಕಾಲ ಪ್ರಧಾನಿ ನರೇಂದ್ರ ಮೋದಿ ಅವರ ಹಿಂದೆ ಗಟ್ಟಿಯಾಗಿ ನಿಂತಿದ್ದ ದೇಶದ ಮತದಾರ, ಇದೀಗ ಮೋದಿ ಅವರಿಂದ ಒಂದೊಂದೆ ಹೆಜ್ಜೆ ಹಿಂದೆ ಸರಿಯುತ್ತಿರುವಂತೆ ಭಾಸವಾಗುತ್ತಿದೆ.

ಹೌದು, ಬಿಜೆಪಿಯ ಹಾರ್ಟ್ ಲ್ಯಾಂಡ್ ಎಂದೇ ಪರಿಗಣಿಸಲ್ಪಡುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡ್ ದಲ್ಲಿ ಬಿಜೆಪಿ ನಿಜಕ್ಕೂ ಮಕಾಡೆ ಮಲಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಚುನಾವಣೆ ಎದುರಿಸಿದ್ದ ಬಿಜೆಪಿ ಮೂರು ರಾಜ್ಯಗಳನ್ನು ಕಳೆದುಕೊಂಡು ಭಾರೀ ಮುಖಭಂಗ ಅನುಭವಿಸಿದೆ.

ಮೋದಿ ಮತ್ತೆ ಅಧಿಕಾರಕ್ಕೇರಲು ಏನು ಮಾಡಬೇಕು? ಅದ್ಭುತ ಸಲಹೆ

 

ರಾಜಸ್ಥಾನ

ಒಟ್ಟು ಕ್ಷೇತ್ರಗಳು:199

ಕಾಂಗ್ರೆಸ್: 101

ಬಿಜೆಪಿ: 73

ಬಿಎಸ್‌ಪಿ: 6

ಇತರರು:19

ಸಂಭಾವ್ಯ ಮುಖ್ಯಮಂತ್ರಿ: ಸಚಿನ್ ಪೈಲಟ್

ಮಧ್ಯಪ್ರದೇಶ

ಒಟ್ಟು ಕ್ಷೇತ್ರಗಳು:-230

ಕಾಂಗ್ರೆಸ್: 115

ಬಿಜೆಪಿ: 108

ಇತರರು:7

ಸಂಭಾವ್ಯ ಮುಖ್ಯಮಂತ್ರಿ: ಕಮಲನಾಥ್

18  ರಿಂದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕೇವಲ 800 ಮತಗಳ ಅಂತರದಿಂದ ಗೆದ್ದಿದ್ದಾರೆ.

ಛತ್ತೀಸ್ ಗಡ್

ಒಟ್ಟು ಕ್ಷೇತ್ರಗಳು:90

ಕಾಂಗ್ರೆಸ್: 68

ಬಿಜೆಪಿ:16

ಬಿಎಸ್‌ಪಿ:6

ತೆಲಂಗಾಣ

ಒಟ್ಟು ಕ್ಷೇತ್ರಗಳು: 119

ಟಿಆರ್‌ಎಸ್‌: 88

ಕಾಂಗ್ರೆಸ್:21

ಬಿಜೆಪಿ:1

ಇತರರು:9

ಸಂಭಾವ್ಯ ಮುಖ್ಯಮಂತ್ರಿ: ಕೆಸಿ ರಾವ್

 ಮಿಝೋರಾಂ

ಒಟ್ಟು ಕ್ಷೇತ್ರಗಳು: 40

ಎಂಎನ್‌ಎಫ್: 26

ಕಾಂಗ್ರೆಸ್: 5

ಬಿಜೆಪಿ: 1

ಇತರರು:8

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದಲ್ಲಿ ವಸುಂಧರಾ ರಾಜೇ ಮತ್ತು ಛತ್ತೀಸ್ ಗಡ್ ದಲ್ಲಿ ರಮಣಸಿಂಗ್ ಬಿಜೆಪಿ ಚಹರೆಯಾಗಿದ್ದರೂ, ಅಸಲಿ ಮುಖ ಮಾತ್ರ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೇ ಆಗಿದ್ದರು.

ಆದರೆ ಮೂರೂ ರಾಜ್ಯಗಳಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದು, ಮಧ್ಯಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಗೆ ತುಸು ಟಕ್ಕರ್ ನೀಡಿದೆ. ಉಳಿದಂತೆ ರಾಜಸ್ಥಾನ ಮತ್ತು ಛತ್ತೀಸ್ ಗಡ್ ದಲ್ಲಿ ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಕೊಚ್ಚಿ ಹೋಗಿದೆ.

ಸೋಲಿಗೆ ಕಾರಣ?: 2019ರ ಲೋಕಸಭೆ ಚುನಾವಣೆಗೆ ಸೆಮಿ ಫೈನಲ್ ಎಂದೇ ಪರಿಗಣಿಸಲ್ಪಟ್ಟಿದ್ದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು, ಕಾಂಗ್ರೆಸ್ ಗೆಲುವಿಗೆ ರಾಜಕೀಯ ವಿಶ್ಲೇಷಕರು ತಮ್ಮದೇ ಆದ ಕಾರಣಗಳನ್ನು ಮುಂದಿಡುತ್ತಿದ್ದಾರೆ. 

ಪ್ರಮುಖವಾಗಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಎರಡೂ ಪಕ್ಷಗಳಿಂದ ಯಾವುದೇ ರೀತಿಯ ಗಂಭೀರ ಚರ್ಚೆಗಳು ಪ್ರಸ್ತಾಪವಾಗಲೇ ಇಲ್ಲ ಎಂಬುದು ತಜ್ಞರ ಅಭಿಮತ.ಉದಾಹರಣೆಗೆ ರಾಜಸ್ಥಾನದಲ್ಲಿ ಚುನಾವಣೆ ಪ್ರಚಾರ ನಡೆಸಿದ್ದ ಪ್ರಧಾನಿ ಮೋದಿ, ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿಧವೆ ಎಂದು ಕರೆದಿದ್ದು, ಪಕ್ಷಕ್ಕೆ ಭಾರೀ ನಷ್ಟ ಉಂಟು ಮಾಡಿದೆ ಎಂಬ ಮಾತುಗಳು ಬಿಜೆಪಿಯಲ್ಲೇ ಕೇಳಿ ಬರುತ್ತಿದೆ.

ಅದರಲ್ಲೂ ಅಪನಗದೀಕರಣ, ಜಿಎಸ್ ಟಿ, ಬೆಲೆ ಏರಿಕೆ ಮತ್ತು ಭಯೋತ್ಪಾದಕ ದಾಳಿಗಳ ಕುರಿತು ಇಡೀ ದೇಶ ಮಾತನಾಡುತ್ತಿರುವಾಗ ಬಿಜೆಪಿ ರಾಮ ಮಂದಿರ, ಭಾರತ್ ಮಾತಾ ಕೀ ಜೈ ಎಂಬಂತ ಘೋಷಣೆಗಳ ವಿವಾದದಲ್ಲೇ ಚುನಾವಣೆ ಎದುರಿಸಿದ್ದು ಆ ಪಕ್ಷಕ್ಕೆ ಮುಳುವಾಯಿತು.

ಇನ್ನು ಕಾಂಗ್ರೆಸ್ ಇದೀಗ ಗೆಲುವಿನ ಸಂಭ್ರಮದಲ್ಲಿದ್ದರೂ, ಬೇಡದ ವಿಷಯಗಳ ಕುರಿತು ಚರ್ಚೆ ನಡೆಸಿ ಚುನಾವಣೆ ಪ್ರಚಾರದ ಗಾಂಭೀರ್ಯತೆ ಕಡಿಮೆ ಮಾಡಿದ್ದರಲ್ಲಿ ಎರಡು ಮಾತಿಲ್ಲ. ಪ್ರಮುಖವಾಗಿ ಪ್ರಧಾನಿ ಮೋದಿ ಭಾರತ್ ಮಾತಾ ಕೀ ಜೈ ಹೇಳಬಾರದು ಎಂಬ ರಾಹುಲ್ ಮಾತು, ಮೋದಿಗಿಂತ ತಾನು ಉತ್ತಮ ಹಿಂದೂ ಎಂಬ ಮಾತುಗಳು ಚುನಾವಣಾ ಗಾಂಭೀರ್ಯತೆಗೆ ಧಕ್ಕೆ ತಂದವು. 

ಆದರೆ ನೋಟ್ ಬ್ಯಾನ್, ಜಿಎಸ್ ಟಿ, ಬೆಲೆ ಏರಿಕೆ ಮತ್ತು ಗಡಿಯಲ್ಲಿ ಉಗ್ರರ ಉಪಟಳದಂತ ಗಂಭೀರ ವಿಷಯಗಳನ್ನು ಪ್ರಸ್ತಾಪಿಸುತ್ತಾ, ಕಾಂಗ್ರೆಸ್ ಮತದಾರರನ್ನು ಸೆಳೆಯುವಲ್ಲಿ ಸಫಲವಾಗಿದ್ದು ಕೂಡ ಅಷ್ಟೇ ಸತ್ಯ. 

ಬಿಜೆಪಿ ಗೆಲುವಿನ ಕುದುರೆ ಕಟ್ಟಿಹಾಕಿದ್ದು ಕರ್ನಾಟಕ.. ಅಂಕಿ ಅಂಶ ಇಲ್ಲಿದೆ..

ನೋಟ್ ಬ್ಯಾನ್ ಮೋದಿ ಮೇಲಿನ ಸಿಟ್ಟಿಗೆ ಕಾರಣ?: ಅಪನಗದೀಕರಣ ಮತ್ತು ಜಿಎಸ್ ಟಿ ಇಂದ ರೋಸಿ ಹೋಗಿದ್ದ ಮಧ್ಯಮ ಮತ್ತು ಕೆಳ ವರ್ಗದ ಜನತೆ ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನೋಟ್ ಬ್ಯಾನ್ ನಿಂದಾಗಿ ದೇಶದ ಕೆಳ ವರ್ಗ ಭಾರೀ ಕಷ್ಟಗಳನ್ನು ಎದುರಿಸುತ್ತಿದ್ದು, ಇದು ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ಮತಗಳಾಗಿ ಪರಿವರ್ತಿತವಾಗಿವೆ ಎನ್ನಲಾಗಿದೆ.

ಸಂದೇಶ ಏನು?: ಒಟ್ಟಿನಲ್ಲಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಕೇಂದ್ರದ ಆಟಳಿತಾರೂಢ ಬಿಜೆಪಿಗೆ ಕಠಿಣ ಸಂದೇಶವೊಂದನ್ನು ಕಳುಹಿಸಿದೆ. ಕೇವಲ ಬಾಯಿ ಮಾತಿನ ಅಚ್ಛೇ ದಿನ್ ಬದಲು ನಿಜಕ್ಕೂ ಅಚ್ಛೇ ದಿನ್ ತರಬಹುದಾದಂತ ಕೆಲಸವಾಗಲಿ ಎಂಬುದೇ ಮತದಾರನ ಅಸಲಿ ಸಂದೇಶ.

ಇನ್ನು ವಿಧಾನಸಭೆ ಚುನಾವಣೆ ಫಲಿತಾಂಶದ ಗೆಲುವಿನಿಂದ ಬೀಗುತ್ತಿರುವ ಕಾಂಗ್ರೆಸ್ ಗೂ ಕೂಡ ಮತದಾರ ಸಂದೇಶ ಕಳುಹಿಸಿದ್ದಾನೆ. ಗೆಲುವಿನಿಂದ ಬೀಗದೇ ನಿಜಕ್ಕೂ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ 2019ರಲ್ಲಿ ‘ಕೈ’ ಹಿಡಿಯುವ ಸಂದೇಶ ಮತದಾರನಿಂದ ಹೊರ ಬಿದ್ದಿದೆ.