ನವದೆಹಲಿ(ಜು.29): ಹ್ಯಾಕರ್ಸ್ ಗಳಿಗೆ ಸವಾಲೆಸೆಯಲು ಹೋಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಪೇಚಿಗೆ ಸಿಲುಕಿದ್ದಾರೆ. ತಮ್ಮ ಪೂರ್ಣ ಆಧಾರ್ ನಂಬರ್ ಅನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದ ಶರ್ಮಾ, ಈ ನಂಬರ್ ಸಹಾಯದಿಂದ ತಮಗೆ ಹೇಗೆ ಹಾನಿ ಮಾಡಲು ಸಾಧ್ಯ ಎಂಬುನ್ನು ನೋಡುವುದಾಗಿ ಹ್ಯಾಕರ್ ಗಳಿಗೆ ಸವಾಲು ಎಸೆದಿದ್ದರು.

ಆಧಾರ್ ಕಾರ್ಡ್ ದಾರರ ಹಿತಾಸಕ್ತಿ ಕಾಪಾಡಲು ಆಧಾರ್ ಕಾಯ್ದೆಗೆ ತಿದ್ದುಪಡಿ ತರಲು, ನ್ಯಾ.ಶ್ರೀಕೃಷ್ಣ ಸಮಿತಿ ಶಿಫಾರಸು ಮಾಡಿದ ಬೆನ್ನಲ್ಲೇ ಶರ್ಮಾ ಈ ಟ್ವೀಟ್ ಮಾಡಿದ್ದರು. ಶರ್ಮಾ ಅವರ ಈ ನಡೆ ಟ್ರೋಲ್ ಗೆ ಕಾರಣವಾಗಿತ್ತು. ಶರ್ಮಾ ಅವರ ಸವಾಲು ಸ್ವೀಕರಿಸಿದ್ದ ವ್ಯಕ್ತಿಯೋರ್ವ ಶರ್ಮಾ ಅವರ ಆಧಾರ್ ನಂಬರ್ ಬಳಸಿಕೊಂಡು ಅವರ ಫೋನ್ ನಂಬರ್ ಪತ್ತೆ ಹಚ್ಚಿ ಅದನ್ನು ರಿಟ್ವೀಟ್ ಮಾಡಿದ್ದಾನೆ.

ಇಷ್ಟೇ ಅಲ್ಲದೇ ಫ್ರೆಂಚ್ ಭದ್ರತಾ ತಜ್ಞ ಹಾಗೂ ಆಧಾರ್ ವಿಮರ್ಷಕ ಎಲಿಯಟ್ ಆ್ಯಂಡ್ರಸನ್, ಶರ್ಮಾ ಅವರ ಮೊಬೈಲ್ ನಂಬರ್, ಪ್ಯಾನ್ ಕಾರ್ಡ್ ನಂಬರ್, ಹಾಗೂ ಪರ್ಯಾಯ ಫೋನ್ ನಂಬರ್, ಇಮೇಲ್ ಐಡಿ, ಬಳಕೆ ಮಾಡುತ್ತಿರುವ ಫೋನ್ ಕುರಿತ ಮಾಹಿತಿ ಹಾಗೂ ವಾಟ್ಸಪ್ ಪ್ರೊಫೈಲ್ ಫೋಟೋ ಸೇರಿ ಇನ್ನಿತರೆ ಹಲವಾರು ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. 

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕ್ಕೆ ನೀಡಿದ ಮೊಬೈಲ್ ಸಂಖ್ಯೆಯೊಂದಿಗೆ ಇತರರ ಸಹಾಯದೊಂದಿಗೆ ಇನ್ನಿತರೆ ಮಾಹಿತಿಗಳನ್ನು ಕಲೆ ಹಾಕಿದ್ದು,  ನಾನು ಇದನ್ನು ಇಲ್ಲಿಗೆ ನಾನು ನಿಲ್ಲಿಸುತ್ತೇನೆ. ಆಧಾರ್ ಕಾರ್ಡ್ ನಂಬರ್ ನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬಾರದು ಎಂಬುದು ನಿಮಗೆ ಅರ್ಥವಾಗಿದ್ದರೆ ಸಾಕು ಎಂದು ಎಲಿಯಟ್ ಟ್ವೀಟ್ ಮಾಡಿದ್ದಾರೆ.