ಬೆಂಗಳೂರು[ಜು. 26]  ಸಿಎಂ ಆಗಿ ಬಿಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ನಂತರ ಜೆಡಿಎಸ್ ಪಾಳಯದಲ್ಲೂ ಬೆಳವಣಿಗೆಗಳಾಗಿವೆ.  ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್​ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು  ಸಭೆಯಲ್ಲಿ ಶಾಸಕ ಸುರೇಶ್ ಗೌಡ, ಸಾ.ರಾ ಮಹೇಶ್, ರಾಮಸ್ವಾಮಿ, ಕೃಷ್ಣ ರೆಡ್ಡಿ, ನಿಸರ್ಗ ನಾರಾಯಣಸ್ವಾಮಿ, ಡಾ.ಕೆ ಅನ್ನದಾನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಬಿಜೆಪಿಗೆ ಬಾಹ್ಯ ಬೆಂಬಲ ನೀಡುವಂತೆ ಕೆಲ ಶಾಸಕರು ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಸದ್ಯ ಪಕ್ಷದ ಶಾಸಕರ ಅಭಿಪ್ರಾಯ ಸಂಗ್ರಹ ಮಾಡ್ತಿರೋ ಕುಮಾರಸ್ವಾಮಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕೇ ಇಲ್ಲವೇ ಬಿಜೆಪಿಗೆ ಬಾಹ್ಯ ಬೆಂಬಲ ನೀಡಬೇಕೆ ಅನ್ನೋದರ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆ ಇದೆ.

ಹೆಸರನ್ನೇ ಬದಲಾಯಿಸಿಕೊಂಡ ಯಡಿಯೂರಪ್ಪ, ಏನು ಕಾರಣ?

ಸಭೆ ನಂತರ ಮಾತನಾಡಿದ ಮಾಜಿ ಸಚಿವ ಜಿ ಟಿ ದೇವೇಗೌಡ, ಇಂದು ಎಲ್ಲಾ ಶಾಸಕರ ಜೊತೆ ನಮ್ಮ ನಾಯಕರು ಸಭೆ ನಡೆಸಿದರು. ಕೆಲ ಶಾಸಕರು ಬಿಜೆಪಿಗೆ ಬೆಂಬಲ ಕೊಡುವ ಬಗ್ಗೆ ಒತ್ತಡ ಹಾಕಿದರು. ಇನ್ನೂ ಕೆಲವರು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದರು. ವಿರೋಧ ಪಕ್ಷದಲ್ಲಿ ಕುಳಿತು ಕೊಂಡು ಪಕ್ಷ ಸಂಘಟನೆ ಮಾಡಬೇಕು ಎಂದರು ಎಂದು ತಿಳಿಸಿದರು.

ಅಂತಿಮವಾಗಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದನ್ನು ಕುಮಾರಸ್ವಾಮಿ ಯವರಿಗೆ ಬಿಟ್ಟಿದ್ದೇವೆ. ಏನೇ ತೀರ್ಮಾನ ಆದರೂ ನಾವೆಲ್ಲರೂ ಒಟ್ಟಾಗಿ ಇರ್ತೇವೆ ಎಂದು ಹೇಳಿದರು. ಸೋಮವಾರ ಸದನದಲ್ಲಿ ಬಿಜೆಪಿಗೆ ಬೆಂಬಲ ಕೊಡ್ತೀರಾ ಎಂಬ ಪ್ರಶ್ನೆಗೆ, ನನಗೆ ಗೊತ್ತಿಲ್ಲ, ಕುಮಾರಸ್ವಾಮಿ ಯವರೇ ಬರ್ತಾರೆ, ಅವರನ್ನೇ ಕೇಳಿ ಎಂದು  ಜಿಟಿಡಿ ಹೊರಟರು.