ಕುಂದಾಪುರ[ಏ.29]: ಮುಂಬೈಯಿಂದ ಕೇರಳಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಭಾನುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಸಂಭಾವ್ಯ ಭಾರಿ ದುರಂತವೊಂದು ಕೂದಲೆಳೆಯ ಅಂತರದಿಂದ ತಪ್ಪಿದೆ.

ಇಲ್ಲಿನ ಬೈಂದೂರು ರೈಲ್ವೆ ನಿಲ್ದಾಣದಿಂದ ಅನತಿ ದೂರದಲ್ಲಿರುವ ಕಂಬದಕೋಣೆ ಗ್ರಾಮದ ಮೂಲಕ ಮಧ್ಯರಾತ್ರಿ ಕಳೆದು 1.20ಕ್ಕೆ ದೆಹಲಿಯಿಂದ ಮುಂಬೈ ಮೂಲಕ ಎರ್ನಾಕುಲಂ ಕಡೆಗೆ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ (12618) ರೈಲು ಹಾದು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ರೈಲಿನ ಎಸಿ ಕೋಚ್‌ನಲ್ಲಿ ಈ ಬೆಂಕಿ ಕಾಣಿಸಿಕೊಂಡಿತ್ತು. ರಾತ್ರಿ ವೇಳೆ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದರಿಂದ ಬೆಂಕಿ ಹತ್ತಿಕೊಂಡದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಬೋಗಿಯಲ್ಲಿ ತಿರುಗಾಡುತ್ತಿದ್ದ ರೈಲಿನ ಟಿ.ಸಿ.ಯೊಬ್ಬರು ಎಸಿ ಕೋಚ್‌ನ ಬಾಗಿಲಿನ ಮೂಲಕ ಬೆಂಕಿ ಹೊರಗೆ ಚಿಮ್ಮುತ್ತಿದ್ದನ್ನು ಗಮನಿಸಿದರು.

ಅವರು ತಕ್ಷಣ ರೈಲಿನ ಚಾಲಕರಿಗೆ ಮಾಹಿತಿ ನೀಡಿ, ಅವರು ಸೇನಾಪುರ ಮತ್ತು ಬಿಜೂರು ಗ್ರಾಮದ ಮಧ್ಯೆ ರೈಲನ್ನು ನಿಲ್ಲಿಸಿದರು. ತಕ್ಷಣ ರೈಲಿನಲ್ಲಿದ್ದ ಅಗ್ನಿಶಾಮಕ ಉಪಕರಣಗಳ ಮೂಲಕ ಬೆಂಕಿಯನ್ನು ನಂದಿಸಲಾಗಿದೆ. ಬೋಗಿಯೊಳಗಿನ ಒಂದೆರಡು ಹಾಸಿಗೆಗಳಿಗೆ ಬೆಂಕಿ ತಗುಲಿ ಸ್ವಲ್ಪಮಟ್ಟಿನ ಹಾನಿಯಾಗಿದೆ, ಬಿಟ್ಟರೆ ಬೇರೆ ಯಾವುದೇ ಅಪಾಯ ಸಂಭವಿಸಿಲ್ಲ. ನಂತರ ಈ ಬೋಗಿಯನ್ನು ಪ್ರತ್ಯೇಕಿಸಿ, ರೈಲನ್ನು ಬಿಜೂರು ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಾಯಿತು. ಇದರಿಂದ ಸುಮಾರು 2 ಗಂಟೆಗಳ ಕಾಲ ರೈಲು ಸಂಚಾರ ವಿಳಂಬವಾಯಿತು.

ಮಹಿಳೆಗೆ ಕಂಡಿತೇ?:

ಕುಂದಾಪುರ ನಿಲ್ದಾಣದಲ್ಲಿ ಇಳಿಯಲಿದ್ದ ಮಹಿಳೆಯೊಬ್ಬರು ಎಸಿ ಕೋಚ್‌ಗೆ ತಗಲಿದ್ದ ಬೆಂಕಿಯನ್ನು ಮೊದಲು ನೋಡಿ, ಟಿಸಿಗೆ ಮಾಹಿತಿ ನೀಡಿದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ ಕೊಂಕಣ ರೈಲ್ವೆಯ ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, ಬೆಂಕಿಯನ್ನು ಮೊದಲು ಗಮನಿಸಿದ್ದು ಟಿಸಿ, ಅವರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ ಎಂದು ಶ್ಲಾಘಿಸಿದ್ದಾರೆ.