ಗಂಡ ಇಸ್ರೇಲ್‌ನಲ್ಲಿ ಶವವಾಗಿ ಪತ್ತೆಯಾದ ಬಳಿಕ ಭಾರತದಲ್ಲಿ ದುರಂತ ಅಂತ್ಯಕಂಡ ಪತ್ನಿ, ಮಗು ಅನಾಥವಾಗಿದೆ. ಕರಳು ಹಿಂಡುವ ಈ ಘಟನೆಗೆ ದೇಶವೇ ಮರುಗಿದೆ. ಸುಂದರ ಕುಟುಂಬ ತಿಂಗಳುಗಳ ಅಂತರದಲ್ಲಿ ಆಘಾತದ ಮೇಲೆ ಆಘಾತ ಅನುಭವಿಸಿದೆ

ವಯನಾಡ್ (ಜ.01) ಇಸ್ರೇಲ್‌ನಲ್ಲಿ ಪತಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟು ತಿಂಗಳ ಬೆನ್ನಲ್ಲೇ ಭಾರತದಲ್ಲಿ ಪತ್ನಿ ಬದುಕು ಅಂತ್ಯಗೊಳಿಸಿದ ದುರಂತ ಘಟನೆ ನಡೆದಿದೆ. ಕೇರ್ ಟೇಕರ್ ಆಗಿ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಕೋಝಿಕ್ಕೋಡ್ ನಿವಾಸಿ ಜಿನೇಶ್ ಪಿ ಸುಕುಮಾರನ್ ಇಸ್ರೇಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಘಟನೆಯ ಶಾಕ್‌ನಿಂದ ಹೊರಬರಲಾಗದೆ ಇದೀಗ ಪತ್ನಿ ದುರಂತ ಅಂತ್ಯಕಂಡಿದ್ದಾಳೆ.ಆದರೆ ಮತ್ತೊಂದು ದೊಡ್ಡ ದುರಂತ ಎಂದರೆ ಇವರ 10 ವರ್ಷದ ಮಗಳು ಅನಾಥವಾಗಿದ್ದಾಳೆ. ಅತ್ತ ತಂದೆಯೂ ಇಲ್ಲ, ಇತ್ತ ತಾಯಿಯೂ ಇಲ್ಲದೆ ಕಣ್ಣೀರಿನಲ್ಲೇ ದಿನ ದೂಡುತ್ತಿದ್ದಾಳೆ.

34 ವರ್ಷ ರೇಶ್ಮಾ ಸಾವಿನಿಂದ ಮಗಳು ಅನಾಥ

34 ವರ್ಷದ ರೇಶ್ಮಾ ತನ್ನ ಪತಿಯ ಸಾವಿನಿಂದ ಆಘಾತಕ್ಕೊಳಗಾಗಿದ್ದಳು. ರೇಶ್ಮಾಗೆ ಕೌನ್ಸಲಿಂಗ್ ಮಾಡಲಾಗಿತ್ತು. ಆದರೂ ಆಘಾತದಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ. ಚೇತರಿಸಿಕೊಳ್ಳದ ರೇಶ್ಮಾ ಬದುಕು ಅಂತ್ಯಗೊಳಿಸಿದ್ದಾರೆ. ಸ್ಥಳೀಯರು ರೇಶ್ಮಾಳನ್ನು ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

10 ವರ್ಷದ ಮಗಳ ಕಣ್ಣೀರು ನೋಡಲಾಗುತ್ತಿಲ್ಲ

10 ವರ್ಷದ ಮಗಳಿಗೆ ತಂದೆ ಹಾಗೂ ತಾಯಿ ಇಬ್ಬರು ಮೇಲೂ ಎಲ್ಲಿಲ್ಲದ ಪ್ರೀತಿ.ಕಾರಣ ತಂದೆ ಜಿನೇಶ್ ಇಸ್ರೇಲ್‌ನಲ್ಲಿರುವ ಕಾರಣ ಭಾರತಕ್ಕೆ ರಜಾ ದಿನಗಳಲ್ಲಿ ಬಂದಾಗ ಮಾತ್ರ ಜೊತೆಗಿರುತ್ತಿದ್ದರು. ಹೀಗಾಗಿ ತಂದೆಯ ಪ್ರೀತಿಗಾಗಿ 10 ವರ್ಷದ ಮಗಳು ಹಾತೊರೆಯುತ್ತಿದ್ದಳು. ತಂದೆ ದೂರದಲ್ಲಿರುವ ಕಾರಣ ತಾಯಿ ರೇಶ್ಮಾ ಮಗಳನ್ನು ಅತ್ಯಂತ ಪ್ರೀತಿಯಿಂದ ಆರೈಕೆ ಮಾಡಿದ್ದರು. ಹೀಗಾಗಿ ತಂದೆ ಹಾಗೂ ತಾಯಿ ಇಬ್ಬರ ಮೇಲೂ ಮಗಳಿಗೆ ಅಪಾರ ಪ್ರೀತಿ. ಇದೀಗ ಇಬ್ಬರನ್ನು 10 ವರ್ಷ ಹೆಣ್ಣುಮಗಳು ಕಳೆದುಕೊಂಡಿದ್ದಾಳೆ. ತಂದೆ ಸಾವಿನಿಂದ ಆಘಾತದಲ್ಲಿದ್ದ ಮಗಳಿಗೆ ತಾಯಿಯ ಇತ್ತೀಚಿನ ದಿನಗಳ ಅಸ್ವಸ್ಥತೆ ತೀವ್ರ ನೋವುಂಟು ಮಾಡಿತ್ತು. ಆದರೂ ತಾಯಿ ಜೊತೆಗೆ ಪ್ರತಿ ದಿನ ಕಣ್ಣೀರು ಹಾಕುತ್ತಿದ್ದ ಪುಟ್ಟ ಬಾಲಕಿ ಇದೀಗ ಅನಾಥಳಾಗಿದ್ದಾಳೆ.

ಇಸ್ರೇಲ್‌ನಲ್ಲಿ ಜಿನೇಶ್ ಸಾವು

ಇಸ್ರೇಲ್‌ನಲ್ಲಿ ಹಿರಿಯ ದಂಪತಿಗಳ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಜಿನೇಶ್ 5 ತಿಂಗಳ ಹಿಂದೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಜಿನೇಶ್ ಬದುಕು ಅಂತ್ಯಗೊಳಿಸಿದ ರೀತಿಯಲ್ಲಿ ಪತ್ತೆಯಾಗಿದ್ದರು. ಇದೇ ವೇಳೆ ತಾನು ಸುಶ್ರೂಶೆ ಮಾಡುತ್ತಿದ್ದ ಹಿರಿಯ ಮಹಿಳೆ ಮೃತಪಟ್ಟಿದ್ದರು. ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು. ಇಸ್ರೇಲ್‌ನಲ್ಲಿ ಪತಿಯ ಸಾವು ತೀವ್ರ ಆಘಾತ ನೀಡಿತ್ತು . ಕೇರಳದಲ್ಲಿ ಮೆಡಿಕಲ್ ರೆಪ್ರೆಸೆಂಟೀವ್ ಆಗಿ ಕೆಲಸ ಮಾಡುತ್ತಿದ್ದ ಜಿನೇಶ್ ಕಳೆದ ಜೂನ್ ತಿಂಗಳಲ್ಲಿ ಇಸ್ರೇಲ್‌ನಲ್ಲಿ ಕೆಲಸಕ್ಕಾಗಿ ತೆರಳಿದ್ದರು. ಆದರೆ ಕೆಲವೇ ತಿಂಗಳುಗಳ ಅಂತರದಲ್ಲಿ ದುರಂತವೇ ನಡೆದು ಹೋಗಿದೆ.

ಮಾನಸಿಕವಾಗಿ ಕುಗ್ಗಿ ಹೋಗಿದ್ದ ರೇಶ್ಮಾ

ಗಂಡನ ಸಾವಿನ ಬಳಿಕ ರೇಶ್ಮಾ ಕುಗ್ಗಿಹೋಗಿದ್ಧರು. ಮನೆಯಲ್ಲಿ ರೇಶ್ಮಾ ಹಾಗೂ ಮಗಳು ಇಬ್ಬರೇ ಇದ್ದರು. ಪತಿ ಸಾವಿನ ಬಳಿಕ ರೇಶ್ಮಾಗೆ ಸ್ಥಳೀಯರು ನೆರವು ನೀಡಿದ್ದರು. ಕೌನ್ಸಿಲಿಂಗ್ ಸೇರಿದಂತೆ ಇತರ ನೆರವು ನೀಡಿದ್ದರು. ಆದರೆ ಮಗಳು ಶಾಲೆಗೆ ತೆರಳಿದ ಬಳಿಕ ಮನೆಯಲ್ಲಿ ಒಬ್ಬಳೆ ಇರುತ್ತಿದ್ದ ರೇಶ್ಮಾ ಮಾನಸಿಕವಾಗಿ ಸಂಪೂರ್ಣವಾಗಿ ಅಸ್ವಸ್ಥಗೊಂಡಿದ್ದರು.