ಅಬ್ದುಲ್ ಕರೀಂ ಲಾಲ್ ತೆಲಗಿಯು ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಕರಣದಲ್ಲಿ 2002ರಿಂದ ಕೇಂದ್ರ ಕಾರಾಗೃಹದಲ್ಲಿ ಸಜಾ ಕೈದಿಯಾಗಿದ್ದ. ನಕಲಿ ಛಾಪಾ ಕಾಗದ ಸೃಷ್ಟಿಸಿ ಮಾರಾಟ ಮಾಡಿದ ಆರೋಪಗಳ ಸಂಬಂಧ 1997ರಿಂದ 2000ರವರೆಗೆ ನಡುವೆ ನಗರದ ಯಶವಂತಪುರ, ಸಿಟಿ ಮಾರ್ಕೆಟ್, ಉಪ್ಪಾರಪೇಟೆ ಮತ್ತು ಮಡಿವಾಳ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿದ್ದರು.
ಬೆಂಗಳೂರು(ಅ.23): ನಕಲಿ ಛಾಪಾ ಕಾಗದ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಪ್ರಮುಖ ಆರೋಪಿ ಕರೀಂ ಲಾಲ ತೆಲಗಿ(56) ಮೃತಪಟ್ಟಿದ್ದಾನೆ.
ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಈತನಿಗೆ ಕೆಲ ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ನಕಲಿ ಛಾಪ ಕಾಗದ ಹಗರಣ, ಕೊಲೆ ಮುಂತಾದ ಅಪರಾಧಗಳಲ್ಲಿ ಈತನಿಗೆ ಒಟ್ಟು 42 ವರ್ಷ ಜೈಲು ಶಿಕ್ಷೆಯಾಗಿತ್ತು.
2000ರ ದಶಕದಲ್ಲಿ ಸಾವಿರಾರು ಕೋಟಿ ರೂ ನಕಲಿ ಛಾಪಾ ಕಾಗದ ಹಗರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹಲವು ವರ್ಷಗಳಿಂದ ಮಾರಣಾಂತಿಕ ಖಾಯಿಲೆ ಎಚ್‌ಐವಿ ಸೋಂಕಿನಿಂದ ಕರೀಂ ಲಾಲ್ ತೆಲಗಿ ಬಳಲುತ್ತಿದ್ದ. ಈತನಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ಆರೋಪಿ ಹೃದಯ ಸಿಬ್ಬಂದಿ, ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ. ಹೀಗಾಗಿ ಕರೀಂ ಲಾಲ್ ತೆಲಗಿಯನ್ನು ಚಿಕಿತ್ಸೆಗಾಗಿ ಅ.19 ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗಾ ವೈಫಲ್ಯದಿಂದ ಬಳಲುತ್ತಿದ್ದ ತೆಲಗಿ ರಾತ್ರಿ 8.30ರ ಸುಮಾರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹಗರಣ
ಅಬ್ದುಲ್ ಕರೀಂ ಲಾಲ್ ತೆಲಗಿಯು ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಕರಣದಲ್ಲಿ 2002ರಿಂದ ಕೇಂದ್ರ ಕಾರಾಗೃಹದಲ್ಲಿ ಸಜಾ ಕೈದಿಯಾಗಿದ್ದ. ನಕಲಿ ಛಾಪಾ ಕಾಗದ ಸೃಷ್ಟಿಸಿ ಮಾರಾಟ ಮಾಡಿದ ಆರೋಪಗಳ ಸಂಬಂಧ 1997ರಿಂದ 2000ರವರೆಗೆ ನಡುವೆ ನಗರದ ಯಶವಂತಪುರ, ಸಿಟಿ ಮಾರ್ಕೆಟ್, ಉಪ್ಪಾರಪೇಟೆ ಮತ್ತು ಮಡಿವಾಳ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿದ್ದರು.
ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿಯೂ 20 ಸಾವಿರ ಕೋಟಿ ರು.ಗಿಂತ ಅಧಿಕ ಛಾಪಾಕಾಗದ ಹಗರಣ ನಡೆಸಿದ್ದ. ರಾಜ್ಯದ ವಿವಿಧೆಡೆಯೂ ಈತನ ವಿರುದ್ಧ ಹಲವು ಪ್ರಕರಣ ದಾಖಲಾಗಿತ್ತು. ಕರೀಂ ಲಾಲ್ ತೆಲಗಿ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ಹೈಕೋರ್ಟ್ ಸೆ.5ಕ್ಕೆ ಇತ್ಯರ್ಥಪಡಿಸಿದ್ದು, ಕೆಲ ಷರತ್ತುಗಳಿಗೆ ಒಳಪಟ್ಟು ಬಿಡುಗಡೆಗೂ ಅಸ್ತು ಎಂದಿತ್ತು. ಆದಾಗ್ಯೂ ಹೊರ ರಾಜ್ಯಗಳಲ್ಲಿ ಕೆಲ ಪ್ರಕರಣದ ವಿಚಾರಣೆ ಬಾಕಿ ಇರುವುದರಿಂದ ತೆಲಗಿ ಬಿಡುಗಡೆಯಾಗಿರಲಿಲ್ಲ.