ಸಚಿವ ಹರ್ದೀಪ್ ಪುರಿ ಸುಳಿವು | ಬೇನಾಮಿ ಆಸ್ತಿ ಗಳಿಕೆ ತಡೆಗೆ ಕ್ರಮ
ಮುಂಬೈ: ಸರ್ಕಾರಿ ಯೋಜನೆಗಳ ಅಕ್ರಮ ಮತ್ತು ಸೋರಿಕೆ ತಡೆಗಾಗಿ ವಿವಿಧ ಯೋಜನೆಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರ, ಇದೀಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ರಿಯಲ್ ಎಸ್ಟೇಟ್, ಕಪ್ಪು ಹಣ ನಿಯಂತ್ರಣ, ಬೇನಾಮಿ ಆಸ್ತಿ ಸಂಪಾದನೆ ನಿಗ್ರಹಕ್ಕಾಗಿ ಆಸ್ತಿ ವ್ಯವಹಾರಗಳಿಗೂ ಆಧಾರ್ ಜೋಡಣೆ ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಆಸ್ತಿಗಳ ಮಾರಾಟ ಮತ್ತು ಖರೀದಿಗೂ ಆಧಾರ್ ಜೋಡಣೆ ಮಾಡುವ ಕುರಿತು ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಮಂತ್ರಿಮಂಡಲದ ವಸತಿ ಸಚಿವ ಹರ್ದೀಪ್ ಪುರಿ ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ.
ಟೀವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ ಆಸ್ತಿ ಜತೆ ಆಧಾರ್ ಜೋಡಣೆ ಒಂದು ಅತ್ಯುತ್ತಮ ಚಿಂತನೆಯಾಗಿದೆ. ಆದರೆ ಈ ಬಗ್ಗೆ ನಾನು ಅಧಿಕೃತ ಘೋಷಣೆ ಮಾಡಲ್ಲ. ನಾವು ಈಗಾಗಲೇ ಬ್ಯಾಂಕ್ ಖಾತೆಗಳು, ಸರ್ಕಾರದ ಫಲಾನುಭವಿಗಳಿಗೆ ಆಧಾರ್ ಜೋಡಣೆ ಮಾಡಿದ್ದೇವೆ. ಅದರ ಮುಂದುವರಿದ ಯೋಜನೆ ಇದಾಗಬಹುದು’ ಎಂದರು.
