108 ಕೋಟಿ ಜನರನ್ನು ತಲುಪಿರುವ ತಂತ್ರಜ್ಞಾನ ಇರುವಾಗ, ಹಾಗೂ ತೆರಿಗೆ ಪಾವತಿಸುವ ಎಲ್ಲಾ ಮನೆಯವರೂ ಅದನ್ನು ಹೊಂದಿರುವಾಗ ಐಟಿ ರಿಟರ್ನ್ ಫೈಲ್ ಮಾಡುವಾಗ ಯಾಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಬಾರದು?
ನವದೆಹಲಿ(ಮಾ. 22): ಸುಪ್ರೀಂಕೋರ್ಟ್ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೇಂದ್ರ ಸರಕಾರವು ವಿವಿಧ ಕಾರ್ಯಗಳಿಗೆ ಆಧಾರ್ ಕಾರ್ಡ್'ನ್ನು ಕಡ್ಡಾಯ ಮಾಡುವ ಚಿಂತನೆ ನಡೆಸಿದೆ. ಆದಾಯ ತೆರಿಗೆ (ಐಟಿ ರಿಟರ್ನ್) ಪಾವತಿ ಮಾಡುವಾಗ ಮತ್ತು ಪಾನ್ ಕಾರ್ಡ್'ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ಸರಕಾರ ಮುಂದಾಗಿದೆ. ಇದರಿಂದ ತೆರಿಗೆ ವಂಚನೆ ಪ್ರಮಾಣವನ್ನು ಗಮನಾರ್ಹವಾಗಿ ನಿಯಂತ್ರಿಸಬಹುದು ಎಂಬುದು ಕೇಂದ್ರದ ಅನಿಸಿಕೆಯಾಗಿದೆ.
"ಆಧಾರ್ ಕಾರ್ಡ್'ನಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇದ್ದು, ದುರ್ಬಳಕೆಯ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ದೇಶದಲ್ಲಿ ಇಷ್ಟು ತಂತ್ರಜ್ಞಾನ ಬಳಕೆಯಲ್ಲಿರುವಾಗ ಯಾಕೆ ಅದರ ವಿರುದ್ಧ ವ್ಯಗ್ರವಾಗಿರಬೇಕು? ತೆರಿಗೆ ವಂಚನೆ ನಿಗ್ರಹ ಕಾರ್ಯದಲ್ಲಿ ಉಪಯುಕ್ತವಾಗಿರುವ ಆಧಾರ್'ನಿಂದ ದೇಶಕ್ಕೆ ಪ್ರಯೋಜನವಿದೆ. ಅದನ್ನು ಅನುಷ್ಠಾನಗೊಳಿಸುವುದು ಸರಿ ಎಂಬುದು ಸರಕಾರದ ಭಾವನೆ," ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಆಧಾರ್ ಕಾರ್ಡ್ ಕಡ್ಡಾಯವಾಗಬಾರದು. ಕೇಂದ್ರವು ಬಲವಂತವಾಗಿ ಆಧಾರ್ ಕಾರ್ಡನ್ನು ಜನರಿಗೆ ಹೇರುತ್ತಿದೆಯಾ? ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಸರಕಾರದ ಉದ್ದೇಶವನ್ನು ಒಪ್ಪಿಕೊಂಡಿದ್ದಾರೆ. "ನಾವು ಆಧಾರ್ ಕಾರ್ಡನ್ನು ಜನರಿಗೆ ಬಲವಂತವಾಗಿ ಹೇರಬೇಕಾಗಿದೆ. 108 ಕೋಟಿ ಜನರನ್ನು ತಲುಪಿರುವ ತಂತ್ರಜ್ಞಾನ ಇರುವಾಗ, ಹಾಗೂ ತೆರಿಗೆ ಪಾವತಿಸುವ ಎಲ್ಲಾ ಮನೆಯವರೂ ಅದನ್ನು ಹೊಂದಿರುವಾಗ ಐಟಿ ರಿಟರ್ನ್ ಫೈಲ್ ಮಾಡುವಾಗ ಯಾಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಬಾರದು?" ಎಂಬುದು ಜೇಟ್ಲಿ ಉತ್ತರ.
