Asianet Suvarna News Asianet Suvarna News

ಡ್ರಗ್ಸ್‌ ನಶೆಯಲ್ಲಿ ನಿಲ್ಲಲೂ ಸಾಧ್ಯವಾಗದೇ ತೂರಾಡುತ್ತಿರುವ ಯುವತಿ ವಿಡಿಯೋ ವೈರಲ್‌

Drug Abuse in Punjab: ಪಂಜಾಬಿನ ಅಮೃತಸರದಲ್ಲಿ ಯುವತಿಯೊಬ್ಬಳು ಅತಿಯಾಗಿ ಮಾದಕವಸ್ತು ಸೇವನೆ ಮಾಡಿ ನಿಲ್ಲಲೂ ಶಕ್ತಿಯಿಲ್ಲದೇ ತೂರಾಡುತ್ತಿದ್ದಾಳೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ವಿಡಿಯೋ ಹಾಕಿದ್ದರು. ಈ ವಿಡಿಯೋ ವೈರಲ್‌ ಆಗಿದ್ದು ಪಂಜಾಬಿನಲ್ಲಿ ಮಾದಕವಸ್ತುಗಳ ತಡೆಗೆ ವಿಶೇಷ ಕಾರ್ಯಾಚರಣೆ ಆರಂಭವಾಗಿದೆ.

a girl allegedly under the influence of narcotics unable to stand on feet video goes viral
Author
First Published Sep 12, 2022, 4:01 PM IST

ಅಮೃತಸರ: ಪಂಜಾಬ್‌ ರಾಜ್ಯದ ಅಮೃತಸರದಲ್ಲಿ ಯುವತಿಯೊಬ್ಬಳು ಮಾದಕವಸ್ತು ಸೇವಿಸಿ ಮತ್ತಿನಲ್ಲಿ ತೂರಾಡುತ್ತಿದ್ದಾಳೆ ಎಂದು ಆರೋಪಿಸಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪಂಜಾಬಿನಲ್ಲಿ ಮೊದಲೇ ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ಸೇವನೆಯಿಂದ ಮೃತಪಡುವ ಯುವ ಸಮೂಹದ ಸಂಖ್ಯೆ ಹೆಚ್ಚಿದೆ. ಪಾಕಿಸ್ತಾನ ಗಡಿ ಪ್ರದೇಶದಲ್ಲಿರುವ ಪಂಜಾಬ್‌ಗೆ ಗಾಜಾ ಸ್ಟ್ರಿಪ್‌ ಮತ್ತು ಪಾಕಿಸ್ತಾನದಿಂದ ನಾರ್ಕೊಟಿಕ್ಸ್‌ಗಳು ಕಳ್ಳದಾರಿಯಿಂದ ಬಂದು ತಲುಪುತ್ತವೆ. ಯುವ ಸಮುದಾಯದಲ್ಲಿ ಮಾದಕವಸ್ತು ಸೇವನೆ ಪಂಜಾಬಿನಲ್ಲಿ ಅಧಿಕವಾಗಿದೆ ಎಂದು ಹಲವಾರು ವರದಿಗಳೂ ಬಂದಿವೆ. ಇದೇ ಕಾರಣಕ್ಕಾಗಿ ಯುವತಿಯ ಪರಿಸ್ಥಿತಿ ನೋಡಿದರೆ ಆಕೆ ಡ್ರಗ್ಸ್‌ ಅತಿಯಾಗಿ ತೆಗೆದುಕೊಂಡಿರುವ ಸಾಧ್ಯತೆಯಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗುವುದರ ಜತೆಗೆ ಪಂಜಾಬಿನಲ್ಲಿ ಡ್ರಗ್ಸ್‌ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆಯೂ ಚರ್ಚೆಗೆ ಕಾರಣವಾಗಿದೆ. ವಿಡಿಯೋದಲ್ಲಿ ಯುವತಿ ತನ್ನ ಕಾಲ ಮೇಲೆ ನಿಲ್ಲಲೂ ಆಗಲಾರದೇ ತೂರಾಡುತ್ತಿದ್ದಾಳೆ.

ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ನಂತರ ಮಕ್ಬೂಲ್‌ಪುರ ಪೊಲೀಸರು ಏರಿಯಾದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಮೂವರು ಯುವಕರ ಬಳಿ ಡ್ರಗ್ಸ್‌ ಪತ್ತೆಯಾಗಿದೆ. ಆದರೆ ವಿಡಿಯೋದಲ್ಲಿರುವ ಹುಡುಗಿ ಪೊಲೀಸರಿಗಿನ್ನೂ ಸಿಕ್ಕಿಲ್ಲ. ಜತೆಗೆ ಅನುಮಾನಾಸ್ಪದವಾಗಿ ಕಂಡು ಬಂದ 12 ವ್ಯಕ್ತಿಗಳನ್ನೂ ವಶಕ್ಕೆ ಪಡೆದಿದ್ದು ವಿಚಾರಣೆಗೊಳಪಡಿಸಲಾಗಿದೆ. ಎಲ್ಲರ ವಿರುದ್ಧವೂ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಆಮ್‌ ಆದ್ಮಿ ಪಕ್ಷದ ಸ್ಥಳೀಯ ಶಾಸಕ ಜೀವಂಜೊತ್‌ ಕೌರ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರಕರಣದ ತನಿಖೆ ನಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭಾನುವಾರ ಮಾತನಾಡಿದ್ದು, ಗುಜರಾತ್‌ನ ಬಂದರೊಂದಕ್ಕೆ ದೊಡ್ಡ ಪ್ರಮಾಣದಲ್ಲಿ ಮಾದಕವಸ್ತುಗಳು ಬರುತ್ತಿವೆ. ಅಲ್ಲಿಂದ ಪಂಜಾಬ್‌ಗೆ ರಸ್ತೆ ಮಾರ್ಗವಾಗಿ ಕಳ್ಳಸಾಗಣೆ ಮಾಡಲಾಗುತ್ತದೆ ಎಂದಿದ್ದರು. 

ಇದನ್ನೂ ಓದಿ: ಜೈಲಿನಿಂದ ಬಂದ ಮೇಲೂ ಮತ್ತೆ ಡ್ರಗ್ಸ್‌ ದಂಧೆ: ವಿದೇಶಿ ಪ್ರಜೆಗಳು ಸೇರಿ ನಾಲ್ವರ ಬಂಧನ

ಅಹ್ಮದಾಬಾದ್‌ ಭೇಟಿ ವೇಳೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್‌, "ಇತ್ತೀಚಿನ ದಿನಗಳಲ್ಲಿ ದೊಡ್ಡ ಕನ್‌ಸೈನ್‌ಮೆಂಟ್‌ಗಳು ಗುಜರಾತಿನ ಬಂದರೊಂದಕ್ಕೆ ಬರುತ್ತಿದೆ. ಅಲ್ಲಿಂದ ಪಂಜಾಬ್‌ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಡ್ರಗ್ಸ್‌ ಪೂರೈಕೆಯಾಗುತ್ತಿದೆ. ಪಂಜಾಬ್‌ ಸರ್ಕಾರ ಮಾದಕವಸ್ತು ಮಾರಾಟವನ್ನು ಸಂಪೂರ್ಣವಾಗಿ ತಡೆಯಲು ಪ್ರಯತ್ನಿಸುತ್ತಿದೆ. ಆದರೆ ಇಷ್ಟು ದೊಡ್ಡ ಮಟ್ಟದ ಡ್ರಗ್ಸ್‌ ಕನ್‌ಸೈನ್‌ಮೆಂಟ್‌ ಬಂದರಿಗೆ ಹೇಗೆ ಬರುತ್ತಿದೆ. ಇದರ ಹಿಂದೆ ಆಡಳಿತಾಂಗದ ಉನ್ನತ ಸ್ಥಾನದಲ್ಲಿ ಯಾರೋ ಇರಲೇಬೇಕು. ಇಲ್ಲದಿದ್ದರೆ ಇದು ಅಸಾಧ್ಯ," ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಇದನ್ನೂ ಓದಿ: Sonali Phogat ನಿಗೂಢ ಸಾವು ಪ್ರಕರಣ: ಪಾರ್ಟಿಯಲ್ಲಿ ಡ್ರಗ್ಸ್‌ ನೀಡಿದ್ದ ಆರೋಪಿಗಳು

ಪಂಜಾಬಿನ ಮಾದಕ ವಸ್ತು ಜಾಲದ ಕುರಿತಾಗಿ ಉಡ್ತಾ ಪಂಜಾಬ್‌ ಎಂಬ ಹಿಂದಿ ಚಲನಚಿತ್ರ ಕೂಡ ಬಂದಿತ್ತು. ಇದರಲ್ಲಿ ಪಂಜಾಬಿನ ಡ್ರಗ್ಸ್‌ ಜಾಲದ ಆಳ ಮತ್ತು ಅಗಲದ ಪರಿಚಯ ನೀಡಲಾಗಿತ್ತು. ಜತೆಗೆ ಪಂಜಾಬಿನ ಯುವ ಜನತೆ ಹೇಗೆ ಮಾದಕವಸ್ತುಗಳಿಗೆ ದಾಸರಾಗುತ್ತಿದ್ದಾರೆ ಎಂಬುದೇ ಈ ಕತೆಯ ಜೀವಾಳವಾಗಿತ್ತು. ಪಂಜಾಬ್‌, ಚಂಡೀಗಢ, ಹರಿಯಾಣ ಮತ್ತು ಗೋವಾದಲ್ಲಿ ಮಾದಕ ವಸ್ತುಗಳ ಸೇವನೆ ಅತಿ ಹೆಚ್ಚಿದೆ ಎನ್ನುತ್ತವೆ ವರದಿಗಳು. 

Follow Us:
Download App:
  • android
  • ios