ನ.26 ಮತ್ತು 27ರಂದು ವಜ್ರ ಮಹೋತ್ಸವ ಆಚರಣೆ ನಡೆಯಲಿದೆ. ಕರಡಿಗೋಡು ಗ್ರಾಮದಲ್ಲೀಗ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ತಮ್ಮ ಶಾಲೆಯ ವಜ್ರ ಮಹೋತ್ಸವ ಆಚರಣೆಗಾಗಿ ಇಡೀ ಊರಿಗೇ ಊರೇ ಸಜ್ಜಾಗಿದೆ. ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿ ಪೂರ್ವ ತಯಾರಿಯಲ್ಲಿದ್ದಾರೆ.
ಸಿದ್ದಾಪುರ(ನ.24): ಸಿದ್ದಾಪುರದ ಕರಡಿಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 60 ವರ್ಷಗಳನ್ನು ಪೂರೈಸಿದ್ದು, ವಜ್ರಮಹೋತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ನ.26 ಮತ್ತು 27ರಂದು ವಜ್ರ ಮಹೋತ್ಸವ ಆಚರಣೆ ನಡೆಯಲಿದೆ. ಕರಡಿಗೋಡು ಗ್ರಾಮದಲ್ಲೀಗ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ತಮ್ಮ ಶಾಲೆಯ ವಜ್ರ ಮಹೋತ್ಸವ ಆಚರಣೆಗಾಗಿ ಇಡೀ ಊರಿಗೇ ಊರೇ ಸಜ್ಜಾಗಿದೆ. ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿ ಪೂರ್ವ ತಯಾರಿಯಲ್ಲಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಶಾಲೆ ಸಾಗಿ ಬಂದ ಹಾದಿ: ಕರಡಿಗೋಡುವಿನ ಕುಕ್ಕುನೂರು ಕುಟುಂಬದ ಕಾರ್ಯಪ್ಪ ಅವರು ದಾನ ನೀಡಿದ 1 ಎಕರೆ ಜಾಗದಲ್ಲಿ 1857ರಲ್ಲಿ ಹುಲ್ಲಿನ ಗುಡಿಸಲಿನಲ್ಲಿ ಶಾಲೆ ಪ್ರಾರಂಭಗೊಂಡಿತ್ತು. ಆರಂಭದಲ್ಲಿ 30 ಮಕ್ಕಳಿದ್ದರು. ನಂತರ ಟಿ.ಎಂ. ಮಾದಪ್ಪನವರ ಪರಿಶ್ರಮದಿಂದ ನೂತನ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಯಿತು. ಇಂದು ಎಲ್ಲ ಮೂಲಭೂತ ಸೌಕರ್ಯಗಳನ್ನೊಳಗೊಂಡು ಮಾದರಿ ಶಾಲೆಯಾಗಿದೆ. ಪ್ರಸ್ತುತ ಶಾಲೆಯಲ್ಲಿ 1 ನೇ ತರಗತಿಯಿಂದ 7 ನೇ ತರಗತಿವರೆಗೆ ಹೆಣ್ಣು ಮಕ್ಕಳು ಸೇರಿದಂತೆ 62 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ರೆಸಾರ್ಟ್‌ನಿಂದ ಶಾಲೆಯ ದತ್ತು: ಸ್ಥಳೀಯ ಇವಾಲ್ ಬ್ಯಾಕ್ ರೆಸಾರ್ಟ್ ಶಾಲೆಯನ್ನು ಕೆಲವು ವರ್ಷಗಳಿಂದ ದತ್ತು ಪಡೆದಿದೆ. ಶಾಲೆಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ. ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕರು ಹಾಗೂ ಕಂಪ್ಯೂಟರ್ ಶಿಕ್ಷಕಿಯನ್ನು ನೇಮಕ ಮಾಡಿ ಅವರಿಗೆ ಸಂಬಳವನ್ನು ನೀಡುತ್ತಿದೆ. ಅಲ್ಲದೆ, ಮಕ್ಕಳಿಗೆ ಸುಸಜ್ಜಿತ ಗ್ರಂಥಾಲಯ, ಸುಸಜ್ಜಿತ ಶೌಚಾಲಯ, ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಎಲ್ಲರೂ ಕೈ ಜೋಡಿಸಿದ್ದು ಶಾಲೆಯು ಪ್ರಗತಿಯತ್ತ ಸಾಗುತ್ತಿದೆ. ಇದೀಗ ವಜ್ರ ಮಹೋತ್ಸವದ ಹೊಸ್ತಿಲಲ್ಲಿರುವ ಈ ಸರ್ಕಾರಿ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಶಯವಾಗಿದೆ.
ವರದಿ : ಸುಬ್ರಮಣಿ ಸಿದ್ದಾಪುರ - ಕನ್ನಡ ಪ್ರಭ
