1. 3 ಬಾರಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಅನಂತ್ ಕುಮಾರ್‌ ಅವರಿಗೆ 10 ಇಲಾಖೆಗಳ ಸಚಿವನಾಗಿ ಜವಾಬ್ದಾರಿ ನಿರ್ವಹಿಸಿದ ಖ್ಯಾತಿ ಸಲ್ಲುತ್ತದೆ.

2. ಲೋಕಸಭಾ ಅಖಾಡದಲ್ಲಿ ಯಾವತ್ತೂ ಸೋಲನ್ನೇ ಕಂಡಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯಾವ ಅಭ್ಯರ್ಥಿಗೂ ಅನಂತ್‌ರನ್ನು ಮಣಿಸಲು ಸಾಧ್ಯವಾಗಲಿಲ್ಲ. 1996  ವಲಕ್ಷ್ಮೀ ಗುಂಡೂರಾವ್ (ಕಾಂಗ್ರೆಸ್), 1998 ಡಿ.ಪಿ. ಶರ್ಮಾ (ಕಾಂಗ್ರೆಸ್), 1999 ಬಿ.ಕೆ. ಹರಿಪ್ರಸಾದ್ (ಕಾಂಗ್ರೆಸ್), 2004 ಕೃಷ್ಣಪ್ಪ ಎಂ. (ಕಾಂಗ್ರೆಸ್), 2009 ಕೃಷ್ಣ ಬೈರೇಗೌಡ (ಕಾಂಗ್ರೆಸ್), 2014 ನಂದನ ನೀಲೆಕಣಿ (ಕಾಂಗ್ರೆಸ್) ಸೋಲಿಸಿ ಸಂಸತ್ತು ಪ್ರವೇಶಿಸಿದ್ದರು ಅನಂತ್.

3. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾದ ಅನಂತ್, ಅತೀ ಕಿರಿಯ ಕೇಂದ್ರ ಸಚಿವನ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

4. ವೃತ್ತಿಯಲ್ಲಿ ವಕೀಲನಾಗಿದ್ದರೂ, ರಾಜಕಾರಣದಲ್ಲಿದ್ದರೂ, ತಂತ್ರಜ್ಞಾನದ ಬಗ್ಗೆ ಅವರಿಗಿದ್ದ ದೂರದೃಷ್ಟಿ ಮೆಚ್ಚುವಂತಹದ್ದು. ಭಾರತದಲ್ಲಿ ಇಂಟರ್ನೆಟ್ ಕಣ್ಣು ಬಿಡುವ ಸಂದರ್ಭದಲ್ಲೇ, ಅಂದರೆ1998ರಲ್ಲೇ http://www.dataindia.com/ ಎಂಬ ತಮ್ಮ ವೆಬ್ ಸೈಟ್ ಬಿಡುಗಡೆ ಮಾಡಿದ ಮೊದಲ ರಾಜಕಾರಣಿ ಎಂಬ ಖ್ಯಾತಿ ಅನಂತ್ ಕುಮಾರ್ ಅವರದ್ದು. ಬಳಿಕ www.ananth.org ವೆಬ್ ಸೈಟ್ ಗೆ ಚಾಲನೆ ನೀಡಿದ್ದರು.

5. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 40 ದಿನ ವಿ.ಎಸ್.ಉಗ್ರಪ್ಪ ಮುಂತಾದವರ ಜೊತೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸಿದ್ದರು.

6. 2015ರ ಅಕ್ಟೋಬರ್​ 15ರಂದು ವಿಶ್ವಸಂಸ್ಥೆಯ 67ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ವೇಳೆ ಅನಂತಕುಮಾರ್ ಅವರು ಕನ್ನಡದಲ್ಲಿ ಭಾಷಣ  ಮಾಡಿ ಎಲ್ಲರ ಗಮನಸೆಳೆದಿದ್ದರು.