ಕೆಪಿಸಿಸಿ ಅಧ್ಯಕ್ಷ ಹುದ್ದೆ ರೇಸ್ ನಲ್ಲಿ ಐವರು

news | Thursday, June 7th, 2018
Suvarna Web Desk
Highlights

ಕಳೆದ ಹತ್ತು ದಿನಗಳಿಂದ ಸಚಿವ ಸಂಪುಟ ವಿಸ್ತರಣೆಯ ವಿವಿಧ ಕಸರತ್ತಿನಲ್ಲಿ ಮುಳುಗಿದ್ದ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ಗಮನ ಇದೀಗ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯತ್ತ ಹರಿದಿದೆ. ಇದೀಗ ಈ ರೇಸ್ ನಲ್ಲಿ ಒಟ್ಟು ಐವರು ಇದ್ದಾರೆ. 

ಬೆಂಗಳೂರು :  ಕಳೆದ ಹತ್ತು ದಿನಗಳಿಂದ ಸಚಿವ ಸಂಪುಟ ವಿಸ್ತರಣೆಯ ವಿವಿಧ ಕಸರತ್ತಿನಲ್ಲಿ ಮುಳುಗಿದ್ದ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ಗಮನ ಇದೀಗ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯತ್ತ ಹರಿದಿದೆ. ಮಂಗಳವಾರ ಸಚಿವ ಸಂಪುಟದ ಬಗೆಗಿನ ಚರ್ಚೆಯ ಜೊತೆಜೊತೆಗೆ ಕೆಪಿಸಿಸಿ ಅಧ್ಯಕ್ಷ ಗಾದಿಯ ಬಗ್ಗೆಯೂ ಚರ್ಚೆ ನಡೆದಿದ್ದು ರಾಜ್ಯದ ನಾಲ್ಕು ಪ್ರಮುಖ ಸಮುದಾಯಗಳ ನಾಲ್ಕು ಮುಖಂಡರ ಹೆಸರುಗಳು ಮುಂಚೂಣಿಯಲ್ಲಿವೆ.

ಒಕ್ಕಲಿಗ ಸಮುದಾಯದ ಎಂ.ಕೃಷ್ಣಪ್ಪ, ವೀರಶೈವ ಲಿಂಗಾಯತ ಸಮುದಾಯದ ಈಶ್ವರ ಖಂಡ್ರೆ, ಹಿಂದುಳಿದ ವರ್ಗದ ಬಿ ಕೆ ಹರಿಪ್ರಸಾದ್ ಮತ್ತು ದಲಿತ ಸಮುದಾಯದ ಕೆ. ಎಚ್.ಮುನಿಯಪ್ಪ ಈ ನಾಲ್ವರಲ್ಲಿ ಒಬ್ಬರು ಕೆಪಿಸಿಸಿ ಅಧ್ಯಕ್ಷ ರಾಗುವ ಸಾಧ್ಯತೆ ಹೆಚ್ಚು ಎಂಬುದು ಹೈಕಮಾಂಡ್ ಮೂಲ ಗಳು ನೀಡುತ್ತಿರುವ ಮಾಹಿತಿ. ಆದರೆ ನಾಲ್ವರನ್ನೂ ಬಿಟ್ಟು ಐದನೆಯವರಾದ ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ
ಮುಂಚೂಣಿಯಲ್ಲಿದ್ದಾರೆ. 

ಖಂಡ್ರೆ ಹೆಸರು ಚಾಲ್ತಿಯಲ್ಲಿ: ಈ ಹಿನ್ನೆಲೆಯಲ್ಲಿ ವೀರಶೈವ ಮತ್ತು ಲಿಂಗಾಯತರು ಪ್ರತ್ಯೇಕರು ಎಂಬ ಕೂಗು ಮೂಡಿದ್ದ ಸಂದರ್ಭದಲ್ಲಿ ಈ ಸಮುದಾಯ ಒಂದೇ ಎಂದು ವಾದಿಸಿದ್ದ ಬೀದರ್‌ನ ಭಾಲ್ಕಿ ಶಾಸಕ, ಮಾಜಿ ಸಚಿವ ಈಶ್ವರ ಖಂಡ್ರೆ ಅವರ ಹೆಸರು ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ. ವೀರಶೈವ ಮತ್ತು ಲಿಂಗಾಯತರನ್ನು ಒಡೆದು ಮತ ಭೇಟೆಯಾಡುವ ಕಾರ್ಯತಂತ್ರ ನಿರೀಕ್ಷಿತ ಫಲ ನೀಡದಿರುವ ಹಿನ್ನೆಲೆಯಲ್ಲಿ ಮತ್ತು ಮೈತ್ರಿ ಸರ್ಕಾರ ರಚನೆಯ ಸಂದರ್ಭ ದಲ್ಲಿ ನಡೆದ ಕೆಲ ಬೆಳವಣಿಗೆಗಳಿಂದಾಗಿ ವೀರಶೈವ ಲಿಂಗಾಯತ ಸಮುದಾಯ ಮುನಿಸಿಕೊಂಡಿದ್ದರೆ, ಆದರ ಶಮನಕ್ಕಾಗಿ ಈಶ್ವರ ಖಂಡ್ರೆ ಆಯ್ಕೆ ಸೂಕ್ತ, ಹಾಗೆಯೇ ಉತ್ತರ ಕರ್ನಾಟಕಕ್ಕೂ ಕಾಂಗ್ರೆಸ್ ಆದ್ಯತೆ ನೀಡಿದೆ ಎಂಬ ಸಂದೇಶವನ್ನು ಕಳುಹಿಸಬಹುದು ಎಂಬುದು ಹೈಕಮಾಂಡ್‌ನ ಯೋಚನೆ. 

ಮುನಿಯಪ್ಪ ನೆರವಿಗೆ ದಲಿತ ಕೋಟಾ: ಸುಮಾರು ಮೂರು ದಶಕಗಳಷ್ಟು ಕಾಲ ಕೋಲಾರದ ಸಂಸದರಾಗಿ, ಕೇಂದ್ರ ಸಚಿವ ರಾಗಿರುವ ಕೆ.ಎಚ್.ಮನಿಯಪ್ಪ ಅವರ ಹೆಸರೂ ಚಾಲ್ತಿಯಲ್ಲಿದೆ. ಕೆಜಿಎಫ್ ನಿಂದ ಗೆದ್ದಿರುವ ತಮ್ಮ ಮಗಳನ್ನು ಸಚಿವರನ್ನಾಗಿ ಮಾಡಿ ಎಂದು ದೆಹಲಿಯಲ್ಲಿ ಓಡಾಡಿ ಲಾಬಿ ಮಾಡುತ್ತಿದ್ದ ಮುನಿಯಪ್ಪ ಅವರು, ಮೊದಲ ಬಾರಿ ಶಾಸಕರಾಗಿರುವ ತಮ್ಮ ಮಗಳಿಗೆ ಹೇಗೆ ಸಚಿವ ಸ್ಥಾನ ನೀಡಲು ಸಾಧ್ಯ ಎಂದು ಕೇಳಿದರೆ ಪರಿಶಿಷ್ಟ ಜಾತಿಗಳ ಎಡವರ್ಗದ ಕೋಟಾದಲ್ಲಿ ತಮ್ಮ ಮಗಳನ್ನು ಮಂತ್ರಿ ಮಾಡಿ ಎನ್ನುತ್ತಿದ್ದರು. ಇದೀಗ ಅದೇ ಕೋಟಾ ಮುನಿಯಪ್ಪ ಅವರ ನೆರವಿಗೆ ಬರಬಹುದು. ಪರಿಶಿಷ್ಟ ಪಂಗಡಗಳ ಬಲವರ್ಗಕ್ಕೆ ಸೇರಿರುವ ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ.

ಆದರೆ ಎಡವರ್ಗಕ್ಕೆ ಸಚಿವ ಸಂಪುಟದಲ್ಲಿ ಪ್ರಾಧಾನ್ಯತೆ ಸಿಕ್ಕಿಲ್ಲ, ಅಷ್ಟೇ ಅಲ್ಲದೆ 2018ರ ಚುನಾವಣೆಯಲ್ಲಿ ಎಡವರ್ಗ ಕಾಂಗ್ರೆಸ್ ನಿಂದ ದೂರ ಸರಿದಿದೆ. ದಲಿತರಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಈ ಸಮುದಾಯವನ್ನು ಮತ್ತೆ ಕಾಂಗ್ರೆಸ್ ಕಡೆ ಸೆಳೆಯಲು ಮುನಿಯಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದೇ ಆದರೆ ಒಟ್ಟು ದಲಿತ ಸಮುದಾಯಕ್ಕೆ ಕಾಂಗ್ರೆಸ್ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂಬುದು ಮುನಿಯಪ್ಪ ಅವರ ಹೆಸರು ಮುಂಚೂಣಿಗೆ ಬರಲು ಕಾರಣವಾಗಿದೆ.

ಒಕ್ಕಲಿಗ ಮತ ರಕ್ಷಣೆಗೆ ಕೃಷ್ಣಪ್ಪ: ಮಾಜಿಸಚಿವ ಎಂ.ಕೃಷ್ಣಪ್ಪ ಅವರು ಹೆಸರು ಕೂಡ ಹೈಕಮಾಂಡ್‌ನ ಪಟ್ಟಿಯಲ್ಲಿದೆ. ಜೆಡಿಎಸ್ ಒಕ್ಕಲಿಗ ಪ್ರಾಬಲ್ಯದ ಪ್ರದೇಶದಲ್ಲಿ ಇನ್ನಷ್ಟು ಬಲಿಷ್ಠಗೊಳ್ಳುವುದನ್ನು ತಡೆದು, ಕಾಂಗ್ರೆಸ್‌ನ ಒಕ್ಕಲಿಗ ಮತಗಳನ್ನು ರಕ್ಷಿಸಿಕೊಳ್ಳುವ ನಡೆಯಾಗಿ ಕೃಷ್ಣಪ್ಟರನ್ನು ಬಳಸಿಕೊಳ್ಳಬಹುದು ಎಂಬುದು ಕಾಂಗ್ರೆಸ್ ನ ಯೋಚನಾ ಲಹರಿ. ದೆಹಲಿ ರಾಜಕೀಯದಲ್ಲಿ ಪಳಗಿರುವ, ಸದ್ಯ ರಾಷ್ಟ್ರರಾಜ ಕಾರಣದಲ್ಲಿ ಯಾವುದೇ ಜವಾಬ್ದಾರಿಗಳಿಲ್ಲದೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುವ ಬಿ. ಕೆ.ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಹೇಗೆ ಎಂಬುದರ ಬಗ್ಗೆಯೂ ಸಮಾಲೋಚನೆ ನಡೆದಿದೆ. 

ಹರಿಪ್ರಸಾದ್ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ನೆಲೆಯಲ್ಲಿ ರಾಜಕಾರಣ ಮಾಡುತ್ತಿದ್ದು ಇದಕ್ಕೆ ಪರ್ಯಾಯವಾಗಿ ಹಿಂದುಳಿದ ವರ್ಗವನ್ನು ಸೆಳೆದಿಟ್ಟುಕೊಂಡು ರಾಜಕಾರಣ ಮಾಡಲು ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು, ಹಾಗು ಇದಕ್ಕೆ ಬಿ.ಕೆ. ಹರಿಪ್ರಸಾದ್ ಅವರೇ ಸೂಕ್ತ ಎಂಬುದು ಅವರ ಹೆಸರು ಅಂತಿಮ ಪಟ್ಟಿಯಲ್ಲಿ ಸೇರಲು ಕಾರಣ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆದಿದ್ದು ಪ್ರಸಕ್ತ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರು ಉಪಮುಖ್ಯ ಮಂತ್ರಿ ಯಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ಗೊಂದಲ ಶಮನಗೊಂಡ ಬಳಿಕವೇ ಕೆಪಿಸಿಸಿ ಅಧ್ಯಕ್ಷರ ಘೋಷಣೆ ಮಾಡಬೇಕೇ ಅಥವಾ ತಕ್ಷಣವೇ ಮಾಡಿದರೆ ಒಳ್ಳೆಯದೇ ಎಂಬುದರ ಬಗ್ಗೆಯೂ ಕಾಂಗ್ರೆಸ್ ಹೈಕಮಾಂಡ್ ಯೋಚಿಸುತ್ತಿದೆ. 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR