Asianet Suvarna News Asianet Suvarna News

ಗೊಂದಲದ 5 ಕಾಂಗ್ರೆಸ್‌ ಸೀಟು ಇಂದು ಫೈನಲ್‌

ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟಿಸಿರುವ ಕ್ಷೇತ್ರಗಳ ಪೈಕಿ ಬಾದಾಮಿ, ತಿಪಟೂರು, ಜಗಳೂರು, ಪದ್ಮನಾಭನಗರ ಹಾಗೂ ಮಡಿಕೇರಿ ಈ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಬದಲಾಯಿಸುವ ಗಂಭೀರ ಸಾಧ್ಯತೆ ಮೂಡಿದ್ದು, ಶುಕ್ರವಾರ ಈ ಬಗ್ಗೆ ಪಕ್ಷ ಅಧಿಕೃತವಾಗಿ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

5 congress Seat Fileside Today

ಬೆಂಗಳೂರು : ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟಿಸಿರುವ ಕ್ಷೇತ್ರಗಳ ಪೈಕಿ ಬಾದಾಮಿ, ತಿಪಟೂರು, ಜಗಳೂರು, ಪದ್ಮನಾಭನಗರ ಹಾಗೂ ಮಡಿಕೇರಿ ಈ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಬದಲಾಯಿಸುವ ಗಂಭೀರ ಸಾಧ್ಯತೆ ಮೂಡಿದ್ದು, ಶುಕ್ರವಾರ ಈ ಬಗ್ಗೆ ಪಕ್ಷ ಅಧಿಕೃತವಾಗಿ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲಿದ್ದು, ಅವರಿಗೆ ರಾಜ್ಯ ನಾಯಕತ್ವದ ನಿಲುವು ತಿಳಿಸಲಿದ್ದಾರೆ. ಈ ಸಭೆಯ ನಂತರ ಈ ಕ್ಷೇತ್ರಗಳ ಹಣೆಬರಹ ನಿರ್ಧಾರವಾಗಲಿದೆ.

ಮೂಲಗಳ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಯಕೆ ಹೊಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಒಂದು ವೇಳೆ ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಹೈಕಮಾಂಡ್‌ ಒಪ್ಪದಿದ್ದರೂ ಸಹ ಹಾಲಿ ಪ್ರಕಟಿತ ಅಭ್ಯರ್ಥಿ ಡಾ.ದೇವರಾಜ ಪಾಟೀಲ್‌ ಅವರಿಗೆ ಟಿಕೆಟ್‌ ಕೈತಪ್ಪಿ ಹಾಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿಅವರಿಗೆ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಉಳಿದಂತೆ ಜಗಳೂರು ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಲು ಈಗಾಗಲೇ ನಿರ್ಧಾರವಾಗಿದೆ. ಪ್ರಕಟಿತ ಅಭ್ಯರ್ಥಿಯಾದ ಪುಷ್ಪ ಅವರ ಬದಲಾಗಿ ಹಾಲಿ ಶಾಸಕ ಎಚ್‌.ಪಿ. ರಾಜೇಶ್‌ ಅವರಿಗೆ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ. ಆದರೆ, ರಾಜೇಶ್‌ ಅವರಿಗೆ ಇನ್ನೂ ಬಿ-ಫಾರಂ ನೀಡಿಲ್ಲ. ಶುಕ್ರವಾರ ಈ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ.

ಇನ್ನು ತಿಪಟೂರು ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಖಚಿತ. ಪ್ರಕಟಿತ ಅಭ್ಯರ್ಥಿ ನಂಜಾಮರಿ ಬದಲಾಗಿ ಹಾಲಿ ಶಾಸಕ ಷಡಕ್ಷರಿ ಅವರಿಗೆ ಟಿಕೆಟ್‌ ದೊರೆಯುವ ಸಂಭವವಿದೆ ಎನ್ನಲಾಗಿದೆ. ಆದರೆ, ಪದ್ಮನಾಭನಗರ ಹಾಗೂ ಮಡಿಕೇರಿ ಕ್ಷೇತ್ರಗಳ ಅಭ್ಯರ್ಥಿ ಬದಲಾವಣೆ ವಿಚಾರದಲ್ಲಿ ರಾಜ್ಯ ನಾಯಕತ್ವದಲ್ಲೇ ಭಿನ್ನಾಭಿಪ್ರಾಯವಿದೆ. ಹೀಗಾಗಿ ಈ ಎರಡು ಕ್ಷೇತ್ರದ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲೇ ತೀರ್ಮಾನವಾಗಬೇಕಿದೆ.

ಪದ್ಮನಾಭನಗರದಲ್ಲಿ ಗುರಪ್ಪನಾಯ್ಡು ಅವರಿಗೆ ಟಿಕೆಟ್‌ ಘೋಷಿಸಲಾಗಿದ್ದು, ಅವರು ಶುಕ್ರವಾರ ಬಿ-ಫಾರಂ ಸಲ್ಲಿಸಲಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರಪ್ಪನಾಯ್ಡು ಬದಲಾಗಿ ಶ್ರೀನಿವಾಸ್‌ ಅವರಿಗೆ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಮಾಜಿ ಮುಖ್ಯಮಂತ್ರಿ ಆರ್‌.ಅಶೋಕ್‌ ಅವರು ಸ್ಪರ್ಧಿಸುವ ಈ ಕ್ಷೇತ್ರದಲ್ಲಿ ಶ್ರೀನಿವಾಸ್‌ ಪ್ರಬಲ ಅಭ್ಯರ್ಥಿ. ಅವರನ್ನು ಕಣಕ್ಕೆ ಇಳಿಸಿದರೆ ಅಶೋಕ್‌ ಅವರನ್ನು ಕ್ಷೇತ್ರದಲ್ಲಿ ಕಟ್ಟಿಹಾಕಬಹುದು ಎಂಬುದು ಸಿಎಂ ಲೆಕ್ಕಾಚಾರ. ಈ ಬಗ್ಗೆ ಹೈಕಮಾಂಡ್‌ನಲ್ಲೇ ತೀರ್ಮಾನವಾಗಬೇಕಿದೆ.

ಇನ್ನು ವಿವಾದಿತ ವ್ಯಕ್ತಿ ಮೇಹುಲ್‌ ಚೋಕ್ಸಿ ಪರ ವಕೀಲರೆನ್ನಲಾದ ಮಡಿಕೇರಿ ಅಭ್ಯರ್ಥಿ ಚಂದ್ರಮೌಳಿ ಅವರ ಹೆಸರು ಬದಲಾವಣೆ ಬಗ್ಗೆಯೂ ಹೈಕಮಾಂಡ್‌ ತೀರ್ಮಾನ ಕೈಗೊಳ್ಳಬೇಕಿದೆ.

Follow Us:
Download App:
  • android
  • ios