ನವದೆಹಲಿ[ಡಿ.04]: ಗದ್ದಲ ಹಾಕುವ ಸಂಸದರಿಗೆ ಅಮಾನತು ಸಜೆಯ ಪರ್ವವನ್ನು ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಮುಂದುವರಿಸಿದ್ದಾರೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದ ದಿನದಿಂದ ಲೋಕಸಭೆಯಲ್ಲಿ ಗದ್ದಲ ನಡೆಸುತ್ತಿದ್ದ 14 ತೆಲುಗುದೇಶಂ ಸಂಸದರನ್ನು ಮಹಾಜನ್‌ ಅಮಾನತು ಮಾಡಿದ್ದಾರೆ. ಇದೇ ವೇಳೆ, ಮೇಕೆದಾಟು ಅಣೆಕಟ್ಟು ನಿರ್ಮಾಣ ವಿರೋಧಿಸಿ ಗಲಾಟೆ ಮಾಡುತ್ತಿದ್ದ ಇನ್ನೂ 7 ಅಣ್ಣಾ ಡಿಎಂಕೆ ಸಂಸದರನ್ನು ಗುರುವಾರ ಅವರು ಅಮಾನತುಪಡಿಸಿದ್ದಾರೆ.

ಮೇಕೆದಾಟು ವಿಚಾರದಲ್ಲಿ 24 ಅಣ್ಣಾ ಡಿಎಂಕೆ ಸಂಸದರನ್ನು ಸುಮಿತ್ರಾ ಬುಧವಾರ ಅಮಾನತು ಮಾಡಿದ್ದರು. ಇದರಿಂದ ಅಮಾನತಿಗೆ ಒಳಗಾದ ಸಂಸದರ ಸಂಖ್ಯೆ 2 ದಿನದಲ್ಲಿ 45ಕ್ಕೇರಿದೆ. ಒಟ್ಟಾರೆ 5 ಕಲಾಪಗಳ ಮಟ್ಟಿಗೆ ಇವರನ್ನು ಸಸ್ಪೆಂಡ್‌ ಮಾಡಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಸಂಸದರು ಅಮಾನತು ಆಗುತ್ತಿರುವುದು ಇದೇ ಮೊದಲು.

ಈ ಹಿಂದೆ 2014ರ ಫೆಬ್ರವರಿಯಲ್ಲಿ ಆಂಧ್ರಪ್ರದೇಶದ 18 ಸಂಸದರನ್ನು ಸ್ಪೀಕರ್‌ ಮೀರಾ ಕುಮಾರ್‌ ಅಮಾನತು ಮಾಡಿದ್ದರು. ಈ ದಾಖಲೆಯನ್ನು ಸುಮಿತ್ರಾ ಮುರಿದಿದ್ದಾರೆ. ಲೋಕಸಭೆಯಲ್ಲಿ ಅಣ್ಣಾ ಡಿಎಂಕೆ 37 ಹಾಗೂ ತೆಲುಗುದೇಶಂ 15 ಸಂಸದರನ್ನು ಹೊಂದಿವೆ.

ಅಮಾನತಾದವರಲ್ಲಿ ತೆಲುಗದೇಶಂನವರಾದ ಕೇಂದ್ರದ ಮಾಜಿ ವಿಮಾನಯಾನ ಸಚಿವ ಅಶೋಕ ಗಜಪತಿರಾಜು ಅವರೂ ಸೇರಿದ್ದಾರೆ.

ಬುಧವಾರವಷ್ಟೇ 24 ಅಣ್ಣಾ ಡಿಎಂಕೆ ಸಂಸದರು ಅಮಾನತಾಗಿದ್ದರೂ ಇದರಿಂದ ಪಾಠ ಕಲಿಯದ ಟಿಡಿಪಿ ಹಾಗೂ ಅಣ್ಣಾಡಿಎಂಕೆ ಸಂಸದರು, ಗುರುವಾರ ಬೆಳಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಮತ್ತೆ ಆಂಧ್ರಪ್ರದೇಶ ವಿಶೇಷ ಸ್ಥಾನಮಾನ ಪರವಾಗಿ ಹಾಗೂ ಕರ್ನಾಟಕ ಕೈಗೊಳ್ಳುತ್ತಿರುವ ಮೇಕೆದಾಟು ಯೋಜನೆ ವಿರುದ್ಧವಾಗಿ ಗದ್ದಲ ಆರಂಭಿಸಿದರು. ಘೋಷಣೆ ಕೂಗುತ್ತ ಸದನದ ಬಾವಿಗೆ ಇಳಿದರು.

ಇದರಿಂದ ಕೋಪಗೊಂಡ ಸುಮಿತ್ರಾ ಅವರು, ‘ಗದ್ದಲ ಎಬ್ಬಿಸಿ ಸದನಕ್ಕೆ ಅಡ್ಡಿಪಡಿಸುತ್ತಿದ್ದರಿಂದ 19 ಸಂಸದರನ್ನು ಅಮಾನತು ಮಾಡುತ್ತಿದ್ದೇನೆ’ ಎಂದು ಘೋಷಿಸಿದರು. ಇನ್ನು ಭೋಜನ ವಿರಾಮದ ನಂತರ ಮಧ್ಯಾಹ್ನ 2ಕ್ಕೆ ಸದನ ಸಮಾವೇಶಗೊಂಡಾಗ ಮತ್ತಿಬ್ಬರು ತೆಲುಗುದೇಶಂ ಸಂಸದರು ಗಲಾಟೆ ಆರಂಭಿಸಿದರು. ಆಗ ಅವರನ್ನೂ ಸ್ಪೀಕರ್‌ ಅಮಾನತು ಮಾಡಿದರು.

ಈ ನಡುವೆ ಸದನ ಮುಂದೂಡಿಕೆಯಾದ ಸಂದರ್ಭದಲ್ಲಿ ಕೂಡ ಹಲವು ತೆಲುಗುದೇಶಂ ಸಂಸದರು ಸ್ಪೀಕರ್‌ ಪೋಡಿಯಂ ಹತ್ತಿ ಸದನದಿಂದ ಕದಲದೇ ಫಲಕ ಹಿಡಿದುಕೊಂಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.