ಕರ್ನಾಟಕದ ಸಮೀಕ್ಷೆಯಲ್ಲಿ ರಾಹುಲ್ ಗಾಂಧಿ ವೋಟ್ ಚೋರಿ ಕತೆ ಬಯಲು, ಪೇಚಿಗೆ ಸಿಲುಕಿದ ಕಾಂಗ್ರೆಸ್, ಮತಗಳ್ಳತನದ ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿಗೆ ಇದೀಗ ಕರ್ನಾಟಕದಲ್ಲಿ ಮಾಡಿದ ಸಮೀಕ್ಷೆ ಅಂಕಿ ಅಂಶಗಳೇ ತಿರುಗುಬಾಣವಾಗಿದೆ. 

ಬೆಂಗಳೂರು (ಜ.08) ಚುನಾವಣಾ ಸೋಲಿನ ಬೆನ್ನಲ್ಲೇ ಆರೋಪಗಳು ಸಹಜ. ಆದರೆ ದೇಶದಲ್ಲಿ ಚುನಾವಣಾ ಆಯೋಗದ ಮೇಲೆ ಸತತ ಆರೋಪ ಕೇಳಿಬರುತ್ತಿರುವುದು ಇದೇ ಮೊದಲು. ದೇಶದ ಸ್ವತಂತ್ರ ಸಂಸ್ಥೆಗಳ ಮೇಲೆ ಗುರುತರ ಆರೋಪ ಸತತವಾಗಿ ನಡೆಯುತ್ತಿದೆ. ಕೇಂದ್ರ ಚುನಾವಣಾ ಆಯೋಗದ ನೆರವಿನಿಂದ ಕೇಂದ್ರದ ಬಿಜೆಪಿ ಸರ್ಕಾರ ಮತಗಳ್ಳತನ ಮಾಡಿ ಚುನಾವಣೆ ಗೆಲ್ಲುತ್ತಿದೆ ಅನ್ನೋದು ಕಾಂಗ್ರೆಸ್ ನಾಯಕ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸತತ ಆರೋಪ ಮಾಡುತ್ತಿದ್ದಾರೆ. ಮತಪಟ್ಟಿಲ್ಲಿನ ಕೆಲ ತಾಂತ್ರಿಕ ದೋಷಗಳ ಪಟ್ಟಿಯನ್ನೇ ಮುಂದಿಟ್ಟಿ ಸುದ್ದಿಗೋಷ್ಠಿ ಮಾಡಿ ಹೈಡ್ರೋಜನ್ ಬಾಂಬ್ ಸಿಡಿಸಿದ್ದರು. ಆದರೆ ರಾಹುಲ್ ಗಾಂಧಿ ಸಿಡಿಸಿದ ಎಲ್ಲಾ ಬಾಂಬ್‌ಗಳಿಗೆ ಚುನಾವಣಾ ಆಯೋಗ ದಾಖಲೆ ಸಮೇತ ಉತ್ತರ ನೀಡಿತ್ತು. ಇದರ ಬೆನ್ನಲ್ಲೇ ಕರ್ನಾಕದಲ್ಲಿ ನಡೆಸಿದ ಸಮೀಕ್ಷೆ ರಾಹುಲ್ ಗಾಂಧಿಗೆ ತಿರುಗುಬಾಣವಾಗಿದೆ. ಮತಗಳ್ಳತನ ಆರೋಪಕ್ಕೆ ಕರ್ನಾಟಕ ಸಮೀಕ್ಷೆ ಅಂಕಿ ಅಂಶಗಳು ಉತ್ತರ ನೀಡಿದೆ.

ಕಾಂಗ್ರೆಸ್ ಸರ್ಕಾರದ ಸಮೀಕ್ಷೆಯಲ್ಲಿ ರಾಹುಲ್ ಗಾಂಧಿ ಕಟ್ಟು ಕತೆ ಬಯಲು

ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ ನಿಯೋಜಿಸಿದ ಸಮೀಕ್ಷೆಯು ಇವಿಎಂ (EVM), ವಿವಿಪ್ಯಾಟ್ (VVPAT) ಮತ್ತು ಭಾರತದ ಚುನಾವಣಾ ಪ್ರಕ್ರಿಯೆಯ ನ್ಯಾಯಸಮ್ಮತತೆಯ ಮೇಲೆ ಸಾರ್ವಜನಿಕರಿಗೆ ಇರುವ ನಂಬಿಕೆಯನ್ನು ದೃಢಪಡಿಸಿದೆ. ಇದು ವಿರೋಧ ಪಕ್ಷಗಳು ಸೃಷ್ಟಿಸಿದ ಸುಳ್ಳು ಕಥೆಗಳನ್ನು ತಳ್ಳಿಹಾಕಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಜಾರಿಗೆ ತಂದ 'ಸ್ವೀಪ್' (SVEEP) ಕಾರ್ಯಕ್ರಮದ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಲು "ಲೋಕಸಭಾ ಚುನಾವಣೆ 2024 - ನಾಗರಿಕರ ಜ್ಞಾನ, ಮನೋಭಾವ ಮತ್ತು ಅಭ್ಯಾಸದ (KAP) ಸಮೀಕ್ಷೆ"ಯನ್ನು ನಡೆಸಲಾಗಿತ್ತು. ಕಾಂಗ್ರೆಸ್ ಸರ್ಕಾರದ ಆಡಳಿತ ಇರುವ ಕರ್ನಾಟಕದಲ್ಲಿ ಇವಿಎಂ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದವರ ಸಂಖ್ಯೆಯೇ ಹೆಚ್ಚಿದೆ. ವಿಶೇಷ ಅಂದರೆ ಬಲವಾಗಿ ಇವಿಎಂ ಮೇಲಿನ ವಿಶ್ವಾಸ, ಇವಿಎಂನಿಂದ ಮತಗಳ್ಳತನ ಅಸಾಧ್ಯ ಎಂದು ಹೇಳಿದವರ ಸಂಖ್ಯೆ ಹೆಚ್ಚಿದೆ.

5000ಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿ ಸಮೀಕ್ಷೆ

ಕರ್ನಾಟಕದ ನಾಲ್ಕು ವಿಭಾಗಗಳಾದ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಾದ್ಯಂತ ಗ್ರಾಮೀಣ, ನಗರ ಮತ್ತು ಮೀಸಲು ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟು 5,001 ವ್ಯಕ್ತಿಗಳಿಂದ ಮಾದರಿ ಸಂಗ್ರಹಿಸಲಾಗಿತ್ತು. ಆದರೆ, ಈ ಸಮೀಕ್ಷೆಯ ಫಲಿತಾಂಶಗಳು ಇವಿಎಂ ಹ್ಯಾಕಿಂಗ್, 'ವೋಟ್ ಚೋರಿ' ಮತ್ತು ರಾಹುಲ್ ಗಾಂಧಿ ಹೇಳುತ್ತಿದ್ದ 'ಹೈಡ್ರೋಜನ್ ಬಾಂಬ್' ಎಂಬ ಹಣೆಪಟ್ಟಿಯ ಆರೋಪಗಳನ್ನೆಲ್ಲ ಸಂಪೂರ್ಣವಾಗಿ ತಳ್ಳಿಹಾಕಿವೆ.

ಎಲ್ಲಾ ಪ್ರದೇಶಗಳಲ್ಲಿ ಇವಿಎಂ ನಿಖರತೆಯ ಬಗ್ಗೆ ಅಪಾರ ವಿಶ್ವಾಸ ವ್ಯಕ್ತವಾಗಿದೆ. 83.61% ರಷ್ಟು ಜನರು ಇವಿಎಂಗಳು ನಿಖರವಾದ ಫಲಿತಾಂಶ ನೀಡುತ್ತವೆ ಎಂದು ಬಲವಾಗಿ ನಂಬಿದ್ದಾರೆ. ಕಲಬುರಗಿ ಭಾಗದಲ್ಲಿ ಅತಿ ಹೆಚ್ಚು ಅಂದರೆ 94.48% ರಷ್ಟು ನಂಬಿಕೆ ವ್ಯಕ್ತವಾಗಿದೆ.

ಭಾರತದ ಚುನಾವಣೆಗಳ ನ್ಯಾಯಸಮ್ಮತತೆಯ ಬಗ್ಗೆ ಸಾರ್ವಜನಿಕರಲ್ಲಿ ಆಳವಾದ ವಿಶ್ವಾಸವಿದೆ. ಒಟ್ಟು 84.55% ರಷ್ಟು ಜನರು ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುತ್ತವೆ ಎಂದು ನಂಬಿದ್ದಾರೆ. ಇಲ್ಲೂ ಸಹ ಕಲಬುರಗಿ 94.86% ರಷ್ಟು ಬೆಂಬಲದೊಂದಿಗೆ ಮುಂಚೂಣಿಯಲ್ಲಿದೆ. ವಿವಿಪ್ಯಾಟ್ ಬಗ್ಗೆ ಜನರಲ್ಲಿ ವ್ಯಾಪಕ ಅರಿವಿದೆ. 85.39% ರಷ್ಟು ಜನರಿಗೆ ವಿವಿಪ್ಯಾಟ್ ಬಗ್ಗೆ ತಿಳಿದಿದೆ. ಮತದಾನ ಮಾಡುವಾಗ ಸುಮಾರು ಮೂರನೇ ಎರಡರಷ್ಟು (65.39%) ಜನರು ವಿವಿಪ್ಯಾಟ್ ಅನ್ನು ನೇರವಾಗಿ ನೋಡಿದ್ದಾರೆ. ಕಲಬುರಗಿಯಲ್ಲಿ 82.48% ಜನರು ಮತದಾನದ ವೇಳೆ ಇದನ್ನು ಗಮನಿಸಿದ್ದಾರೆ.

ಇವಿಎಂ ನಿಖರತೆಯ ಮೇಲಿನ ವಿಶ್ವಾಸದ ಅಭಿಪ್ರಾಯ (ಶೇಕಡಾವಾರು)

ಭಾರತದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಬಗ್ಗೆ ಅಭಿಪ್ರಾಯ

ಚುನಾವಣಾ ಸಾಕ್ಷರತೆ ಮತ್ತು ವಿವಿಪ್ಯಾಟ್ ಬಗ್ಗೆ ಅಭಿಪ್ರಾಯ

ಮಹದೇವಪುರ, ಆಳಂದ ವಿಧಾನಸಭಾ ಕ್ಷೇತ್ರ

ಕರ್ನಾಟಕದ ಮಹದೇವಪುರ ಮತ್ತು ಆಳಂದ ವಿಧಾನಸಭಾ ಕ್ಷೇತ್ರಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿಯವರು ಭಾರತದ ಪ್ರಜಾಪ್ರಭುತ್ವ ಮತ್ತು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಇದನ್ನು 'ಹೈಡ್ರೋಜನ್ ಬಾಂಬ್' ಎಂದೂ ಕರೆದಿದ್ದರು. ಆದರೆ ಕರ್ನಾಟಕದ ಈ ಸಮೀಕ್ಷೆಯು ಅವರ ಆರೋಪಗಳಿಗೆ ಕನ್ನಡಿ ಹಿಡಿದಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಯಲ್ಲೇ ಜನರು ಇವಿಎಂ ಮತ್ತು ಚುನಾವಣಾ ಪ್ರಕ್ರಿಯೆಯ ಮೇಲೆ ಅತಿ ಹೆಚ್ಚು ನಂಬಿಕೆ ಇಟ್ಟಿರುವುದು ಈ ತಂದೆ-ಮಗನ ಜೋಡಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇವಿಎಂ ನಿಖರತೆ ಇರಲಿ ಅಥವಾ ಮುಕ್ತ ಚುನಾವಣೆಗಳ ಬಗ್ಗೆ ಇರುವ ನಂಬಿಕೆ ಇರಲಿ, ಕಲಬುರಗಿಯು ಚುನಾವಣಾ ಪ್ರಾಮಾಣಿಕತೆಯನ್ನು ಬೆಂಬಲಿಸುವಲ್ಲಿ ಮುಂಚೂಣಿಯಲ್ಲಿದೆ.

ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದ ದತ್ತಾಂಶಗಳೇ ಕಾಂಗ್ರೆಸ್‌ನ ಕಥೆಗಳನ್ನು ಧ್ವಂಸಗೊಳಿಸಿವೆ. ಕಾಂಗ್ರೆಸ್ ನಾಯಕರು ಸಾಂಸ್ಥಿಕ ಪತನದ ಬಗ್ಗೆ ಮಾತನಾಡಿದರೆ, ನಾಗರಿಕರು ಅದಕ್ಕೆ ವಿರುದ್ಧವಾದ ಸತ್ಯವನ್ನು ವರದಿ ಮಾಡಿದ್ದಾರೆ. ಇದು ಭಯಮುಕ್ತ ಮತ್ತು ವಿಶ್ವಾಸಪೂರ್ಣ ಪ್ರಜಾಪ್ರಭುತ್ವದ ಸಂಕೇತವಾಗಿದೆ.

ಭೂಮಟ್ಟದ ವಾಸ್ತವದ ಮುಂದೆ ಆರೋಪಗಳು ಕೇವಲ ಗದ್ದಲಗಳಾಗಿ ಉಳಿಯುತ್ತವೆ. ಈ ಸಂದರ್ಭದಲ್ಲಿ, ಕನ್ನಡಿಗರ ಮೌನ, ವಿಶ್ವಾಸವು, ಆರೋಪಗಳನ್ನು ಶಾಂತಗೊಳಿಸಿದೆ. 91.31% ನಾಗರಿಕರು ಚುನಾವಣೆಗಳು ನ್ಯಾಯಯುತವಾಗಿ ನಡೆಯುತ್ತವೆ ಎಂದು ನಂಬಿರುವುದರಿಂದ, 'ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂಬ ಕಾಂಗ್ರೆಸ್ ಆರೋಪವು ಪ್ರಸ್ತುತತೆ ಕಳೆದುಕೊಂಡಿದೆ. ಕೊನೆಗೂ 83.61% ಜನರ ನಂಬಿಕೆಯನ್ನು ಗಳಿಸಿ ಇವಿಎಂ ವಿಜಯದ ನಗು ಬೀರಿದೆ.

90.16% ಮತದಾರರು ಮತದಾನದ ಅನುಭವವನ್ನು "ಅನುಕೂಲಕರ" ಎಂದು ಹೇಳಿದ್ದಾರೆ. ಇದು ಮತದಾರರಿಗೆ ವ್ಯವಸ್ಥೆಯ ಸುಗಮತೆ ಬೇಕೇ ಹೊರತು ಸೋತವರ ಪಿತೂರಿ ಸಿದ್ಧಾಂತಗಳಲ್ಲ ಎಂಬುದನ್ನು ತೋರಿಸುತ್ತದೆ. ತಂತ್ರಜ್ಞಾನವು ಪಾರದರ್ಶಕತೆಯನ್ನು ತಂದಿದೆ. 2018 ರಿಂದೀಚೆಗೆ 67% ಕ್ಕೂ ಹೆಚ್ಚು ನಾಗರಿಕರಿಗೆ ವಿವಿಪ್ಯಾಟ್‌ನ ಪರಿಶೀಲನಾ ಕಾರ್ಯವಿಧಾನದ ಬಗ್ಗೆ ಅರಿವು ಮೂಡಿದೆ.

ಗ್ರಾಮೀಣ, ದಲಿತ ಮತ್ತು ಹಿಂದುಳಿದ ಸಮುದಾಯಗಳನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬ ಕಾಂಗ್ರೆಸ್ ವಾದಕ್ಕೆ ವಿರುದ್ಧವಾಗಿ, ಇದೇ ಮತದಾರರು ವ್ಯವಸ್ಥೆಯ ಮೇಲೆ ಅತಿ ಹೆಚ್ಚು ನಂಬಿಕೆ ಇಟ್ಟಿದ್ದಾರೆ. 81.39% ರಷ್ಟು ಜನರು ಪ್ರತಿಯೊಂದು ಮತವೂ ಎಣಿಕೆಯಾಗುತ್ತದೆ ಎಂದು ನಂಬಿದ್ದಾರೆ.

ಚುನಾವಣಾ ಸಿಬ್ಬಂದಿಯ ಪ್ರಾಮಾಣಿಕತೆಯ ಬಗ್ಗೆಯೂ ಕಾಂಗ್ರೆಸ್ ಪ್ರಶ್ನಿಸಿತ್ತು. ಆದರೆ 95% ಮತದಾರರು ಚುನಾವಣಾ ಸಿಬ್ಬಂದಿ ಸಹಕಾರ ನೀಡಿದ್ದಾರೆ ಎಂದು ಹೇಳುವ ಮೂಲಕ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಈ ಸಮಗ್ರ ಅಧ್ಯಯನವನ್ನು ಮಾಡಿಸಿದೆ. ಇದರ ಫಲಿತಾಂಶಗಳು ಸ್ಪಷ್ಟವಾಗಿವೆ: ಮತದಾರರು ಚುನಾವಣಾ ಆಯೋಗದ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದಾರೆ. 'ವೋಟ್ ಚೋರಿ', 'ಇವಿಎಂ ಹ್ಯಾಕಿಂಗ್' ಮುಂತಾದ ಆರೋಪಗಳನ್ನು ಸ್ವತಃ ಮತದಾರರೇ ತಿರಸ್ಕರಿಸಿದ್ದಾರೆ. 

ಬಿಹಾರ ಚುನಾವಣೆಗೂ ಮೊದಲು ಗಂಭೀರ ಆರೋಪ ಮಾಡಿದ್ದ ರಾಹುಲ್ ಗಾಂಧಿ, ಫಲಿತಾಂಶ ಬೆನ್ನಲ್ಲೇ ಸೋಲಿನ ಕಾರಣ ತಾನು ಮೊದಲೇ ಹೇಳಿದ್ದ ಎಂದು ಸಮರ್ಥಿಸಿಕೊಂಡಿದ್ದರು. ಇದೇ ವೇಳೆ ಕಾಂಗ್ರೆಸ್ ಗೆದ್ದ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಗೆಲುವು ಎಂದು ಸಂಭ್ರಮಿಸಿತ್ತು. ಇನ್ನು ಇತ್ತೀಚೆಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೇರಳದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಸಿಪಿಎಂ ಅಧಿಪತ್ಯ ಅಂತ್ಯಗೊಳಿಸಿದ ಕಾಂಗ್ರೆಸ್ ನೇತತ್ವದ ಯುಡಿಎಫ್ ಭಾರಿ ಗೆಲುವು ದಾಖಲಿಸಿತ್ತು. ಇದು ಪ್ರಜಾಪ್ರಭುತ್ವ ಗೆಲುವು ಎಂದು ಸಂಭ್ರಮಿಸಿತ್ತು. ಆದರೆ ಸೋಲಿಗೆ ಪರಾಮರ್ಶೆ ನಡೆಸದೆ ನೇರವಾಗಿ ಚುನಾವಣಾ ಸಂಸ್ಥೆಗಳ ಮೇಲೆ ಮಾಡುತ್ತಿರುವ ಗಂಭೀರ ಆರೋಪ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವರ್ಚಿಸ್ಸಿಗೆ ಧಕ್ಕೆ ತರುತ್ತಿದೆ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ರಾಹುಲ್ ಗಾಂಧಿಯ ಪ್ರಮುಖ ಆರೋಪಗಳಿಗೆ ಸ್ಪಷ್ಟ ದಾಖಲೆ ಇಲ್ಲ. ಇದೇ ವೇಳೆ ಆರೋಪ ಮಾಡುತ್ತಾ ನೀಡುತ್ತಿರುವ ದಾಖಲೆಗಳು ಸಮಂಜವಾಗಿಲ್ಲ ಅನ್ನೋ ಸತ್ಯ ಕಾಂಗ್ರೆಸ್ ಹಲವು ನಾಯಕರಿಗೂ ತಿಳಿದಿದೆ.