ಮುಂಬೈ[ಜು.12]: ತಾವು ನೀಡಿದ ಸಾಲ ಮರುಪಾವತಿಗಾಗಿ ಬ್ಯಾಂಕ್‌ಗಳು ಗ್ರಾಹಕರಿಗೆ ನೋಟಿಸ್‌ ಹಾಗೂ ಎಚ್ಚರಿಕೆ ಸೇರಿದಂತೆ ಏನೆಲ್ಲಾ ಸರ್ಕಸ್‌ ಮಾಡುವ ಈಗಿನ ದಿನಮಾನದಲ್ಲಿ 30 ವರ್ಷದ ಹಿಂದೆ ಪಡೆದ 200 ರು. ಸಾಲ ಮರುಪಾವತಿಗಾಗಿ ದೂರದ ಕೀನ್ಯಾದಿಂದ ವ್ಯಕ್ತಿಯೊಬ್ಬರು ಭಾರತಕ್ಕೆ ಬಂದ ಅಪರೂಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ತಾವು ಸಾಲವಾಗಿ ನೀಡಿದ್ದ ಹಣ ವಾಪಸ್‌ ನೀಡಲು ಬಂದ ರಿಚರ್ಡ್‌ನನ್ನು ಕಂಡ ಔರಂಗಾಬಾದ್‌ನ ವೃದ್ಧ ಕಾಶಿನಾಥ್‌ ಗವಾಲಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನನ್ನ ಕಣ್ಣನ್ನು ನನಗೇ ನಂಬಲಾಗುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕೀನ್ಯಾದ ಬಾಲಕನಿಗೆ ಬೆಂಗಳೂರು ವೈದ್ಯರಿಂದ ಪುನರ್ಜನ್ಮ! ಚಮತ್ಕಾರ ಅಂದ್ರೆ ಇದೇನಾ?

30 ವರ್ಷದ ಹಿಂದೆ ಪಡೆದಿದ್ದ ಸಾಲ ವಾಪಸ್‌ ಕೊಡಲು ಬಂದ ರಿಚರ್ಡ್‌ ಟೋಂಗಿ ಅವರು ಕೀನ್ಯಾದ ಸಂಸದ ಎಂಬುದು ಮತ್ತೊಂದು ವಿಶೇಷ. ಅಷ್ಟಕ್ಕೂ ಆಗಿದ್ದೇನೆಂದರೆ, 1985-89ರ ಅವಧಿಯಲ್ಲಿ ಔರಂಗಾಬಾದ್‌ನ ಸ್ಥಳೀಯ ಕಾಲೇಜೊಂದರಲ್ಲಿ ರಿಚರ್ಡ್‌ ಅವರು ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಯಾಗಿದ್ದರು. ಈ ವೇಳೆ ಗವಾಲಿ ಅವರ ಬಳಿ ರಿಚರ್ಡ್‌ 200 ರು. ಸಾಲ ಪಡೆದಿದ್ದರು. ಇದನ್ನು ವಾಪಸ್‌ ನೀಡುವ ಸಲುವಾಗಿ ರಿಚರ್ಡ್‌ ತಮ್ಮ ಪತ್ನಿ ಮಿಶೆಲ್‌ ಜೊತೆಗೂಡಿ ಬಂದಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ರಿಚರ್ಡ್‌, ‘ನನ್ನ ವಿದ್ಯಾರ್ಥಿ ದಿಸೆಯಲ್ಲಿ ಈ ಎಲ್ಲ ಜನ ನನಗೆ ನೆರವು ನೀಡಿದ್ದರು. ಇದು ನನಗೆ ಒಂದು ರೀತಿಯ ಭಾವನಾತ್ಮಕ ಘಟನೆಯಾಗಿದೆ. ನನ್ನನ್ನು ಊಟಕ್ಕಾಗಿ ಹೋಟೆಲ್‌ಗೆ ಕರೆದೊಯ್ಯಲು ಗವಾಲಿ ನಿರ್ಧರಿಸಿದ್ದರು. ಆದರೆ, ನಾನು ಅವರ ಮನೆಯಲ್ಲೇ ಊಟ ಮಾಡಿದೆ’ ಎಂದರು.