ಬೆಂಗಳೂರು[ಡಿ.07]: ಪಾರ್ಶ್ವವಾಯು ಕಾಲಯಿಲೆಯಿಂದ ಬಳಲುತ್ತಿದ್ದ, ಕಳೆದ 1 ವರ್ಷದಿಂದ ಓಡಾಡಲು ಆಗದೆ ವೆಂಟಿಲೇಟರ್‌ನಲ್ಲಿದ್ದ ಕೀನ್ಯಾ ಮೂಲದ 7 ವರ್ಷದ ಬಾಲಕನಿಗೆ ಬೆಂಗಳೂರು ವೈದ್ಯರು ಮರುಜನ್ಮ ನೀಡಿದ್ದಾರೆ. ಬೆಂಗಳೂರಿನ ವೈದ್ಯರು ಮಾಡಿದ ಚಮತ್ಕಾರದಿಂದಾಗಿ ಬಾಲಕ ಓಡಾಡಲಾರಂಭಿಸಿದ್ದು, ಆತನ ಪೋಷಕರು ಧನ್ಯವಾದ ತಿಳಿಸಿದ್ದಾರೆ.

ಕೀನ್ಯಾದ ಮೊಂಬಾಸಾದ 7 ವರ್ಷದ ಬಾಲಕ ಬ್ಲಾಸಿಯೋ ಯೋಕೋ ಯಮು 2016ರಲ್ಲಿ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಅಪಘಾತದಲ್ಲಿ ಮೆದುಳು ಹಾಗೂ ಬೆನ್ನುಹುರಿಗೆ ತೀವ್ರ ಪೆಟ್ಟಾಗಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ. ಕುತ್ತಿಗೆ ಕೆಳಗಿನ ಭಾಗ ಸಂಪೂರ್ಣ ನಿಷ್ಕ್ರಿಯವಾಗಿದ್ದರಿಂದ ವೆಂಟಿಲೇಟರ್‌ನಲ್ಲಿ ಒಂದು ವರ್ಷದಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ.

ಕೀನ್ಯಾದಲ್ಲಿ ಬಾಲಕನ ಕುತ್ತಿಗೆ ಮುರಿತಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿತ್ತಾದರೂ ಬೆನ್ನುಹುರಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ವಿಫಲರಾಗಿದ್ದರು. ಇದರಿಂದ ಬಾಲಕನಿಗೆ ಉಸಿರಾಟದ ತೊಂದರೆಯೂ ತಲೆದೋರಿತ್ತು. ಇದರಿಂದ ಚಿಂತಿತರಾದ ಆತನ ಪೋಷಕರು 2018ರ ಆಗಸ್ಟ್ ನಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಗೆ ಕರೆತಂದಿದ್ದರು. 

ಬೆಮಗಳೂರು ವೈದ್ಯರು ಬಾಲಕನಿಗೆ ಸೂಕ್ತ ಚಿಕಿತ್ಸೆ ನೀಡಲು ಯಶಸ್ವಿಯಾಗಿದ್ದಾರೆ. ಈವರೆಗೂ ವೆಂಟಿಲೇಟರ್ ನಲ್ಲಿದ್ದ ಬಾಲಕ ಸ್ವತಂತ್ರ್ಯವಾಗಿ ಓಡಾಡುತ್ತಿದ್ದು, ಶೀಘ್ರದಲ್ಲೇ ಸಂಪೂರ್ಣ ಗುಣಮುಖನಾಗುತ್ತಾನೆಂದು ವೈದ್ಯರು ತಿಳಿಸಿದ್ದಾರೆ. ಬಾಲಕನ ಚಿಕಿತ್ಸೆಗೆ ತಗುಲಿದ ವೆಚ್ಚ ಕೀನ್ಯಾ ಸರ್ಕಾರವೇ ಭರಿಸಲಿದೆ ಎಂದು ತಾಯಿ ತಿಳಿಸಿದ್ದಾರೆ.