ಶಿಕಾಗೋ[ಮೇ.18]: ಅಮೆರಿಕಾದ ಶಿಕಾಗೋದಲ್ಲಿ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಗರ್ಭಿಣಿ ಯುವತಿಯ ಹತ್ಯೆಗೈದ ಆರೋಪದಡಿಯಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇನ್ನು ಯುವತಿಯನ್ನು ಹತ್ಯೆಗೈದ ಬಳಿಕ ಕೊಲೆಗಾರರು ಆಕೆಯ ಹೊಟ್ಟೆ ಬಗೆದು ಮಗುವನ್ನು ಹೊರ ತೆಗೆದಿರುವುದು ಕ್ರೂರತೆಗೆ ಸಾಕ್ಷಿಯಾಗಿದೆ.

19 ವರ್ಷದ ಮಾರ್ಲೆನಾ ಓಚಾವೊ ಲೋಪೆಜ್ ರನ್ನು ಏಪ್ರಿಲ್ 23ರಂದು ಪರಿಚಿತರೊಬ್ಬರು ಮಕ್ಕಳ ಉಪಯೋಗಕ್ಕೆ ಬರುವ ಕೆಲ ಸಾಮಾಗ್ರಿಗಳನ್ನು ನೀಡುವ ಆಮಿಷವೊಡ್ಡಿ ಕರೆಸಿಕೊಂಡಿದ್ದಾರೆ. ಆದರೆ ಲೋಪೆಜ್ ಅಲ್ಲಿ ತಲುಪುತ್ತಿದ್ದಂತೆಯೇ ಕತ್ತು ಹಿಸುಕಿ ಹತ್ಯೆಗೈಯ್ಯಲಾಗಿದೆ. ಬಳಿಕ ಹೊಟ್ಟೆ ಬಗೆದು ಆಕೆಯ ಮಗುವನ್ನು ಹೊರತೆಗೆದು ರಕ್ಕಸತನ ಮೆರೆದಿದ್ದಾರೆ.

ತನಿಖೆ ನಡೆಸಿರುವ ಪೊಲೀಸರು ಕ್ಲಾರಿಸಾ ಫಿಗ್ಯುರೋವಾ[34] ಹಾಗೂ ಅವರ ಪುತ್ರಿ[24] ಯನ್ನು ಆರೋಪಿಗಳೆಂದು ಪರಿಗಣಿಸಿ FIR ದಾಖಲಿಸಿದ್ದಾರೆ. ಅಲ್ಲದೇ ಫಿಗ್ಯುರೋವಾ ಪ್ರಿಯಕರ ಪಿಯೋಟ್ರ್ ಬೋಬಾಕ್[40] ವಿರುದ್ದ ಕೊಲೆ ಪ್ರಕರಣವನ್ನು ಮುಚ್ಚಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ.

ಪ್ರಕರಣದ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು 'ಈ ವೇಳೆ ಮೃತ ಗರ್ಭಿಣಿ ಮಹಿಳೆಯ ಕುಟುಂಬಸ್ಥರ ಪರಿಸ್ಥಿತಿ ಹೇಗಿದೆ ಎಂದು ಕಲ್ಪಿಸಿಕೊಳ್ಳಲೂ ನನ್ನಿಂದ ಸಾಧ್ಯವಿಲ್ಲ. ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದ ಕುಟುಂಬವೀಗ ತಾಯಿ ಹಾಗೂ ಹುಟ್ಟಬೇಕಿದ್ದ ಮಗುವನ್ನು ಕಳೆದುಕೊಂಡಿರುವ ದುಃಖದಲ್ಲಿದೆ' ಎಂದಿದ್ದಾರೆ.

ಇನ್ನು ಓಚಾವೊ ಲೋಪೆಜ್ ರನ್ನು ಕೊನೆಯ ಬಾರಿ ನೋಡಿದ ಸಮಯದ ಸುಮಾರು ನಾಲ್ಕು ಗಂಟೆಯ ಬಳಿಕ ತುರ್ತುಸೇವೆ ಸಿಬ್ಬಂದಿಗೆ ಕರೆ ಮಾಡಿದ ಫಿಗ್ಯುರೋವಾ ತಾನೊಂದು ಮಗುವಿಗೆ ಜನ್ಮ ನೀಡಿದ್ದು, ಸದ್ಯಕ್ಕದು ಉಸಿರಾಡುತ್ತಿಲ್ಲ ಎಂದು ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಗಂಭಿರ ಸ್ಥಿತಿಯಲ್ಲಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 

ಓಚಾವೊ ಲೋಪೆಜ್ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀರಿಗೆ ಆಕೆ ಸೋಷಿಯಲ್ ಮೀಡಿಯಾದಲ್ಲಿ ಫಿಗ್ಯುರೋವಾ ಜೊತೆ ಚಾಟಿಂಗ್ ಮಾಡಿರುವ ವಿಚಾರ ತಿಳಿದು ಬಂದಿದೆ. ಕೂಡಲೇ ಫಿಗ್ಯುರೋವಾ ಮನೆಗೆ ದಾಳಿ ನಡೆಸಿದ ಪೊಲೀಸರು ಆಕೆಯ ಮನೆಯಲ್ಲಿದ್ದ ಟ್ರಂಕ್ ಒಂದರಲ್ಲಿ ಮುಚ್ಚಿಟ್ಟ ತಾಯಿಯ ಮೃತದೇಹ ಕಂಡು ಬೆಚ್ಚಿ ಬಿದ್ದಿದ್ದಾರೆ. ತನಿಖೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾದ ಮಗು ಓಚಾವೊ ಲೋಪೆಜ್ ರದು ಎಂಬ ಸತ್ಯ ಬಯಲಾಗಿದೆ. DNA ಪರೀಕ್ಷೆಯಲ್ಲೂ ಸಾಬೀತಾಗಿದೆ.

ಕೊಲೆಗೆ ಕಾರಣವೇನು: ಎರಡು ವರ್ಷಗಳ ಹಿಂದೆ ಕ್ಲಾರಿಸಾ ಮಗ ಸಹಜವಾಗಿಯೇ ಸಾವನ್ನಪ್ಪಿದ್ದ, ಆಕೆಗೆ ಮತ್ತೊಂದು ಮಗುವನ್ನು ಪಡೆಯಬೇಕೆಂಬ ಹಂಬಲವಿತ್ತು. ಕ್ಲಾರಿಸಾಳನ್ನು ಯಾರಿಗೂ ಗೊತ್ತಾಗದಂತೆ ಕೊಲೆ ಮಾಡಿ ಆಕೆಯ ಮಗುವನ್ನು ತಾನು ಸಾಕಿ ಬಿಡಬೇಕು ಎನ್ನುವ ಹುಚ್ಚು ಧೈರ್ಯ ಮಾಡಿದ್ದಳು. ಇದೇ ಕಾರಣದಿಂದ ಮಾರ್ಲೆನ್‍ಳನ್ನು ಕೊಲೆ ಮಾಡಿ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಹೊರತೆಗೆದಿದ್ದಾಳೆ.

ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.