ನವದೆಹಲಿ: ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಅಣ್ಣನ ಮಗ ಸೇರಿ ಇಬ್ಬರು ಪುಲ್ವಾಮಾ ದಾಳಿ ಹಿಂದಿನ ರೂವಾರಿಗಳಾಗಿರಬಹುದು ಎಂದು ಭದ್ರತಾ ಅಧಿಕಾರಿಗಳು ಹಾಗೂ ಉಗ್ರ ನಿಗ್ರಹ ತಜ್ಞರು ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ. 

ಮಸೂದ್ ಅಜರ್‌ಗೆ ಅಥರ್ ಇಬ್ರಾಹಿಂ ಎಂಬ ಅಣ್ಣನಿದ್ದಾನೆ. ಆತನ ಪುತ್ರ ಮೊಹಮ್ಮದ್ ಉಮೇರ್ ಎಂಬಾತನೇ ಪುಲ್ವಾಮಾ ದಾಳಿ ಹಿಂದಿನ ‘ಮಾಸ್ಟರ್‌ಮೈಂಡ್’ ಇದ್ದಂತಿದೆ. ಇದೇ ವೇಳೆ ಜೈಷ್ ಸಂಘಟನೆಯ ಅಬ್ದುಲ್ ರಶೀದ್ ಗಾಜಿ ಎಂಬಾತ ಕೂಡ ಈ ದಾಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದಾನೆ ಎನ್ನಲಾಗುತ್ತಿದೆ. ಆತ ಇರುವ ಜಾಗ ಪತ್ತೆಯಾಗಿದೆ ಎಂದೂ ಹೇಳಲಾಗುತ್ತಿದೆ.

ಹುತಾತ್ಮ ಅಪ್ಪನ ಚಿತೆಗೆ ಬೆಂಕಿ ಸ್ಪರ್ಶಿಸಿ, ಪ್ರಜ್ಞೆತಪ್ಪಿ ಬಿದ್ದ 10 ವರ್ಷದ ಮಗಳು!

ಆಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ತರಬೇತಿ ಪಡೆದಿರುವ ಉಮೇರ್, ಕಳೆದ ಅಕ್ಟೋಬರ್‌ನಲ್ಲಿ ತನ್ನ ಸೋದರ ಉಸ್ಮಾನ್ ಹೈದರ್ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಬಳಿಕ ಪುಲ್ವಾಮಾ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ನಡುವೆ, ಪುಲ್ವಾಮಾ ಅಥವಾ ತ್ರಾಲ್ ಪ್ರದೇಶದಲ್ಲಿ ಅಬ್ದುಲ್ ರಶೀದ್ ಗಾಜಿ ಕಾರ್ಯನಿರ್ವಹಿಸುತ್ತಿದ್ದಾನೆ. ಆತನನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಮೌಲಾನಾ ಮಸೂದ್ ಅಜರ್‌ನ ಭಾವಮೈದುನ ಅಬ್ದುಲ್ ರಶೀದ್ ಕಮ್ರಾನ್ ಪುತ್ರ ತಲ್ಹಾ ರಶೀದ್2016 ರ ನ.7 ರಂದು ಇದೇ ಪುಲ್ವಾಮಾ ದಲ್ಲಿ ಹತನಾಗಿದ್ದ. 

ಪುಲ್ವಾಮ ದಾಳಿ: ಭಾರತೀಯ ಕ್ರಿಕೆಟ್ ಕ್ಲಬ್‌ನಲ್ಲಿದ್ದ ಇಮ್ರಾನ್ ಖಾನ್ ಫೋಟೋ ಎತ್ತಂಗಡಿ!

ಪಿಒಕೆಯಲ್ಲಿ: ಪುಲ್ವಾಮಾದಲ್ಲಿ ದಾಳಿ ನಡೆಸಿದ್ದು ಅದಿಲ್ ಅಹಮದ್ ದರ್ ಎಂಬ ಯುವಕ. ಆದರೆ ಆ ಸ್ಫೋಟಕ್ಕೆ ಬಾಂಬ್ ತಯಾರಿಸಿಕೊಟ್ಟವ ಪಾಕ್ ಆಕ್ರಮಿತ ಕಾಶ್ಮೀರದ ಮುಜಫ್ಫರಾಬಾದ್‌ನಲ್ಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.