ನವದೆಹಲಿ[ಫೆ.17]: ಪುಲ್ವಾಮಾದಲ್ಲಿ CRPF ಯೋಧರ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಯೋಧ ಪ್ರದೀಪ್ ಸಿಂಗ್ ಯಾದವ್ ಅಂತಿಮ ಕ್ರಿಯೆಯು ಶನಿವಾರದಂದು ಸುಖ್‌ನೇಸ್‌ಪುರದಲ್ಲಿ ಸಕರ ಸರ್ಕಾರಿ ಗೌರವಗಳೊಂದಿಗೆ ನಡೆದಿದೆ. ಈ ವೇಳೆ ಹುತಾತ್ಮ ಯೋಧನ 10 ವರ್ಷದ ಮಗಳು ಸುಪ್ರಿಯಾ ಯಾದವ್ ತನ್ನ ತಂದೆಯ ಚಿತೆಗೆ ಮುಖಾಗ್ನಿ ಹಚ್ಚಿದ್ದಾರೆ ಹಾಗೂ ಅಂತಿಮ ಕ್ರಿಯೆಗೆ ಆಗಮಿಸಿದ್ದ ಇತರ ಯೋಧರು ತಮ್ಮ  ಗೆಳೆಯನಿಗೆ ಅಂತಿಮವಾಗಿ ಸೆಲ್ಯೂಟ್ ಹೊಡೆಯುವ ಮೂಲಕ ಗೌರವ ಸಲ್ಲಿಸಿದ್ದಾರೆ. ಅಷ್ಟರಲ್ಲೇ ಪ್ರೀತಿಯ ಅಪ್ಪನನ್ನು ಕಳೆದುಕೊಂಡ ನೋವಿನಲ್ಲಿದ್ದ 10 ವರ್ಷದ ಪುಟ್ಟ ಮಗಳು ಪ್ರಜ್ಞೆತಪ್ಪಿ ಬಿದ್ದಿದ್ದು, ಆಕೆಯನ್ನು ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಹುತಾತ್ಮ ಯೋಧನ ಅಂತಿಮ ಕ್ರಿಯೆಗೆ ಆಗಮಿಸಿದ್ದ ಪ್ರತಿಯೊಬ್ಬರ ಕಂಗಳು ತುಂಬಿ ಬಂದಿದ್ದವು. ಇನ್ನು ರಾಜ್ಯದ ಸಚಿವರು ಸೇರಿದಂತೆ ಹಲವು ರಾಜಕೀಯ ಮುಖಂಡರು ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು 'ಶಹೀದ್ ಪ್ರದೀಪ್ ಸಿಂಗ್ ಅಮರ್ ರಹೇ' ಎಂದು ಘೋಷಣೆ ಕೂಗಿದ್ದಾರೆ.

ತಂದೆ, ತಾಯಿ ತಮ್ಮ ಮಗನನ್ನು ಕಳೆದುಕೊಂಡ ಸಂಕಟದಲ್ಲಿದ್ದರೆ, ಅತ್ತ ತಮ್ಮ ಅಣ್ಣನಿಲ್ಲದೆ ರೋದಿಸುತ್ತಿದ್ದ. ನನ್ನ ಗಂಡ ನಾಳೆ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಹೆಂಡತಿಯೂ ತನ್ನ ನೋವು ಹೇಳಿಕೊಳ್ಳಲಾಗದೆ ಅಳುತ್ತಿದ್ದಳು, 10 ವರ್ಷದ ಮಗಳೂ ಅಪ್ಪನನ್ನು ಕಳೆದುಕೊಂಡಿದ್ದೇನೆಂಬ ಸತ್ಯ ಅರಗಿಸಿಕೊಳ್ಳಲಾಗದೆ ಅಳುತ್ತಿದ್ದಳು. ಅದರೆ ಈ ನಡುವೆ ಎರಡೂವರೆ ವರ್ಷದ ಪುಟ್ಟ ಕಂದಮ್ಮ ತನ್ನ ತಂದೆಯನ್ನು ಕಳೆದುಕೊಂಡಿದ್ದೇನೆಂಬ ಅರಿವಿಲ್ಲದೆ, ತಾಯಿ ಯಾಕೆ ಅಳುತ್ತಿದ್ದಾಳೆ ಎಂದು ತಿಳಿಯದೆ ಎಲ್ಲರನ್ನೂ ತನ್ನ ಬೊಗಸೆ ಕಣ್ಣುಗಳಿಂದ ನೋಡುತ್ತಿದ್ದ ದೃಶ್ಯ ಮನ ಹಿಂಡುವಂತಿತ್ತು. 

ಶನಿವಾರದಂದು 30 CRPF ಯೋಧರ ತಂಡವು ಹೂವಿನಿಂದ ಶೃಂಗರಿಸಿದ್ದ ಟ್ರಕ್ ಒಂದರಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಕರೆ ತಂದಿದ್ದರು. ಈ ವೇಳೆ CRPF ತಂಡದ ಡಿಐಜಿ ಜಿ. ಸಿ ಜಸ್ವೀರ್ ಸಿಂಗ್ ಕೂಡಾ ಉಪಸ್ಥಿತರಿದ್ದರು.