ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೇಂದ್ರ ಭಾಗದಲ್ಲಿರುವ ಕರೋಲ್‌ ಬಾಗ್‌ ಬಡಾವಣೆಯಲ್ಲಿನ ನಾಲ್ಕು ಅಂತಸ್ತಿನ ಹೋಟೆಲೊಂದರಲ್ಲಿ ಮಂಗಳವಾರ (ಫೆ.12) ನಸುಕಿನ ಜಾವ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೇ ಏರಿದೆ.  ಪ್ರಾಣ ಉಳಿಸಿಕೊಳ್ಳುವ ಧಾವಂತದಲ್ಲಿ ಮಹಡಿಯಿಂದ ಜಿಗಿದ ಇಬ್ಬರು ಕೂಡ ಮೃತರಲ್ಲಿ ಸೇರಿದ್ದಾರೆ. ಸಾವನ್ನಪ್ಪಿದವರಲ್ಲಿ ಮೂವರು ಕೇರಳ ಪ್ರಜೆಗಳೂ, ಮ್ಯಾನ್ಮಾರ್‌ನ ಇಬ್ಬರು ಬೌದ್ಧ ಬಿಕ್ಕುಗಳು ಕೂಡಾ ಸೇರಿದ್ದಾರೆ.

ಅರ್ಪಿತಾ ಪ್ಯಾಲೇಸ್‌ ಎಂಬ ಹೋಟೆಲ್‌ನಲ್ಲಿ ಸಂಭವಿಸಿರುವ ಈ ದುರ್ಘಟನೆಯಲ್ಲಿ 35 ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೋಟೆಲ್‌ನ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಘಟನೆಗೆ ಶಾರ್ಟ್‌ ಸರ್ಕಿಟ್‌ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ, ದೆಹಲಿ ಸರ್ಕಾರ ಮ್ಯಾಜಿಸ್ಪ್ರೇಟ್‌ ಮಟ್ಟದ ತನಿಖೆಗೆ ಆದೇಶಿಸಿದೆ. ತನ್ನ ನಾಲ್ಕನೇ ವರ್ಷಾಚರಣೆಯನ್ನು ರದ್ದುಗೊಳಿಸಿದೆ. ಈ ನಡುವೆ ಪ್ರಕರಣ ಸಂಬಂಧ ಹೋಟೆಲ್‌ನ ಮ್ಯಾನೇಜರ್‌ ಹಾಗೂ ಇನ್ನೊಬ್ಬ ಸಿಬ್ಬಂದಿಯನ್ನು ಪೊಲಿಸರು ಬಂಧಿಸಿದ್ದಾರೆ.

ಗಾಢ ನಿದ್ರೆಯಲ್ಲಿದ್ದರು:

ಅರ್ಪಿತಾ ಪ್ಯಾಲೇಸ್‌ ಹೋಟೆಲ್‌ನಲ್ಲಿ 45 ಕೋಣೆಗಳು ಇದ್ದು, 53 ಮಂದಿ ಸೋಮವಾರ ರಾತ್ರಿ ತಂಗಿದ್ದರು. ಬೆಳಗಿನ ಜಾವ 3.30ರ ವೇಳೆಗೆ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ಸಂದರ್ಭದಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಹೋಟೆಲ್‌ನ ಕೋಣೆಗಳಲ್ಲಿ ಗೋಡೆಗಳ ಅಂದ ಹೆಚ್ಚಿಸಲು ಹೆಚ್ಚಿನ ಪ್ರಮಾಣದಲ್ಲಿ ಮರ ಬಳಸಲಾಗಿತ್ತು. 

ಇದು ಕೂಡ ಬೆಂಕಿ ವ್ಯಾಪಿಸಲು ಕಾರಣವಾಗಿದೆ. ರಾತ್ರಿ ವೇಳೆ ಘಟನೆ ನಡೆದ ಕಾರಣ, ಬೆಂಕಿ ಮೊದಲ ಮತ್ತು ಎರಡನೇ ಮಹಡಿಗೆ ಹಬ್ಬಿದರೂ ಒಳಗಿದ್ದ ಯಾರಿಗೂ ಗೊತ್ತಾಗಿಲ್ಲ. ಬೆಂಕಿ ಹಬ್ಬಿದ ವಿಷಯ ಅಗ್ನಿಶಾಮಕ ಕಚೇರಿಗೆ ಮುಟ್ಟುವ ವೇಳೆ 4.30 ಆಗಿತ್ತು. ತಕ್ಷಣವೇ ಅಗ್ನಿಶಾಮಕ ದಳದ 24 ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಯತ್ನ ಮಾಡಿದವಾದರೂ, ಅಷ್ಟರೊಳಗಾಗಲೇ ಬೆಂಕಿ ಹಾಗೂ ಅದರಿಂದ ಉಂಟಾದ ವಿಷಪೂರಿತ ಗಾಳಿ ಸೇವಿಸಿ 15 ಮಂದಿ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದಾಗ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತ 17 ಜನರ ಪೈಕಿ 10 ಜನರ ಗುರುತು ಪತ್ತೆಯಾಗಿದೆ.

ತುರ್ತು ದ್ವಾರ ಬಂದ್‌: ಈ ನಡುವೆ ಪ್ರಾಥಮಿಕ ತನಿಖೆ ವೇಳೆ ಅಗ್ನಿ ಅವಘಡದಂಥ ತುರ್ತುಪರಿಸ್ಥಿತಿ ವೇಳೆ ತಪ್ಪಿಸಿಕೊಳ್ಳಲು ಇದ್ದ ದ್ವಾರದ ಬಾಗಿಲನ್ನು ಲಾಕ್‌ ಮಾಡಿದ್ದ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ ತಪ್ಪಿಸಿಕೊಳ್ಳಲು ಇರುವ ಮಾರ್ಗ ಕೂಡಾ ಅತ್ಯಂತ ಕಿರಿದಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.