Operation Divyanshi : ಕೊಳವೆಬಾವಿಗೆ ಬಿದ್ದ 15 ತಿಂಗಳ ಮಗುವಿನ ರಕ್ಷಣೆ!
10 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆ ಯಶಸ್ವಿ
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಭಿನಂದನೆ
80 ಫೀಟ್ ಆಳದ ಕೊಳವೆಬಾವಿಗೆ ಬಿದ್ದಿದ್ದ ದಿವ್ಯಾಂಶಿ
ಭೋಪಾಲ್ (ಡಿ.18): ಬರೋಬ್ಬರಿ 10 ಗಂಟೆಗೂ ಅಧಿಕ ಕಾಲ ಪೊಲೀಸರು (police) ಹಾಗೂ ರಾಜ್ಯ ವಿಪತ್ತು ತುರ್ತು ಮೀಸಲು ಪಡೆ (State Disaster Emergency Reserve Force ) (ಎಸ್ ಡಿಇಆರ್ ಎಫ್) ನಡೆಸಿದ ರಕ್ಷಣಾ ಕಾರ್ಯಾಚರಣೆ ಬಳಿಕ, ಶುಕ್ರವಾರ ಛತ್ತರ್ ಪುರ (Chhatarpur ) ಜಿಲ್ಲೆಯಲ್ಲಿ 80 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ 15 ತಿಂಗಳ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದ ಮಗುವನ್ನು ಶುಕ್ರವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ರಕ್ಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮಗುವನ್ನು ಸುರಕ್ಷಿತವಾಗಿರಿಸಿದ ಎಲ್ಲರಿಗೂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅಭಿನಂದನೆ ಸಲ್ಲಿಸಿದ್ದಾರೆ.
"ರಕ್ಷಣಾ ಕಾರ್ಯಾಚರಣೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. 15 ತಿಂಗಳ ಹೆಣ್ಣು ಮಗುವನ್ನು ಕೊಳವೆಬಾವಿಯಿಂದ ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಛತ್ತರ್ ಪುರ ಜಿಲ್ಲೆಯ ಜಿಲ್ಲಾಧಿಕಾರಿ (District Collector) ಸಂದೀಪ್ ಅವರು ಟ್ವೀಟ್ ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ 3.30ಕ್ಕೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಮಧ್ಯಪ್ರದೇಶ (Madhya Pradesh) ರಾಜ್ಯದ ರಾಜಧಾನಿ ಭೋಪಾಲ್ ನಿಂದ (Bhopal) 350 ಕಿಲೋಮೀಟರ್ ದೂರದಲ್ಲಿರುವ ಛತ್ತರ್ ಪುರ ಜಿಲ್ಲೆಯ ನೌಗಾಂವ್ (Naugaon) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯನ್ನು ದಿವ್ಯಾಂಶಿ (Divyanshi)ಎಂದು ಗುರುತಿಸಲಾಗಿದೆ.
ತಾಯಿಯೊಂದಿಗೆ ಜಮೀನಿಗೆ ಹೋಗಿದ್ದ ವೇಳೆ, ಜಮೀನಿನಲ್ಲಿದ್ದ 80 ಅಡಿ ಆಳದ ತೆರೆದ ಕೊಳವೆ ಬಾವಿಗೆ ದಿವ್ಯಾಂಶಿ ಬಿದ್ದಿದ್ದರು. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆಕೆಯ ತಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರೆ, ದಿವ್ಯಾಂಶಿ ಸ್ವಲ್ಪ ದೂರದಲ್ಲೇ ಆಟವಾಡುತ್ತಿದ್ದಳು. ಕೆಲವು ಹೊತ್ತಿನ ಬಳಿಕ ದಿವ್ಯಾಂಶಿ ಇಲ್ಲದಿರುವುದನ್ನು ಗಮನಿಸಿದ ತಾಯಿ ಅಕ್ಕ-ಪಕ್ಕ ಹುಡುಕಾಟ ನಡೆಸಿದ್ದು ಕೆಲ ಹೊತ್ತಿನ ಬಳಿಕ ಇನ್ನೂ ಕೆಲವರು ಜೊತೆಯಾಗಿದ್ದಾರೆ. ಈ ವೇಳೆ ಅಲ್ಲಿದ್ದವರೊಬ್ಬರು ಕೊಳವೆಬಾವಿಯಿಂದ ಬರುತ್ತಿರುವ ಶಬ್ದವನ್ನು ಕೇಳಿಸಿಕೊಂಡಾಗ, ದಿವ್ಯಾಂಶಿ ಕೊಳವೆಬಾವಿಗೆ ಬಿದ್ದಿರುವುದು ಗಮನಕ್ಕೆ ಬಂದಿದೆ.
ತಾಯಿಯ ಅಳು ಕೇಳಿದ ಊರಿನ ಜನ ಸ್ಥಳಕ್ಕೆ ಧಾವಿಸಿದರು. ಆದರೆ, ಏನೂ ಮಾಡುವ ಸ್ಥಿತಿಯಲ್ಲಿರದ ಕಾರಣ, ಸ್ಥಳೀಯ ಪೊಲೀಸರಿಗೆ ಮಾಹಿತಿ ಒದಗಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. 80 ಅಡಿ ಕೊಳವೆ ಬಾವಿಯಲ್ಲಿ ಅಂದಾಜು 20 ಅಡಿಯ ಆಳದಲ್ಲಿ ದಿವ್ಯಾಂಶಿ ಸಿಕ್ಕಿಬಿದ್ದಿದ್ದನ್ನು ಗಮನಿಸಿದ ಪೊಲೀಸರು, ಆಕೆ ಜೀವಂತವಾಗಿರುವುದನ್ನು ಅರಿತುಕೊಂಡು ತಕ್ಷಣವೇ ಆಮ್ಲಜನಕದ ವ್ಯವಸ್ಥೆ ಮಾಡಿದ್ದಾರೆ.
ಬೆಳಗಾವಿ ಕೊಳವೆಬಾವಿ ದುರಂತಕ್ಕೆ ಟ್ವಿಸ್ಟ್: ಮಗನನ್ನೇ ಕೊಂದು ಬೋರ್‌ವೆಲ್‌ಗೆ ಎಸೆದ ಪಾಪಿ ತಂದೆ
ಜಿಲ್ಲಾಧಿಕಾರಿಗೆ ವಿಷಯ ತಿಳಿಸಿದ್ದಲ್ಲದೆ, ಗ್ವಾಲಿಯರ್ (Gwalior) ಜಿಲ್ಲೆಯ ಎಸ್ ಡಿಇಆರ್ ಎಫ್ (SDERF ) ಕೂಡ ತಾಂತ್ರಿಕ ಸಲಕರಣೆಗಳೊಂದಿಗೆ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು. ಕೊಳವೆಬಾವಿಗೆ ಸಿಸಿಟಿವಿಯನ್ನು ಇಳಿಬಿಟ್ಟು ಬಾಲಕಿಯ ಚಲನವಲಗಳನ್ನು ಅರಿತುಕೊಂಡು ಅದರಂತೆ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಕೊಳವೆಬಾವಿಯ ಸಮನಾಂತರವಾಗಿ ರಕ್ಷಣಾ ತಂಡವು ಒಂದೆರಡು ಜೆಸಿಬಿ ಯಂತ್ರವನ್ನು ಬಳಸಿ ಗುಂಡಿ ತೋಡಲು ಆರಂಭಿಸಿದರೆ, ಕೊಳವೆ ಬಾವಿ ಮೂಲಕ ಆಕೆಯನ್ನು ಮೇಲಕ್ಕೆತ್ತುವ ಕೆಲಸಗಳೂ ಇನ್ನೊಂದೆಡೆ ಪ್ರಗತಿಯಲ್ಲಿದ್ದವು.
ಕರ್ನಾಟಕದಲ್ಲಿ ಮತ್ತೆ ಸಂಭವಿಸಿದ ಬೋರ್ವೆಲ್ ದುರಂತ: ಎರಡೂವರೆ ವರ್ಷದ ಮಗು ಸಾವು
ಇನ್ನೊಂದೆಡೆ ಬಾಲಕಿಯ ಕುಟುಂಬದವರು ಮತ್ತು ಸ್ಥಳೀಯರು ಆಕೆಗಾಗಿ ಪ್ರಾರ್ಥನೆ ಸಲ್ಲಿಸುವುದರಲ್ಲಿ ನಿರತರಾಗಿದ್ದರು. ಆರಂಭದ ಕೆಲ ಹೊತ್ತು ಆಕೆ ಅಳುತ್ತಿದ್ದಳು. ಕೆಲ ಹೊತ್ತಿನ ಬಳಿಕ ಸುಮ್ಮನಾದಳು. ಅದೃಷ್ಟವಶಾತ್ ಸಿಸಿಟಿವಿ ಮೂಲಕ ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದರಿಂದ ರಕ್ಷಣಾ ಕಾರ್ಯಾಚರಣೆಯ ನಡೆಸುತ್ತಿದ್ದ ತಂಡಕ್ಕೆ ಪ್ರೋತ್ಸಾಹ ತುಂಬಿದಂತಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.