ಬೆಂಗಳೂರು [ಜೂ.17] :  ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ಆಫ್ರಿಕಾ ದೇಶದ ಪ್ರಜೆಗಳ ಮನೆ ಮೇಲೆ ಯಲಹಂಕ ಪೊಲೀಸರು ದಾಳಿ ನಡೆಸಿ 12 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಆರೋಪಿಗಳೆಲ್ಲರೂ ಆಫ್ರಿಕಾ ದೇಶದ ಪ್ರಜೆಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತರು ವ್ಯವಹಾರ, ವಿದ್ಯಾರ್ಥಿ ಹಾಗೂ ಪ್ರವಾಸ ವೀಸಾದಡಿ ಭಾರತಕ್ಕೆ ಬಂದು ನಗರದಲ್ಲಿ ನೆಲೆಸಿದ್ದರು. ಆಫ್ರಿಕಾ ಪ್ರದೇಶದ ಹಲವು ಪ್ರಜೆಗಳು ವೀಸಾ ಅವಧಿ ಮುಗಿದರೂ ನಗರದಲ್ಲಿಯೇ ನೆಲೆಸಿರುವ ಬಗ್ಗೆ ವಿದೇಶಿ ಪ್ರಾದೇಶಿಕ ನೋಂದಣಿ ಕೇಂದ್ರ (ಎಫ್‌ಆರ್‌ಆರ್‌ಒ) ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಯಲಹಂಕ ಪೊಲೀಸರು ತಮ್ಮ ವಿಭಾಗದಲ್ಲಿ ಕಾರ್ಯಾಚರಣೆ ನಡೆಸಿದ್ದು, 35 ವಿದೇಶಿ ಪ್ರಜೆಗಳ ಮನೆ ಮೇಲೆ ದಾಳಿ ನಡೆಸಿದ್ದರು. ಎಲ್ಲರ ವೀಸಾ, ಪಾಸ್‌ಪೋರ್ಟ್‌ ಪರಿಶೀಲನೆ ನಡೆಸಿದಾಗ 12 ಮಂದಿ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಅಕ್ರಮವಾಗಿ ನೆಲೆಸಿರುವ ಆರೋಪಿಗಳ ಪೈಕಿ ಕೆಲವರ ಮೇಲೆ ಮಾದಕ ದ್ರವ್ಯ ಸಾಗಾಟ ಸೇರಿದಂತೆ ಅಪರಾಧ ಪ್ರಕರಣದಲ್ಲಿ ಈ ಹಿಂದೆ ಬಂಧನಕ್ಕೆ ಒಳಗಾಗಿದ್ದರು. ಆರೋಪಿಗಳು ನ್ಯಾಯಾಲಯದಲ್ಲಿ ವಿಚಾರಣೆಗೂ ಕೂಡ ಹಾಜರಾಗದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿದೇಶಿ ಪ್ರಜೆಗಳ ವಿರುದ್ಧ ದಾಖಲಾದ ಪ್ರಕರಣದ ತನಿಖೆ ಮುಗಿದ ಬಳಿಕ ರಾಯಭಾರ ಕಚೇರಿ ಮೂಲಕ ಅವರ ದೇಶಕ್ಕೆ ಕಳುಹಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.