ಒಟ್ಟಾರೆಯಾಗಿ ಹೇಳುವುದಾದರೆ, 'ರಾಮಾಯಣ: ಭಾಗ-1' ಭಾರತೀಯ ಚಿತ್ರರಂಗ ಹೆಮ್ಮೆಪಡುವಂತಹ ದೃಶ್ಯಕಾವ್ಯ. ರಾಮನ ಕಥೆಯನ್ನ ಕಲಿಯುಗದ ತಂತ್ರಜ್ಞಾನದಲ್ಲಿ ನೋಡಬಯಸುವ ಪ್ರತಿಯೊಬ್ಬ ಸಿನಿರಸಿಕನೂ ದೊಡ್ಡ ಪರದೆಯಲ್ಲೇ ನೋಡಬೇಕಾದ ಸಿನಿಮಾ. ಇನ್ನು ಮುಂದಿನ ಭಾಗದಲ್ಲಿ ರಾಮ-ರಾವಣರ ಅಸಲಿ ಮುಖಾಮುಖಿ, ಮಹಾಯುದ್ಧ ಹೇಗಿರಲಿದೆ ಎಂಬ ಕುತೂಹಲಕ್ಕೆ ಈ ಚಿತ್ರ ಮುನ್ನುಡಿ..
Ramayana Movie News, Kali Yugadalli Treta Yuga Experience-ರಾಮಾಯಣ ಸಿನಿಮಾ- 'ಕಲಿಯುಗದಲ್ಲಿ ತ್ರೇತಾಯುಗದ ಅನುಭವ' ಅಂತ ಇಡೀ ಜಗತ್ತು ಹೇಳುತ್ತಿದೆ!
ಇಡೀ ಚಿತ್ರಜಗತ್ತಿನ ಸಿನಿಪ್ರಿಯರು ಕಾತುರದಿಂದ ಎದುರುನೋಡ್ತಾ ಇದ್ದ ರಾಮಾಯಣ ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬಂದಿದೆ. ರಣಬೀರ್ ಕಪೂರ್ ರಾಮನಾಗಿ ನಟಿಸಿರೋ-ನಮ್ಮ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಮಿಂಚಿರೋ, ಬಹುತಾರಾಗಣದ - ಬಹುಕೋಟಿ ವೆಚ್ಚದ ರಾಮಾಯಣ ಮೂವಿ ಥಿಯೇಟರ್ ಅಂಗಳಕ್ಕೆ ಕಾಲಿಟ್ಟಿದೆ. ನೀರಿಕ್ಷೆಯಂತೆಯೇ ಸಿನಿಮಾಗೆ ಮೆಗಾ ಓಪನಿಂಗ್ ಸಿಕ್ಕಿದೆ. ಆದ್ರೆ ರಾಮಾಯಣ ಸಿನಿಮಾ ಹೇಗೆ ಮೂಡಿಬಂದಿದೆ. ಕಲಾವಿದರ ಪರ್ಫಾರ್ಮೆನ್ಸ್ ಹೇಗಿದೆ. 'ವಿಎಫ್ಎಕ್ಸ್' ಜಾದೂವಿನಲ್ಲಿ ರಾಮಾಯಣ ಅದೆಷ್ಟು ಮೋಡಿ ಮಾಡ್ತಿದೆ ನೋಡಿ.. ಜಗತ್ತಿನ ಜನರು ರಾಮಾಯಣ ಸಿನಿಮಾ ಬಗ್ಗೆ, ಕಲಾವಿದರ ಅಭುನಯದ ಬಗ್ಗೆ ಏನು ಹೇಳ್ತಿದ್ದಾರೆ ನೋಡಿ..
ದೇವತೆಗಳು ಹಾಗೂ ಅಸುರರ ನಡುವಿನ ಘೋರ ಮಹಾಯುದ್ಧ
ರಾಮಾಯಣದ ಕಥೆಯನ್ನ ಭಾರತೀಯರಿಗೆ ಹೊಸದಾಗಿ ಪರಿಚಯಿಸಬೇಕಿಲ್ಲ. ಆದರೆ ಈ ಚಿತ್ರದಲ್ಲಿ ನಿತೇಶ್ ತಿವಾರಿ ಯಾವ ಭಾಗವನ್ನ ಹೇಗೆ ತೆರೆಗೆ ತಂದಿದ್ದಾರೆ ಅನ್ನೋದು ಮುಖ್ಯವಾಗುತ್ತದೆ. ಚಿತ್ರ ಆರಂಭವಾಗುವುದೇ ದೇವತೆಗಳು ಹಾಗೂ ಅಸುರರ ನಡುವಿನ ಘೋರ ಮಹಾಯುದ್ಧದಿಂದ. ಆರಂಭದಲ್ಲೇ ರಾವಣನ ಹಿನ್ನೆಲೆ, ಬ್ರಹ್ಮನನ್ನ ಒಲಿಸಿಕೊಳ್ಳಲು ಮಾಡಿದ ಘೋರ ತಪಸ್ಸು, ವರ ಬಲದಿಂದ ಮೂರು ಲೋಕಗಳನ್ನ ನಡುಗಿಸಿದ ಅಟ್ಟಹಾಸದ ಅನಾವರಣವಾಗುತ್ತದೆ. ಬಳಿಕ ನಮ್ಮ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರ 'ರಾವಣ'ನ ಆರ್ಭಟ ತೆರೆದುಕೊಳ್ಳುತ್ತದೆ.
ನಂತರ ಕಥೆ ಅಯೋಧ್ಯೆಯತ್ತ ಮುಖ ಮಾಡುತ್ತದೆ. ಪುತ್ರಕಾಮೇಷ್ಟಿ ಯಾಗ, ದಶರಥನ ನಾಲ್ವರು ಪುತ್ರರ ಜನನ, ಗುರುಕುಲದ ವಿದ್ಯಾರ್ಜನೆ, ಋಷಿ ವಿಶ್ವಾಮಿತ್ರರ ಯಾಗ ರಕ್ಷಣೆಗೆ ತೆರಳಿ ಮಾರೀಚ-ಸುಬಾಹುಗಳ ವಧೆ ಮಾಡುವ ದೃಶ್ಯಗಳು ಒಂದಾದ ಮೇಲೊಂದರಂತೆ ತೆರೆದುಕೊಳ್ಳುತ್ತವೆ.
ಮುಂದೆ ಸೀತಾ ಸ್ವಯಂವರ, ಶಿವಧನುಸ್ಸನ್ನ ಮುರಿದು ಸೀತೆಯನ್ನ ಮದುವೆಯಾಗುವುದು, ಪರಶುರಾಮನೊಂದಿಗಿನ ಪ್ರಖರ ಮುಖಾಮುಖಿ ಹಾಗೂ ಶ್ರೀರಾಮನ ಪಟ್ಟಾಭಿಷೇಕಕ್ಕೆ ಅಯೋಧ್ಯೆ ಸಜ್ಜಾಗುವ ಸಂಭ್ರಮ ಇದೆಲ್ಲವನ್ನೂ ಕಟ್ಟಿಕೊಡಲಾಗಿದೆ.
ಶ್ರೀರಾಮನ ಪಟ್ಟಾಭಿಷೇಕಕ್ಕೆ ಅಯೋಧ್ಯೆ ಸಜ್ಜಾಗ್ತಾ ಇದ್ರೆ, ವಿಧಿಯಾಟವೇ ಬೇರೆ ಇರುತ್ತೆ! ಕೈಕೇಯಿಯ ಮಾತು, ತಂದೆಯ ವಚನ ಪಾಲನೆಗಾಗಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಶ್ರೀರಾಮ ವನವಾಸಕ್ಕೆ ಹೆಜ್ಜೆ ಹಾಕುಬೇಕಾಗುತ್ತೆ. ರಾಮ ವನವಾಸಕ್ಕೆ ಹೊರಡೋದ್ರೊಂದಿಗೆ ಚಿತ್ರದ ಮೊದಲಾರ್ಧ ಮುಕ್ತಾಯವಾಗುತ್ತೆ.
ರಾವಣ ಮತ್ತು ಶೂರ್ಪನಖಿಯ ಪತಿ ವಿದ್ಯುಜ್ಜಿಹ್ವನ ನಡುವಿನ ಆಂತರಿಕ ಯುದ್ಧದಿಂದ ಆರಂಭ
ಸೆಕೆಂಡ್ ಹಾಫ್ನಲ್ಲಿ ಚಿತ್ರದ ವೇಗ ಹಾಗೂ ಆಕ್ಷನ್ ದುಪ್ಪಟ್ಟಾಗುತ್ತೆ. ರಾವಣ ಮತ್ತು ಶೂರ್ಪನಖಿಯ ಪತಿ ವಿದ್ಯುಜ್ಜಿಹ್ವನ ನಡುವಿನ ಆಂತರಿಕ ಯುದ್ಧದಿಂದ ಆರಂಭವಾಗುವ ದ್ವಿತೀಯಾರ್ಧ, ಪಂಚವಟಿಯ ಸನ್ನಿವೇಶಕ್ಕೆ ಬರುತ್ತದೆ. ರಾಮನ ಮೇಲೆ ವ್ಯಾಮೋಹಗೊಂಡ ಶೂರ್ಪನಖಿಯ ಮೂಗನ್ನ ಲಕ್ಷ್ಮಣ ಕತ್ತರಿಸುವುದು, ಆಕೆಯ ರಾಕ್ಷಸ ಸೈನ್ಯದ ಮೇಲೆ ರಾಮನ ಆಕ್ರಮಣ, ತಂಗಿಗಾದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳಲು ಲಂಕೇಶ್ವರ ರಾವಣ ಸೀತೆಯನ್ನು ಅಪಹರಿಸುವುದು.. ಈ ವೇಳೆ ರಾವಣ ಹಾಗೂ ಜಟಾಯು ನಡುವೆ ನಡೆಯುವ 'ಜಟಾಯು-ರಾವಣ' ಕಾಳಗ ಮೈನವಿರೇಳಿಸುತ್ತದೆ. ಕೊನೆಗೆ ಸೀತೆಯನ್ನ ಹೇಗಾದರೂ ಮಾಡಿ ಮರಳಿ ಕರೆತರುತ್ತೇನೆಂದು ರಾಮ ಮಾಡುವ ಪ್ರತಿಜ್ಞೆಯೊಂದಿಗೆ ಮೊದಲ ಭಾಗಕ್ಕೆ ಅದ್ದೂರಿ ತೆರೆ ಬೀಳುತ್ತದೆ.
ಹೌದು ಈ ಚಿತ್ರದ ಜೀವ ಇರೋದೇ ಕಲಾವಿದರ ಆಯ್ಕೆಯಲ್ಲಿ. ಶ್ರೀರಾಮನ ಪಾತ್ರದಲ್ಲಿ ರಣ್ಬೀರ್ ಕಪೂರ್ ತಮ್ಮ ಗಾಂಭೀರ್ಯ ಹಾಗೂ ಸೌಮ್ಯತೆಯಿಂದ ಆವರಿಸಿಕೊಂಡಿದ್ದಾರೆ. ಎಮೋಷನಲ್ ಸನ್ನಿವೇಶಗಳಲ್ಲಿ, ವನವಾಸಕ್ಕೆ ಹೊರಡುವ ದೃಶ್ಯಗಳಲ್ಲಿ ರಣ್ಬೀರ್ ಕಣ್ಣುಗಳಲ್ಲೇ ನೋವು ಕಡೆದಿಟ್ಟಿದ್ದಾರೆ. ಸಿನಿಮಾದಲ್ಲಿ ರಾಮನ ಆಯ್ಕೆಯನ್ನು 100% ಸಮರ್ಥಿಸಿಕೊಳ್ಳುವಂತೆ ನಟಿಸಿದ್ದಾರೆ.
ಇನ್ನು ಜಾನಕಿಯಾಗಿ ಸಾಯಿ ಪಲ್ಲವಿ ಅದ್ಭುತವಾಗಿ ನಟಿಸಿದ್ದಾರೆ. ಸೀತೆಯ ಸಾತ್ವಿಕತೆ, ಘನತೆ ಹಾಗೂ ತೇಜಸ್ಸನ್ನ ಸಾಯಿ ಪಲ್ಲವಿ ಅಷ್ಟೇ ನೈಜವಾಗಿ ಮೈಗೂಡಿಸಿಕೊಂಡು ತಮ್ಮ ಆಯ್ಕೆಯನ್ನ ನೂರಕ್ಕೆ ನೂರು ಸಮರ್ಥಿಸಿಕೊಂಡಿದ್ದಾರೆ. ಸೀತೆಗೆ ಸಾಯಿ ಪಲ್ಲವಿ ಬಿಟ್ಟರೆ ಬೇರೆ ಆಯ್ಕೆ ಎಲ್ಲಿದೆ ಎಂಬಂತೆ ಪರಕಾಯ ಪ್ರವೇಶ ಮಾಡಿದ್ದಾರೆ.
ಆದರೆ ಈ ಇಡೀ ಸಿನಿಮಾವನ್ನ ತನ್ನ ಹೆಗಲ ಮೇಲೆ ಹೊತ್ತು ಮುನ್ನುಗ್ಗುವುದು ಮಾತ್ರ ನಮ್ಮ ರಾಕಿಂಗ್ ಸ್ಟಾರ್ ಯಶ್! ಸಿನಿಮಾದ ಮೊದಲ ಭಾಗದಲ್ಲಿ ಯಶ್ ಕೇವಲ ಐದತ್ತು ನಿಮಿಷ ಅಷ್ಟೇ ಬರ್ತಾರೆ ಅನ್ನೋ ಗಾಳಿಸುದ್ದಿ ಇತ್ತಲ್ಲ, ಅದಕ್ಕೆ ಚಿತ್ರತಂಡ ಬೆಳ್ಳಿತೆರೆಯಲ್ಲೇ ಉತ್ತರ ಕೊಟ್ಟಿದೆ. ಏಕೆಂದರೆ ಅರ್ಧ ಸಿನಿಮಾ ರಾವಣನ ಸಾಮ್ರಾಜ್ಯಕ್ಕೇ ಮೀಸಲಾಗಿದೆ!
ಫಸ್ಟ್ ಹಾಫ್ನಲ್ಲಿ ಲಂಕೆಗೆ ರಾವಣನ ಎಂಟ್ರಿ.. ಮತ್ತು ದ್ವಿತೀಯಾರ್ಧದಲ್ಲಿ ದಶಕಂಠನಾಗಿ ಹತ್ತು ವಿಭಿನ್ನ ವ್ಯಕ್ತಿತ್ವ, ಹತ್ತು ಬೇರೆ ಬೇರೆ ಗುಣಗಳನ್ನ ಒಂದೇ ಫ್ರೇಮ್ನಲ್ಲಿ ಪ್ರದರ್ಶಿಸುವ ಯಶ್ ನಟನೆ ಅಕ್ಷರಶಃ ಪೈಸಾ ವಸೂಲ್! ವಿಭಿನ್ನ ಬಾಡಿ ಲಾಂಗ್ವೇಜ್, ಕಣ್ಣಿನಲ್ಲೇ ಉರಿಯುವ ದರ್ಪ, ರಕ್ಕಸ ಗತ್ತು.. ಯಶ್ ತೆರೆಮೇಲೆ ಬಂದಾಗಲೆಲ್ಲ ಚಿತ್ರಮಂದಿರಗಳಲ್ಲಿ ಸಿಳ್ಳೆ, ಚಪ್ಪಾಳೆಯ ಸುರಿಮಳೆ.
ತಾಂತ್ರಿಕ ಜಾದೂ - 8 ಆಸ್ಕರ್ ವಿಜೇತ ಸಂಸ್ಥೆಯ ಕೈಚಳಕ; ಪ್ರೇಕ್ಷಕರನ್ನ ತ್ರೇತಾಯುಗಕ್ಕೆ ಕರೆಯೊಯ್ಯುವ ಮಾಯಾಲೋಕ!
ಹೌದು ತಾಂತ್ರಿಕವಾಗಿ ಈ ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಂಡಿರದ ಹೊಸ ಮೈಲಿಗಲ್ಲು. 8 ಬಾರಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ನಮಿತ್ ಮಲ್ಹೋತ್ರಾ ಒಡೆತನದ DNEG ಸಂಸ್ಥೆ ಮಾಡಿರುವ ಸಿಜಿಐ ಹಾಗೂ ಗ್ರಾಫಿಕ್ಸ್ ಕೆಲಸಕ್ಕೆ ಹಾಲಿವುಡ್ ಮಂದಿಯೂ ತಲೆದೂಗಬೇಕು ಹಾಗಿದೆ ಸಿನಿಮಾ.
ಹೆಚ್ಚು ಸೆಟ್ಗಳಿಲ್ಲದೆ ಗ್ರೀನ್ ಮ್ಯಾಟ್ನಲ್ಲೇ ಶೂಟ್ ಮಾಡಿದ್ದರೂ, ಪರದೆಯ ಮೇಲೆ ಅಯೋಧ್ಯೆಯ ಸುವರ್ಣ ಗೋಪುರಗಳು, ದಟ್ಟವಾದ ಕಾಡು, ಹಿಮಚ್ಛಾದಿತ ಕೈಲಾಸ ಪರ್ವತ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ.
ಐರಾವತ ಆನೆಯ ಸೊಂಡಿಲಿನ ಸೂಕ್ಷ್ಮತೆ, ಹಣೆಯ ಪಟ್ಟಿ, ಹಾರುವ ಪುಷ್ಪಕ ವಿಮಾನ ಹಾಗೂ ಕ್ಲೈಮ್ಯಾಕ್ಸ್ನಲ್ಲಿ ಬರುವ ಜಟಾಯು ಹಕ್ಕಿಯ ಪ್ರತಿಯೊಂದು ಪುಕ್ಕ, ಕೊಕ್ಕು, ನಾಲಿಗೆಯ ಅಲುಗಾಟವನ್ನ ಅಷ್ಟು ಕರಾರುವಾಕ್ಕಾಗಿ ತಂದಿದ್ದಾರೆ. ಜಟಾಯು ಮತ್ತು ರಾವಣನ ನಡುವಿನ ಯುದ್ಧವಂತೂ ತ್ರೀಡಿ ಕನ್ನಡಕದಲ್ಲಿ ನೋಡುವಾಗ ಮೈ ಜುಮ್ಮೆನಿಸುತ್ತದೆ.
ಇನ್ನು ಹಾಲಿವುಡ್ ಮಾಂತ್ರಿಕ ಹ್ಯಾನ್ಸ್ ಝಿಮ್ಮರ್ ಹಾಗೂ ನಮ್ಮ ಭಾರತದ ಹೆಮ್ಮೆ ಎ.ಆರ್. ರೆಹಮಾನ್ ಜೋಡಿಯ ಹಿನ್ನೆಲೆ ಸಂಗೀತ ಚಿತ್ರದ ಗಾಂಭೀರ್ಯವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಚಿತ್ರರಂಗದಲ್ಲಿ ಮೊದಲ ಬಾರಿಗೆ ಬಳಕೆಯಾದ 'ಬ್ರಹ್ಮ ಎಐ' ತಂತ್ರಜ್ಞಾನದ ಡಬ್ಬಿಂಗ್ ಲಿಪ್-ಸಿಂಕ್ ಮ್ಯಾಜಿಕ್ ಮಾಡಿದೆ! ಹಿಂದಿ ಕಲಾವಿದರು ಮಾತನಾಡುತ್ತಿದ್ದರೂ, ಅವರ ತುಟಿ ಚಲನೆ ಅಪ್ಪಟ ಕನ್ನಡದಲ್ಲೇ ಮಾತನಾಡಿದಂತೆ ಭಾಸವಾಗುತ್ತೆ.
ಒಟ್ಟಾರೆಯಾಗಿ ಹೇಳುವುದಾದರೆ, 'ರಾಮಾಯಣ: ಭಾಗ-1' ಭಾರತೀಯ ಚಿತ್ರರಂಗ ಹೆಮ್ಮೆಪಡುವಂತಹ ದೃಶ್ಯಕಾವ್ಯ. ರಾಮನ ಕಥೆಯನ್ನ ಕಲಿಯುಗದ ತಂತ್ರಜ್ಞಾನದಲ್ಲಿ ನೋಡಬಯಸುವ ಪ್ರತಿಯೊಬ್ಬ ಸಿನಿರಸಿಕನೂ ದೊಡ್ಡ ಪರದೆಯಲ್ಲೇ ನೋಡಬೇಕಾದ ಸಿನಿಮಾ. ಇನ್ನು ಮುಂದಿನ ಭಾಗದಲ್ಲಿ ರಾಮ-ರಾವಣರ ಅಸಲಿ ಮುಖಾಮುಖಿ, ಮಹಾಯುದ್ಧ ಹೇಗಿರಲಿದೆ ಎಂಬ ಕುತೂಹಲಕ್ಕೆ ಈ ಚಿತ್ರ ಮುನ್ನುಡಿ ಬರೆದಿದೆ!
ಅಂದಹಾಗೆ, ಈ ರಾಮಾಯಣ ಮಹಾಕಾವ್ಯವನ್ನು ತೆರೆಯ ಮೇಲೆ ತರಲು ಸಾಕಷ್ಟು ಪರಿಶ್ರಮ ಹಾಗೂ ಸಮಯ ಬೇಕಾಗುವುದರಿಂದ, ಮುಂಬರುವ 'ಪಾರ್ಟ್ 2' ಅಂದರೆ 'ರಾಮಾಯಣ: ಪಾರ್ಟ್ 2' ಚಿತ್ರವನ್ನು ಮುಂದಿನ ವರ್ಷದ ಬದಲಿಗೆ ಅದಕ್ಕೂ ಮುಂದಿನ ವರ್ಷ ಅಂದರೆ 2028ಕ್ಕೆ ತೆರೆಗೆ ತರುವುದಾಗಿ ಈಗಾಗಲೇ ನಿರ್ಮಾಪಕರಾದ ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ಹೀಗಾಗಿ ಇದೀಗ 'ರಾಮಾಯಣ; ಪಾರ್ಟ್ 1' ಸಿನಿಮಾವನ್ನು ನೋಡಿ ಬೆರಗಾಗಿ ಮುಂದಿನ ಭಾಗಕ್ಕೆ ಕಾಯುತ್ತಿರುವವರು 2028ರವರೆಗೆ ಕಾಯಲೇಬೇಕು.














