ಚಿತ್ರಮಂದಿರಗಳಲ್ಲಿ ಮೊದಲಿಗೆ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಬಳಿಕ ತೆಲುಗು ಭಾಷೆಯಲ್ಲೂ ಪ್ರೇಕ್ಷಕರನ್ನು ತಲುಪಿತ್ತು. ಇದೀಗ ಒಟಿಟಿ ಬಿಡುಗಡೆಯ ಮೂಲಕ ಇನ್ನಷ್ಟು ಭಾಷೆಗಳ ಪ್ರೇಕ್ಷಕರಿಗೆ ಸಿನಿಮಾ ತಲುಪುತ್ತಿದೆ. ಅದರಲ್ಲೂ ಕನ್ನಡ ಆಡಿಯೋ ಲಭ್ಯವಾಗುತ್ತಿರುವುದು ಕರ್ನಾಟಕದ ಮಲಯಾಳಂ ಸಿನಿಮಾ ಪ್ರೇಮಿಗಳಿಗೆ ಭಾರೀ ಹಬ್ಬ!

ಮಲೆಯಾಳಂ ಚಿತ್ರರಂಗದಲ್ಲಿ ಇತಿಹಾಸ ಬರೆದ ಸಿನಿಮಾ ಇದು!

ಮಲಯಾಳಂ ಚಿತ್ರರಂಗದಲ್ಲಿ ಒಂದರ ಹಿಂದೆ ಒಂದರಂತೆ ದಾಖಲೆ ಬರೆಯುತ್ತಿರುವ ಸಿನಿಮಾಗಳ ಸಾಲಿಗೆ ‘ಬೆತ್ಲಹೆಮ್ ಕುಟುಂಬ ಯುನಿಟ್’ ಕೂಡ ಸೇರ್ಪಡೆಯಾಗಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇದೀಗ ಒಟಿಟಿ ಅಂಗಳಕ್ಕೆ ಕಾಲಿಡಲು ಸಿದ್ಧವಾಗಿದೆ. ವಿಶೇಷವೆಂದರೆ ಮಲಯಾಳಂ ಮಾತ್ರವಲ್ಲದೆ ಕನ್ನಡ ಭಾಷೆಯಲ್ಲೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

ಗಿರೀಶ್ ಎಡಿ ನಿರ್ದೇಶನದ ಈ ಸಿನಿಮಾ

ನಿವಿನ್ ಪೌಳಿ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ‘ಬೆತ್ಲಹೆಮ್ ಕುಟುಂಬ ಯುನಿಟ್’ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಸಿಕ್ಕ ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿತ್ತು. ಗಿರೀಶ್ ಎಡಿ ನಿರ್ದೇಶನದ ಈ ಸಿನಿಮಾ ಪ್ರೀತಿ, ಕುಟುಂಬದ ಬಾಂಧವ್ಯ, ಹಳೆಯ ನೆನಪುಗಳು ಹಾಗೂ ಜೀವನದಲ್ಲಿ ಎದುರಾಗುವ ಬದಲಾವಣೆಗಳನ್ನು ರೊಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಪ್ರೇಕ್ಷಕರ ಮುಂದೆ ತಂದಿದೆ.

ಈ ವರ್ಷದ ಆಗಸ್ಟ್‌ನಲ್ಲಿ ತೆರೆಕಂಡ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಪ್ರೇಕ್ಷಕರ ಗಮನ ಸೆಳೆಯಿತು. ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಪ್ರದರ್ಶನ ಕಂಡ ಈ ಚಿತ್ರ ಮಲಯಾಳಂ ಚಿತ್ರರಂಗದ ಹಲವು ದಾಖಲೆಗಳನ್ನು ಮುರಿದಿದೆ ಎನ್ನಲಾಗಿದೆ. ‘ಲೋಕಃ: ಚಾಪ್ಟರ್ 1 ಚಂದ್ರ’ ಸೇರಿದಂತೆ ಯಶಸ್ವಿ ಸಿನಿಮಾಗಳ ದಾಖಲೆಗಳನ್ನು ಹಿಂದಿಕ್ಕಿ ತನ್ನದೇ ಆದ ಹೊಸ ಮೈಲಿಗಲ್ಲುಗಳನ್ನು ನಿರ್ಮಿಸಿಕೊಂಡಿದೆ.

‘ಬೆತ್ಲಹೆಮ್ ಕುಟುಂಬ ಯುನಿಟ್’ ಸಿನಿಮಾದ ಮತ್ತೊಂದು ವಿಶೇಷತೆ ಅದರ ತಾರಾಗಣ. ನಿವಿನ್ ಪೌಳಿ ಮತ್ತು ಮಮಿತಾ ಬೈಜು ಜೋಡಿ ತೆರೆಮೇಲೆ ಹೇಗೆ ಕಮಾಲ್ ಮಾಡಿದೆ ಎಂಬುದನ್ನು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಇದೀಗ ಇದೇ ಜೋಡಿಯ ಕೆಮಿಸ್ಟ್ರಿಯನ್ನು ಮನೆಯಲ್ಲೇ ಕುಳಿತುಕೊಂಡು ಒಟಿಟಿಯಲ್ಲಿ ಎಂಜಾಯ್ ಮಾಡುವ ಅವಕಾಶ ಸಿಗಲಿದೆ.

ಭಾವನಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿಲೀಶ್ ಪೋತನ್, ಫಹಾದ್ ಫಾಸಿಲ್ ಮತ್ತು ಶ್ಯಾಮ್ ಪುಷ್ಕರನ್ ಚಿತ್ರವನ್ನು ನಿರ್ಮಿಸಿದ್ದಾರೆ. ಗಿರೀಶ್ ಎಡಿ ಮತ್ತು ಕಿರಣ್ ಜೋಶಿ ಜಂಟಿಯಾಗಿ ಸಿನಿಮಾದ ಕಥೆಯನ್ನು ಬರೆದಿದ್ದಾರೆ. ಪ್ರೀತಿ ಮತ್ತು ಕುಟುಂಬದ ಭಾವನೆಗಳನ್ನು ಹಾಸ್ಯದ ಲೇಪನದೊಂದಿಗೆ ಕಟ್ಟಿಕೊಟ್ಟಿರುವುದು ಚಿತ್ರದ ಪ್ರಮುಖ ಆಕರ್ಷಣೆ ಎನ್ನಲಾಗಿದೆ.

ಮುಂಡಕಾಯಂನಿಂದ ಕರುಕುಟ್ಟಿಗೆ ಬಂದ ಹುಡುಗಿ!

ಕಥೆಯ ವಿಚಾರಕ್ಕೆ ಬಂದರೆ, ಆಶ್ಲಿ ಎಂಬ ಯುವತಿ ತನ್ನ ಕುಟುಂಬದೊಂದಿಗೆ ಮುಂಡಕಾಯಂನಿಂದ ಕರುಕುಟ್ಟಿಗೆ ಸ್ಥಳಾಂತರಗೊಳ್ಳುತ್ತಾಳೆ. ಹೊಸ ಊರು, ಹೊಸ ಪರಿಸರ ಹಾಗೂ ಹೊಸ ಜನರ ನಡುವೆ ಆಕೆಯ ಜೀವನವೂ ಹೊಸ ತಿರುವು ಪಡೆದುಕೊಳ್ಳುತ್ತದೆ. ಇದೇ ಸಂದರ್ಭದಲ್ಲಿ ಆಕೆಗೆ ತನಗಿಂತ ಸುಮಾರು 12ರಿಂದ 13 ವರ್ಷ ಹಿರಿಯನಾದ ನೆರೆಹೊರೆಯ ಜಸ್ಟಿನ್ ಪರಿಚಯವಾಗುತ್ತಾನೆ. ಆಶ್ಲಿ ಮತ್ತು ಜಸ್ಟಿನ್ ನಡುವಿನ ಪರಿಚಯ ನಿಧಾನವಾಗಿ ಗಾಢವಾಗುತ್ತಾ ಹೋಗುತ್ತದೆ. ಅವರ ಸಂಬಂಧ, ಪ್ರೀತಿ, ಕುಟುಂಬದ ಭಾವನೆಗಳು ಮತ್ತು ಜೀವನದಲ್ಲಿ ಎದುರಾಗುವ ತಿರುವುಗಳೇ ಸಿನಿಮಾದ ಕಥೆಯ ಪ್ರಮುಖ ಭಾಗವಾಗಿವೆ.

ಚಿತ್ರಮಂದಿರಗಳಲ್ಲಿ ಮೊದಲಿಗೆ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಬಳಿಕ ತೆಲುಗು ಭಾಷೆಯಲ್ಲೂ ಪ್ರೇಕ್ಷಕರನ್ನು ತಲುಪಿತ್ತು. ಇದೀಗ ಒಟಿಟಿ ಬಿಡುಗಡೆಯ ಮೂಲಕ ಇನ್ನಷ್ಟು ಭಾಷೆಗಳ ಪ್ರೇಕ್ಷಕರಿಗೆ ಸಿನಿಮಾ ತಲುಪುತ್ತಿದೆ. ಅದರಲ್ಲೂ ಕನ್ನಡ ಆಡಿಯೋ ಲಭ್ಯವಾಗುತ್ತಿರುವುದು ಕರ್ನಾಟಕದ ಮಲಯಾಳಂ ಸಿನಿಮಾ ಪ್ರೇಮಿಗಳಿಗೆ ವಿಶೇಷ ಆಕರ್ಷಣೆಯಾಗಿದೆ.

ಚಿತ್ರಮಂದಿರಗಳಲ್ಲಿ ಸಿನಿಮಾ ಮಿಸ್ ಮಾಡಿಕೊಂಡಿದ್ದವರಿಗೆ ಇದೀಗ ಮನೆಯಲ್ಲೇ ಕುಳಿತು ನಿವಿನ್ ಪೌಳಿ ಮತ್ತು ಮಮಿತಾ ಬೈಜು ಅಭಿನಯದ ಈ ರೊಮ್ಯಾಂಟಿಕ್ ಕಾಮಿಡಿಯನ್ನು ನೋಡುವ ಅವಕಾಶ ಸಿಕ್ಕಂತಾಗಿದೆ. ಪ್ರೀತಿ, ನಗು, ಕುಟುಂಬದ ಭಾವನೆ ಮತ್ತು ಹಳೆಯ ನೆನಪುಗಳ ಮಿಶ್ರಣವಾಗಿರುವ ‘ಬೆತ್ಲಹೆಮ್ ಕುಟುಂಬ ಯುನಿಟ್’ ಒಟಿಟಿಯಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.