ಹಿಂದಿ ಹೇರಿಕೆಯಿಂದ ದೇಶದಲ್ಲಿ ಬಿರುಕು: ಸೋನು ನಿಗಮ್
* ಹಿಂದಿಯೇತರ ರಾಷ್ಟ್ರಗಳ ಮೇಲೆ ಹಿಂದಿ ಭಾಷೆ ಹೇರಿಕೆ ವಿವಾದ
* ಇಡೀ ದೇಶ ಹಿಂದಿ ಮಾತನಾಡಲಿ ಎಂದೇಕೆ ಒತ್ತಡ ಹೇರುತ್ತೀರಿ?: ಸೋನು ಕಿಡಿ
* ಹಿಂದಿ ಹೇರಿಕೆಯಿಂದ ದೇಶದಲ್ಲಿ ಬಿರುಕು: ಸೋನು ನಿಗಮ್
ನವದೆಹಲಿ(ಮೇ.04): ಹಿಂದಿಯೇತರ ರಾಷ್ಟ್ರಗಳ ಮೇಲೆ ಹಿಂದಿ ಭಾಷೆ ಹೇರಿಕೆ ವಿವಾದದಲ್ಲಿ ಗಾಯಕ ಸೋನು ನಿಗಮ್ ಕೂಡಾ ಧುಮುಕಿದ್ದಾರೆ. ‘ಹಿಂದಿ ಭಾರತದ ರಾಷ್ಟ್ರೀಯ ಭಾಷೆಯಲ್ಲ. ಹಿಂದಿಯೇತರ ನಾಗರಿಕರ ಮೇಲೆ ಒತ್ತಾಯಪೂರ್ವಕವಾಗಿ ಹಿಂದಿ ಕಲಿಯುವಂತೆ ಒತ್ತಡ ಹೇರಿದರೆ ದೇಶದಲ್ಲೇ ಆಂತರಿಕವಾಗಿ ಬಿರುಕು ಮೂಡಲಿದೆ’ ಎಂದಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟ ಅಜಯ ದೇವಗನ್ ಹಿಂದಿ ರಾಷ್ಟ್ರೀಯ ಭಾಷೆ ಎಂದು ಟ್ವೀಟ್ ಮಾಡಿದ್ದರು, ಇದಕ್ಕೆ ಕನ್ನಡ ನಟ ಸುದೀಪ್ ‘ಹಿಂದಿ ರಾಷ್ಟ್ರ ಭಾಷೆಯಲ್ಲ’ ಎಂದು ತಿರುಗೇಟು ನೀಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಸೋಮವಾರ ಮಾತನಾಡಿದ ಸೋನು, ‘ಸಂವಿಧಾನದಲ್ಲಿ ಎಲ್ಲಿಯೂ ಹಿಂದಿ ರಾಷ್ಟ್ರೀಯ ಭಾಷೆ ಎಂದು ಘೋಷಿಸಿಲ್ಲ. ಸಂವಿಧಾನದಲ್ಲಿ ಪಟ್ಟಿಮಾಡಲಾದ 22 ಭಾಷೆಗಳಲ್ಲಿ ಹಿಂದಿಯೂ ಒಂದಾಗಿದೆ. ಇದು ಬಹಳಷ್ಟುಜನರು ಮಾತನಾಡುವ ಭಾಷೆಯಾಗಿರಬಹುದು. ಆದರೂ ಎಲ್ಲರ ಮೇಲೆ ಹಿಂದಿ ಹೇರಿಕೆ ಮಾಡುವುದು ತಪ್ಪು. ಜನರಿಗೆ ಬೇಕಾದ ಭಾಷೆಯಲ್ಲಿ ಅವರು ಮಾತನಾಡಿಕೊಳ್ಳಲಿ. ನೀವ್ಯಾಕೆ ಇಡೀ ದೇಶ ಒಂದೇ ಭಾಷೆಯನ್ನು ಮಾತನಾಡಬೇಕೆಂದು ಒತ್ತಡ ಹೇರುತ್ತೀರಿ?’ ಎಂದು ಕಿಡಿಕಾರಿದರು. ‘ಭಾಷಾ ವೈವಿಧ್ಯತೆ ಗೌರವಿಸದಿದ್ದರೆ, ದೇಶದಲ್ಲಿ ಆಂತರಿಕವಾಗಿ ಬಿರುಕು ಮೂಡಲಿದೆ’ ಎಂದರು.
ಅನ್ಯ ರಾಜ್ಯಗಳಲ್ಲಿ ವ್ಯವಹಾರಕ್ಕೆ ಹಿಂದಿ ಬಳಕೆ ತಪ್ಪೇನಿದೆ?: ಸುನಿಲ್
ಬೇರೆ ರಾಜ್ಯಗಳ ಸಂಪರ್ಕಕ್ಕೆ ಹಿಂದಿ ಬಳಸಿ ಎಂದು ಕೇಂದ್ರ ಸರ್ಕಾರ ಹೇಳಿದೆ, ಇದರಲ್ಲಿ ತಪ್ಪೇನಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಸೋಮವಾರ ಸುದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ಹಿಂದಿ ಹೇರಿಕೆಯ ಪ್ರಶ್ನೆಯೇ ಬರುವುದಿಲ್ಲ, ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಮ್ಮೆಲ್ಲರ ಮಾತೃಭಾಷೆ ಕನ್ನಡ, ಮಾತೃ ಭಾಷೆ ಬಳಕೆ ಮಾಡುವುದು ನಮ್ಮ ಹಕ್ಕು. ಆದರೆ ಬೇರೆ ರಾಜ್ಯದಲ್ಲಿ ಸರ್ಕಾರಿ ವ್ಯವಹಾರಕ್ಕೆ ಸಂಪರ್ಕಕ್ಕೆ ಹಿಂದಿ ಬಳಸಿ ಎಂದಿದ್ದಾರೆ ಹೊರತು ಕನ್ನಡ ಬಿಟ್ಟು ಬೇರೆ ಮಾತನಾಡಿ ಎಂದು ಎಲ್ಲೂ ಹೇಳಿಲ್ಲ. ಅನಗತ್ಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.