"ನಾನು ಕೇವಲ ಒಬ್ಬ ನಟನಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ಈ ಹಿಂದೆ ಹೇಳುತ್ತಿದ್ದೆ. ಆದರೆ, ಸತ್ಯ ಹೇಳಬೇಕೆಂದರೆ, ಪ್ರತಿಯೊಬ್ಬ ನಟನಿಗೂ ಸ್ಟಾರ್‌ಡಮ್ ಬೇಕು. ಸ್ಟಾರ್‌ಡಮ್ ಇದ್ದರೆ ನಿಮ್ಮ ಚಿತ್ರಗಳು ಹೆಚ್ಚು ಜನರನ್ನು...
ತಮಿಳು ಚಿತ್ರರಂಗದಲ್ಲಿ 'ಮಕ್ಕಳ್ ಸೆಲ್ವನ್' (ಜನರ ನೆಚ್ಚಿನ ಮಗ) ಎಂದೇ ಪ್ರೀತಿಯಿಂದ ಕರೆಯಲ್ಪಡುವ, ತಮ್ಮ ಸಹಜ ಅಭಿನಯ ಮತ್ತು ಪಾತ್ರಗಳ ಆಯ್ಕೆಯಲ್ಲಿನ ವೈವಿಧ್ಯತೆಯಿಂದ ವಿಶಿಷ್ಟ ಸ್ಥಾನ ಗಳಿಸಿರುವ ನಟ ವಿಜಯ್ ಸೇತುಪತಿ (Vijay Sethupath), ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕೆಲವು ಅಚ್ಚರಿಯ ಹಾಗೂ ಅತ್ಯಂತ ಪ್ರಾಮಾಣಿಕ ಹೇಳಿಕೆಗಳನ್ನು ನೀಡಿದ್ದಾರೆ.
ಸಾಮಾನ್ಯವಾಗಿ ಸ್ಟಾರ್‌ಡಮ್ ಮತ್ತು ಅದರ ಗಿಮಿಕ್‌ಗಳಿಂದ ದೂರವಿರುತ್ತಾರೆ ಎನ್ನಲಾಗುವ ಸೇತುಪತಿ, ತಮಗೂ 'ಸ್ಟಾರ್‌ಡಮ್' ಬೇಕು ಎಂಬ ಆಸೆಯನ್ನು ಇದೇ ಮೊದಲ ಬಾರಿಗೆ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, 2018ರಲ್ಲಿ ತೆರೆಕಂಡ ತಮ್ಮ ನಿರ್ಮಾಣ ಮತ್ತು ನಟನೆಯ 'ಜುಂಗಾ' ಚಿತ್ರದ ವೈಫಲ್ಯಕ್ಕೆ ತಾವೇ ಸಂಪೂರ್ಣ ಹೊಣೆಗಾರರು ಎಂದು ಅವರು ನೇರವಾಗಿ ಒಪ್ಪಿಕೊಂಡಿರುವುದು ಸಿನಿರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಂದರ್ಶನದಲ್ಲಿ ಮಾತನಾಡಿದ ವಿಜಯ್ ಸೇತುಪತಿ, "ನಾನು ಕೇವಲ ಒಬ್ಬ ನಟನಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ಈ ಹಿಂದೆ ಹೇಳುತ್ತಿದ್ದೆ. ಆದರೆ, ಸತ್ಯ ಹೇಳಬೇಕೆಂದರೆ, ಪ್ರತಿಯೊಬ್ಬ ನಟನಿಗೂ ಸ್ಟಾರ್‌ಡಮ್ ಬೇಕು. ಸ್ಟಾರ್‌ಡಮ್ ಇದ್ದರೆ ನಿಮ್ಮ ಚಿತ್ರಗಳು ಹೆಚ್ಚು ಜನರನ್ನು ತಲುಪುತ್ತವೆ, ದೊಡ್ಡ ಮಟ್ಟದ ಮಾರುಕಟ್ಟೆ ಸಿಗುತ್ತದೆ ಮತ್ತು ವಿಭಿನ್ನ ಕಥೆಗಳನ್ನು ಹೇಳಲು ಹೆಚ್ಚಿನ ಅವಕಾಶಗಳು ಲಭಿಸುತ್ತವೆ. ಆದ್ದರಿಂದ, ಹೌದು, ನನಗೂ ಸ್ಟಾರ್‌ಡಮ್ ಬೇಕು," ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
'ಜುಂಗಾ' ಚಿತ್ರದ ಸೋಲಿನ ಬಗ್ಗೆ ಪ್ರಸ್ತಾಪಿಸಿದ ಅವರು, "ಆ ಚಿತ್ರದ ನಿರ್ದೇಶಕ ಗೋಕುಲ್ ಅವರು ಅದ್ಭುತವಾದ ಕಲ್ಪನೆಗಳನ್ನು ಹೊಂದಿದ್ದರು. ಆದರೆ, ನಾನು ನಿರ್ಮಾಪಕನೂ ಆಗಿದ್ದರಿಂದ ಮತ್ತು ಚಿತ್ರವನ್ನು ಹೇಗಾದರೂ ಯಶಸ್ವಿಗೊಳಿಸಬೇಕೆಂಬ ತಪ್ಪು ಕಲ್ಪನೆಯಿಂದ, ಅವರ ಸ್ವಾತಂತ್ರ್ಯಕ್ಕೆ ಅತಿಯಾಗಿ ಹಸ್ತಕ್ಷೇಪ ಮಾಡಿದೆ. ನನ್ನ ಅನಿಸಿಕೆಗಳನ್ನೇ ಅವರ ಮೇಲೆ ಹೇರಲು ಪ್ರಯತ್ನಿಸಿದೆ.
ನಿರ್ದೇಶಕರು ಹೇಳಿದ್ದನ್ನು ನಾನು ಕೇಳಲಿಲ್ಲ, ನನ್ನದೇ ಸರಿ ಎಂದು ವಾದಿಸಿದೆ. ಇದರಿಂದ ಚಿತ್ರವು ಅದರ ಮೂಲ ಆಶಯದಿಂದ ದಾರಿ ತಪ್ಪಿತು ಮತ್ತು ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಆ ಚಿತ್ರದ ಸೋಲಿಗೆ ಸಂಪೂರ್ಣವಾಗಿ ನಾನೇ ಕಾರಣ. ಆ ನಂತರ, ನಾನು ನಿರ್ದೇಶಕರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿದೆ. ಈಗ ನಾನು ಕೇವಲ ನಟನಾಗಿ ನನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ," ಎಂದು ತಮ್ಮ ತಪ್ಪನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ವಿಜಯ್ ಸೇತುಪತಿ ಅವರ ಈ ಪ್ರಾಮಾಣಿಕ ನುಡಿಗಳು ಅವರ ಅಭಿಮಾನಿಗಳಿಂದ ಮತ್ತು ಸಿನಿರಸಿಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿವೆ. ಸಾಮಾನ್ಯವಾಗಿ ಯಶಸ್ಸಿನ ಹೊಣೆಯನ್ನು ಎಲ್ಲರೂ ತೆಗೆದುಕೊಳ್ಳುತ್ತಾರೆ, ಆದರೆ ಸೋಲಿನ ಜವಾಬ್ದಾರಿಯನ್ನು ಹೊರಲು ಕೆಲವೇ ಕೆಲವರು ಮುಂದೆ ಬರುತ್ತಾರೆ. ಅಂತಹ ವಿರಳ ವ್ಯಕ್ತಿತ್ವ ವಿಜಯ್ ಸೇತುಪತಿಯವರದ್ದು ಎಂದು ಹಲವರು ಕೊಂಡಾಡಿದ್ದಾರೆ.
ಪ್ರಸ್ತುತ ವಿಜಯ್ ಸೇತುಪತಿ ಅವರು ತಮ್ಮ 50ನೇ ಚಿತ್ರವಾದ 'ಮಹಾರಾಜ' ಬಿಡುಗಡೆಗೆ ಕಾಯುತ್ತಿದ್ದಾರೆ. ಇದರ ಜೊತೆಗೆ ವೆಟ್ರಿಮಾರನ್ ನಿರ್ದೇಶನದ 'ವಿದುತಲೈ ಪಾರ್ಟ್ 2' ನಲ್ಲೂ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಈ ನೇರ ಮತ್ತು ನಿಷ್ಠುರ ಮಾತುಗಳು ಚಿತ್ರರಂಗದಲ್ಲಿ ಒಬ್ಬ ಕಲಾವಿದನಾಗಿ ಅವರ ಬದ್ಧತೆ ಮತ್ತು ವಿಕಾಸವನ್ನು ತೋರಿಸುತ್ತವೆ.
ಒಟ್ಟನಲ್ಲಿ ಹೇಳಬೇಕು ಎಂದರೆ, ವಿಜಯ್ ಸೇತುಪತಿ ಅವರು ತುಂಬಾ ಪ್ರಾಮಾಣಿಕ ವ್ತಕ್ತಿತ್ವದ ನಟ ಎನ್ನಬಹುದು. ತಾವು ಮಾಡಿರುವ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡು, ದಾರಿ ಸರಿ ಮಾಡಿಕೊಂಡಿದ್ದಾರೆ. ಜೊತೆಗೆ, ಸಾಮಾನ್ಯವಾಗಿ ಪ್ರತಿಯೊಬ್ಬರೂ ಸ್ಟಾರ್‌ಡಮ್ ಬಯಸುತ್ತಾರೆ ಎಂಬುದನ್ನು ಹೇಳಿದ್ದಾರೆ. ಇನ್ನೂ ಹೆಚ್ಚಿನ ಪ್ರಾಮಾಣಿಕತೆಯನ್ನು ಯಾರಿಂದಲೂ ಅಪೇಕ್ಷಿಸುವುದು ಅಸಾಧ್ಯ ಎನ್ನಬಹುದದೇನೋ..!


