ಬಣ್ಣದ ಲೋಕದ ಭೀಕರತೆಗೆ ಸಾಕ್ಷಿಯಾಗಿ ನಿಂತಿದೆ ಒಂದು ಕಾಲದ ಸೌಂದರ್ಯದ ಘನಿ ಪರ್ವೀನ್ ಬಾಬಿಯ ಭಯಾನಕ ಅಂತ್ಯ. ಈಕೆಗೆ ಆಗಿದ್ದೇನು? ಬದುಕಿನ ಕಥನ ಇಲ್ಲಿದೆ...
ಬಣ್ಣದ ಲೋಕವೇ ಹಾಗೆ. ಚಾಲ್ತಿಯಲ್ಲಿ ಇದ್ದರಷ್ಟೇ ಡಿಮಾಂಡು. ಇಲ್ಲದೇ ಹೋದರೆ memory is short ಎನ್ನುವಂತೆ ಜನರ ನೆನಪು ತುಂಬಾ ಕಡಿಮೆಯಾಗಿಬಿಡುತ್ತದೆ. ಇದೇ ಕಾರಣಕ್ಕೆ ಒಂದು ಕಾಲದಲ್ಲಿ ಮಿಂಚುತ್ತಿದ್ದ ತಾರೆಯರನ್ನು ಈಗ ನೆನಪಿಸಿಕೊಳ್ಳುವವರೇ ಇಲ್ಲ. ಕೆಲವರ ಬದುಕು ಅದೆಷ್ಟು ಭಯಾನಕ ಆಗಿರುತ್ತದೆ ಎಂದರೆ, ಬದುಕಿದ್ದಾಗ ಡೇಟ್ಸ್ ಪಡೆಯಲು ನಿರ್ದೇಶಕರು, ನಿರ್ಮಾಪಕರು ಕ್ಯೂ ನಿಂತಿರುತ್ತಾರೆ, ಆದರೆ ಅವರ ಸಾವಿನ ದಿನ ಒಬ್ಬರೇ ಒಬ್ಬರೂ ಇರುವುದಿಲ್ಲ, ಅಷ್ಟೇ ಏಕೆ ಬೀದಿ ಹೆಣವಾದರೂ ಗಮನಿಸುವವರೇ ಇರುವುದಿಲ್ಲ. ಅಂಥದ್ದೇ ಒಂದು ಸ್ಟೋರಿ 70 ರಿಂದ 90ರ ದಶಕದವರೆಗೂ ಬಾಲಿವುಡ್ನ ದಿ ಮೋಸ್ಟ್ ಬ್ಯೂಟಿಫುಲ್ ಲೇಡಿ ಎಂದು ಹೆಸರು ಪಡೆದಿದ್ದು, ಘನಿ ಎಂದೇ ಖ್ಯಾತಿ ಪಡೆದಿದ್ದ ಪರ್ವೀನ್ ಬಾಬಿ.
ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರೂ ಪರ್ವೀನ್ ಬಾಬಿ ಬಣ್ಣದ ಲೋಕದಲ್ಲಿ ಹೊಸ ದಾಖಲೆಯನ್ನೇ ಬರೆದವರು. ಆರಂಭಿಕ ಶಿಕ್ಷಣವನ್ನು ಅಹಮದಾಬಾದ್‌ನ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಮುಗಿಸಿದರು. ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ, ಪರ್ವೀನ್ ಅಹಮದಾಬಾದ್‌ನ ಸೇಂಟ್ ಕ್ಸೇವಿಯರ್ ಕಾಲೇಜಿಗೆ ಸೇರಿದರು. ಆಗಲೇ ಅವರು ಸಕತ್ ಬೋಲ್ಡ್. ಒಮ್ಮೆ ಕಾಲೇಜಿಗೆ ಮಿನಿ ಸ್ಕರ್ಟ್ ಧರಿಸಿ ಕೈಯಲ್ಲಿ ಸಿಗರೇಟು ಹಿಡಿದು ಬಂದಿದ್ದರು. ಅದನ್ನು ನೋಡಿದ್ದವರು ಚಿತ್ರನಿರ್ಮಾಪಕ ಬಿ.ಆರ್ ಇಶಾ. ಆಕೆಯ ಕುಕ್ಕುವ ಸೌಂದರ್ಯ ಹಾಗೂ ಬೋಲ್ಡ್ನೆಸ್ ನೋಡಿ ಸುಸ್ತಾಗಿ ಹೋದರು. ತಮ್ಮ ಚರಿತ್ರ ಚಿತ್ರದಲ್ಲಿ ನಟಿಸಲು ಚಾನ್ಸ್ ಕೊಟ್ಟರು. ಅದು 1973 ರಲ್ಲಿ ಬಿಡುಗಡೆಯಾಯಿತು. ಆದರೆ ಹೇಳಿಕೊಳ್ಳುವಷ್ಟು ಸಕ್ಸಸ್ ಕಾಣಿಸಲಿಲ್ಲ.
ಆದರೆ 70ರ ದಶಕದ ಆ ಕಾಲದಲ್ಲಿ ಇವರ ಹಾಟ್ನೆಸ್ ನಿರ್ಮಾಪಕರು, ನಿರ್ದೇಶಕರ ಕಣ್ಣು ಕುಕ್ಕಿ ಅದೃಷ್ಟ ಖುಲಾಯಿಸಿತು. ಅವರ ಸ್ಟೈಲ್‌ನಿಂದಾಗಿ ಪ್ರತಿಯೊಬ್ಬ ನಿರ್ದೇಶಕರೂ ಪರ್ವೀನ್ ತಮ್ಮ ಸಿನಿಮಾದಲ್ಲಿ ನಟಿಸ ಬೇಕೆಂದು ಬಯಸುತ್ತಿದ್ದರು. ಬಳಿಕ ಅವರಿಗೆ ಅಂದಿನ ದಿಗ್ಗಜ ನಟರ ಜೊತೆ ನಾಯಕಿಯಾಗಿ ಪಟ್ಟ ಸಿಕ್ಕಿತು. ಆ ಕಾಲದ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆದರು. ಅವರು ಅಮಿತಾಬ್ ಬಚ್ಚನ್, ಧರ್ಮೇಂದ್ರ (Dharmendra), ವಿನೋದ್ ಖನ್ನಾ (Vinodh Khanna), ರಿಷಿ ಕಪೂರ್ (Rishi Kapoor), ಫಿರೋಜ್ ಖಾನ್, ಜೀತೇಂದ್ರ, ಶತ್ರುಘ್ನ ಸಿನ್ಹಾ, ಶಶಿ ಕಪೂರ್, ರಾಜೇಶ್ ಖನ್ನಾ, ಸಂಜೀವ್ ಕುಮಾರ್ ಸೇರಿದಂತೆ ಎಲ್ಲಾ ನಟರ ಜೊತೆ ನಟಿಸಿದರು.
ಪರ್ವೀನ್ ಬಾಬಿ 36 ಅವರ್ಸ್, ದೀವಾರ್, ಅಮರ್ ಅಕ್ಬರ್ ಅಂತೋನಿ, ಶಾನ್, ಕಾಲಿಯಾ, ಕಾಲಾ ಸೋನಾ, ರಂಗೀಲಾ ರತನ್, ಮಾಮಾ ಭಂಜಾ, ಸುಹಾಗ್, ಕಾಲಾ ಪತ್ತರ್, ದಿ ಬರ್ನಿಂಗ್ ಟ್ರೈನ್, ಏಕ್ ಔರ್ ಏಕ್ ಇಲೆವೆನ್, ರೆವಲ್ಯೂಷನ್, ಬ್ಲಡ್ ಅಂಡ್ ವಾಟರ್, ದೇಶ್ ಲವರ್, ನಮಕ್ ಲಹಾ ಕೆಲಸ ಅರ್ಪಣ್, ಮಹಾನ್, ಜಾನಿ ದೋಸ್ತ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ಟಾರ್ಡಮ್ ಹೆಚ್ಚಾದಂತೆ ಸಂಬಂಧಗಳೂ ಹೆಚ್ಚಿದವು.
ನಟಿಯ ಹೆಸರು ಮೊದಲು ಡ್ಯಾನಿಯೊಂದಿಗೆ ಹೆಸರು ಥಳಕು ಹಾಕಿ ಕೊಂಡಿತ್ತು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.ಡ್ಯಾನಿ ನಂತರ, ಕಬೀರ್ ಬೇಡಿ ಪರ್ವೀನ್ ಬಾಬಿ ಜೀವನಕ್ಕೆ ಕಾಲಿಟ್ಟರು. ಪರ್ವೀನ್ ಅವರಂತೆಯೇ ಕಬೀರ್ ಕೂಡ ತುಂಬಾ ಫಾಸ್ಟ್ ಫಾರ್ವರ್ಡ್ ಆಗಿದ್ದರು ಮತ್ತು ಈ ಕಾರಣಕ್ಕಾಗಿ ಇಬ್ಬರೂ ತುಂಬಾ ಆತ್ಮೀಯರಾಗಿದ್ದರು. ಇಬ್ಬರ ನಡುವಿನ ಸಂಬಂಧ ಎಷ್ಟು ಗಟ್ಟಿಯಾಯಿತೆಂದರೆ ಇಬ್ಬರೂ ಲಿವ್ ಇನ್‌ನಲ್ಲಿ ವಾಸಿಸಲು ಪ್ರಾರಂಭಿಸಿದರು. ಮೂರು ಮೂರು ಜನರೊಂದಿಗೆ ಸಂಬಂಧ ಹೊಂದಿದ್ದ ನಟಿ ಎಲ್ಲರಿಂದಲೂ ದೂರವಾಗಿ ಮದುವೆಯನ್ನೂ ಆಗದೇ ಖಿನ್ನತೆಗೆ ಜಾರಿದರು.
ಅವರಿಗೆ ಸ್ಕಿಜೋಫ್ರೇನಿಯಾ ಶುರುವಾಯಿತು. ಯಾರೋ ತಮ್ಮನ್ನು ಕೊಲ್ಲಲು ಬಯಸುತ್ತಾರೆ ಎಂದು ನಟಿ ಭಾವಿಸುತ್ತಿದ್ದರು. ಕೊನೆಗೆ ಒಂದು ದಿನ ತಮ್ಮ ಅಪಾರ್ಟ್ಮೆಂಟ್ನಲ್ಲಿ ನಿಗೂಢವಾಗಿ ಸಾವಿಗೀಡಾದರು. ನಟಿಯ ಮನೆಯ ಬಾಗಿಲು ಒಳಗಡೆಯಿಂದ ಮುಚ್ಚಿತ್ತು. ಅಕ್ಕ ಪಕ್ಕದವರಿಗೆ ವಾಸನೆ ಬರಲು ಶುರುವಾದಾಗ ಪೊಲೀಸರಿಗೆ ದೂರು ನೀಡಿದ್ದರು. ಬಾಗಿಲು ತೆಗೆದು ನೋಡಿದಾಗ ಅದಾಗಲೇ ನಟಿ ಸತ್ತು 3-4 ದಿನವಾಗಿ ಹೆಣ ಕೊಳೆತಿತ್ತು. ದುರಂತ ಎಂದರೆ, ಈಕೆಯ ಅಂತಿಮ ಸಂಸ್ಕಾರಕ್ಕೂ ಆಕೆ ಒಂದು ಕಾಲದಲ್ಲಿ ಸಂಬಂಧ ಬೆಳೆಸಿಕೊಂಡಿದ್ದ ನಟರೂ ಬರಲಿಲ್ಲ, ಬಣ್ಣದ ಲೋಕದ ದಿಗ್ಗಜರೂ ಸುಳಿಯಲಿಲ್ಲ. ಅನಾಥ ಶವವಾಗಿಯೇ 51ನೇ ವಯಸ್ಸಿಗೆ ವಿದಾಯ ಹೇಳಿದರು ನಟಿ.
