ಕೊರೋನಾ ಗೆದ್ದ ಸುಮಲತಾ ಅಂಬರೀಶ್: ಐಟಿ ಕಂಪನಿಗಳಿಗೆ ಗುಡ್ ನ್ಯೂಸ್: ಜುಲೈ 22ರ ಟಾಪ್ 10 ಸುದ್ದಿ
ಕೊರೋನಾತಂಕ ನಡುವೆ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಚಿನ್ನ, ಬೆಳ್ಳಿ ದರವೂ ದಾಖಲೆಯ ಏರಿಕೆ ಕಂಡಿದೆ. ಅತ್ತ ಮಧ್ಯಪ್ರದೇಶದಲ್ಲಿ ಬರೋಬ್ಬರು ಅರ್ಧ ಕೋಟಿ ಮೊತ್ತದ ವಜ್ರ ಸಿಕ್ಕಿದೆ. ಇನ್ನು ರಾಜ್ಯದಲ್ಲಿ ಮಂಡ್ಯ ಸಂಸದೆ ಸುಮಲತಾ ಕೊರೋನಾವನ್ನು ಮಣಿಸಿದ್ದಾರೆ. ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಕೋವಿಡ್ ಉಪಕರಣ ಖರೀದಿಯಲ್ಲಿ ಸರ್ಕಾರ ಅವ್ಯವಹಾರ ನಡೆಸಿರುವುದಕ್ಕೆ ದಾಖಲೆ ಬಿಡುಗಡೆ ಮಾಡುತ್ತೇನೆಂದಿದ್ದಾರೆ. ಇಲ್ಲಿದೆ ನೋಡಿ 22ರ ಟಾಪ್ 10 ಸುದ್ದಿ
40 ಕೆಜಿ ಬೆಳ್ಳಿ ಇಟ್ಟಿಗೆ, 300 ಕೋಟಿ ಯೋಜನೆ, 10 ಕೋಟಿ ಜನರಿಂದ ದೇಣಿಗೆ; ನಿರ್ಮಾಣವಾಗಲಿದೆ ಮಂದಿರ
ಆಗಸ್ಟ್ 5ರಂದು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುವುದು ಖಚಿತವಾಗುತ್ತಿದ್ದಂತೆಯೇ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭವಾಗಿವೆ. ಸುಮಾರು 250 ಅತಿಥಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಅವರು 5 ಬೆಳ್ಳಿ ಇಟ್ಟಿಗೆಗಳನ್ನು ಸಾಂಕೇತಿಕವಾಗಿ ಇರಿಸಿ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ದೇಶದ 18 ಕೋಟಿ ಮಂದಿಗೆ ಗೊತ್ತೇ ಇಲ್ಲದೆ ಬಂದು ಹೋಗಿದೆ ಕೊರೋನಾ!
ದೇಶದಲ್ಲಿ ನಿತ್ಯವೂ 40000 ಆಸುಪಾಸಿನಲ್ಲಿ ಹೊಸ ಕೊರೋನಾ ಸೋಂಕು ಪತ್ತೆಯಾಗಿ, ಭವಿಷ್ಯ ಇನ್ನಷ್ಟುಭೀಕರ ಎಂಬ ಆತಂಕದ ಬೆನ್ನಲ್ಲೇ, ಭಾರತದಲ್ಲಿ ಈಗಾಗಲೇ ಸುಮಾರು 18 ಕೋಟಿ ಜನರಿಗೆ ಕೊರೋನಾ ಸೋಂಕು ಬಂದು, ಅವರೆಲ್ಲಾ ಗುಣಮುಖರಾಗಿದ್ದಾರೆ ಎಂಬ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಇದು ಈಗಾಗಲೇ ಸೋಂಕಿತರ ಸಂಖ್ಯೆ 11 ಲಕ್ಷ ದಾಟಿ, ವಿಶ್ವದಲ್ಲೇ 3ನೇ ಸ್ಥಾನದಲ್ಲಿರುವ ದೇಶಕ್ಕೆ ಹೊಸ ಭರವಸೆಯ ಬೆಳಕಾಗಿ ಮೂಡಿಬಂದಿದೆ.
ಜಾಕ್ ಪಾಟ್, ಸಿಕ್ಕಿದ್ದು ಬರೋಬ್ಬರಿ ಅರ್ಧಕೋಟಿ ಮೌಲ್ಯದ ವಜ್ರ
ಮಧ್ಯಪ್ರದೇಶದ ಗಣಿಯೊಂದರಲ್ಲಿ 10.69 ಕ್ಯಾರಟ್ ನ ಬರೋಬ್ಬರಿ 50 ಲಕ್ಷ ರೂ. ಮೌಲ್ಯದ ವಜ್ರವೊಂದು ಸಿಕ್ಕಿದೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯೊಂದರಲ್ಲಿ ವಜ್ರ ಸಿಕ್ಕಿದೆ. ರಾಣಿಪುರ ಪ್ರದೇಶದಲ್ಲಿ 35 ವರ್ಷದ ಆನಂದಿಲಾಲ್ ಖುಷ್ವಾ ಎಂಬುವವರು ಗಣಿಯನ್ನು ಭೋಗ್ಯಕ್ಕೆ ಪಡೆದಿದ್ದು, ಅವರು 10.69 ಕ್ಯಾರಟ್ ನ ವಜ್ರವನ್ನು ಸ್ಥಳೀಯ ವಜ್ರದ ಕಚೇರಿಗೆ ನೀಡಿದ್ದಾರೆ ಎಂದು ಪನ್ನಾ ಜಿಲ್ಲೆಯ ವಜ್ರದ ಅಧಿಕಾರಿ ಆರ್.ಕೆ. ಪಾಂಡೆ ಮಾಹಿತಿ ನೀಡಿದ್ದಾರೆ.
ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರ: ಗುರುವಾರ ದಾಖಲೆ ಬಿಡುಗಡೆ ಮಾಡ್ತೀನಿ ಎಂದ ಸಿದ್ದು
ಕೋವಿಡ್ -19 ಉಪಕರಣ ಖರೀದಿಯಲ್ಲಿ ಅವ್ಯವಹಾರ ಕೇಸ್ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಬಳಿ ಮಾಹಿತಿ ಕೇಳಿದರೂ ಇದುವರೆಗೂ ಕೊಟ್ಟಿಲ್ಲ.
ಕೊರೋನಾ ಗೆದ್ದ ಸುಮಲತಾ ಅಂಬರೀಶ್: ಸಂತಸ ಹಂಚಿಕೊಂಡ ಸಂಸದೆ
ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರು ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಸುಮಲತಾ ಅವರಿಗೆ ಜು.6ರಂದು ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಅದಾದ ಬಳಿಕ ಮನೆಯಲ್ಲೇ ಕ್ವಾರಂಟೈನ್ ಆಗಿ, ಚಿಕಿತ್ಸೆ ಪಡೆದಿದ್ದರು. ಇದೀಗ ಮೂರು ವಾರಗಳ ಬಳಿಕ ಕೊರೋನಾದಿಂದ ಗುಣಮುಖರಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಐಟಿ ಕಂಪನಿಗಳಿಗೆ ಗುಡ್ ನ್ಯೂಸ್: ಸರ್ಕಾರದ ಈ ಆದೇಶದಿಂದ ಫುಲ್ ಖುಷ್!
ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ವರ್ಕ್ ಫ್ರಂ ಹೋಂ ಸಡಿಲಿಕೆಯನ್ನು, 2020ರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಕೊರೋನಾತಂಕದ ನಡುವೆ ಸರ್ಕಾರದ ಈ ಆದೇಶ ಐಟಿ ಕಂಪನಿಗಳಿಗೆ ಕೊಂಚ ನೆಮ್ಮದಿ ನೀಡಿದೆ. ಸಡಿಲಿಕೆಯನ್ವಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಈ ವರ್ಷದ ಕೊನೆವರೆಗೆ ಅಂದರೆ ಡಿಸೆಂಬರ್‌ವರೆಗೂ ಮನೆಯಿಂದಲೇ ಕೆಲಸ ನಿರ್ವಹಿಸಲು ಹೇಳಹುದು. ಈ ಹಿಂದೆ ಜುಲೈವರೆಗಷ್ಟೇ ಸರ್ಕಾರ ಈ ಅವಕಾಶ ನೀಡಿತ್ತು.
ಯಾವುದೇ ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರಿ: ಕೃಷಿಗೆ ಸಂಬಂಧಿಸಿದ 2 ಸುಗ್ರೀವಾಜ್ಞೆ!
ಇತ್ತೀಚೆಗೆ ಕರ್ನಾಟಕದಲ್ಲಿ ರೈತರು, ನಿಗದಿತ ಮಾರುಕಟ್ಟೆಹೊರತಾಗಿ ತಮಗೆ ಬೇಕಾದ ಕಡೆ ಕೃಷಿ ಉತ್ಪನ್ನ ಮಾಡಬಹುದು ಎಂದು ಅಲ್ಲಿನ ಸರ್ಕಾರ ಅಧ್ಯಾದೇಶ ಹೊರಡಿಸಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಕೂಡ ಇದೇ ಮಾದರಿಯ 2 ಸುಗ್ರೀವಾಜ್ಞೆಗಳ ಅಧಿಸೂಚನೆ ಮಂಗಳವಾರ ಪ್ರಕಟವಾಗಿದೆ.
ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಬದಲಾವಣೆ: ಹೊಸ ದಾಖಲೆ!
ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ದಾಖಲೆಯ ಏರಿಕೆ ಕಂಡಿದೆ. ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಬೆನ್ನಲ್ಲೇ ದೇಶದಲ್ಲೂ ಚಿನ್ನ, ಬೆಳ್ಳಿ ದರ ಜಿಗಿದಿದೆ. ಚಿನ್ನದ ಬೆಲೆ ಈವರೆಗಿನ ಗರಿಷ್ಟ ಅಂದರೆ 50 ಸಾವಿರ ರೂ. ದಾಟಿದೆ. ಅತ್ತ ಬೆಳ್ಳಿ ದರವೂ 60,619 ರೂ.ಗೇರಿದೆ.
ಗರ್ಭಿಣಿ, ವೃದ್ಧರಿಗೆ ಉಚಿತ ಸಂಚಾರ ಸೇವೆ: ಮಂಗಳೂರಿನ ಅರ್ಷದ್ ಮಾದರಿ ಕೆಲಸ
ಲಾಕ್‌ಡೌನ್ ಅವಧಿಯಲ್ಲಿ ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು ಹಾಗೂ ಗರ್ಭಿಣಿಯರು ಸಂಚಾರಕ್ಕೆ ಪಡುವ ಬವಣೆ ಕಂಡು ಮಂಗಳೂರು ಯುವಕನೊಬ್ಬ ಸ್ವಯಂ ಆಗಿ ಉಚಿತ ವಾಹನ ವ್ಯವಸ್ಥೆ ರೂಪಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಇಲ್ಲಿವೆ ಫೋಟೋಸ್
ಯಶ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್; ಒನ್ ಮೋರ್ ಗೂಗ್ಲಿ ಅಂತಾರಾ ರಾಕಿಭಾಯ್..?
ರಾಕಿಂಗ್ ಸ್ಟಾರ್ ಸಿನಿ ಕರಿಯರ್‌ನ ಸೂಪರ್ ಡೂಪರ್ ಸಿನಿಮಾಗಳಲ್ಲಿ ಗೂಗ್ಲಿ ಕೂಡಾ ಒಂದು. ಈ ಸಿನಿಮಾ ರಿಲೀಸ್ ಆಗಿ 7 ವರ್ಷಗಳು ಕಳೆದಿವೆ. ಕಲರ್‌ಫುಲ್ ಲವ್‌ಸ್ಟೋರಿ ಜತೆ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಪವನ್ ಒಡೆಯರ್ ಹಾಗೂ ಯಶ್ ಕಾಂಬಿನೇಶನ್‌ನಲ್ಲಿ ಮೂಡಿಬಂದ ಚಿತ್ರವಿದು. ಇದೀಗ ಗೂಗ್ಲಿ - 2 ಬಗ್ಗೆ ಟಾಕ್ ಶುರುವಾಗಿದ್ದು, ಪವನ್ ಪಡೆಯರ್ ಒನ್ ಮೋರ್ ಗೂಗ್ಲಿ ಮಾಡೋಣ ಎಂದು ರಾಕಿಭಾಯ್‌ಗೆ ಹೇಳುತ್ತಿದ್ದಾರೆ. ಇದಕ್ಕೆ ರಾಕಿ ಭಾಯ್ ಏನಂತಾರೆ? ಇಲ್ಲಿದೆ ನೋಡಿ..!