ಚೆನ್ನೈ(ಆ.27): ಕೊರೋನಾ ಹಿನ್ನೆಲೆಯಲ್ಲಿನ ಇಲ್ಲಿನ ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಪ್ರಜ್ಞೆ ಹೊಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಈಗಲು ಅವರನ್ನು ವೆಂಟಿಲೇಟರ್‌ ಮತ್ತು ಇಸಿಎಂಒ ವ್ಯವಸ್ಥೆಯಲ್ಲಿಯೇ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಆಸ್ಪತ್ರೆಯ ಆರೋಗ್ಯ ವರದಿಯಲ್ಲಿ ತಿಳಿಸಲಾಗಿದೆ.

ಈ ನಡುವೆ ತಂದೆಯ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣ ಮೂಲಕ ಹೇಳಿಕೆ ನೀಡಿರುವ ಎಸ್‌ಪಿಬಿ ಪುತ್ರ ಚರಣ್‌, ಮೊನ್ನೆಗೆ ಹೋಲಿಸಿದರೆ ಇಂದು ಅವರ ಆರೋಗ್ಯದಲ್ಲಿ ಇನ್ನಷ್ಟುಚೇತರಿಕೆ ಕಂಡುಬಂದಿದೆ. ಅವರು ಇಂದು ಮೊನ್ನೆಗಿಂತ ಹೆಚ್ಚು ಪ್ರಜ್ಞಾಸ್ಥಿತಿಯಲ್ಲಿ ಇದ್ದಿದ್ದು ಕಂಡುಬಂದಿತು. ಅವರು ಶ್ವಾಸಕೋಶದಲ್ಲಿಯೂ ಸುಧಾರಣೆಯಾಗಿದೆ. ಇದು ಚೇತರಿಕೆಯ ಮೊದಲ ಹಂತ ಎಂದು ವೈದ್ಯರು ತಿಳಿಸಿದ್ದಾರೆ.

ಇದು ನಿಜವಾಗಿಯೂ ಶುಭ ಸುದ್ದಿ. ಜೊತೆಗೆ ಅವರು ಆಸ್ಪತ್ರೆಯಲ್ಲಿ ಹಾಡು ಆಲಿಸಿಕೊಂಡು ಅದನ್ನು ಪುನರಾವರ್ತಿಸಲು ಯತ್ನಿಸುತ್ತಿದ್ದಾರೆ. ಜೊತೆಗೆ ಬುಧವಾರ ನಾನು ಭೇಟಿ ಕೊಟ್ಟವೇಳೆ ಏನನ್ನೋ ಬರೆದು ನನಗೆ ಸಂದೇಶ ನೀಡುವ ಯತ್ನ ಮಾಡಿದರಾದರೂ ಅದು ಫಲ ಕೊಡಲಿಲ್ಲ. ಆದರೆ ಇನ್ನೊಂದು ವಾರದಲ್ಲಿ ಅವರು ಖಂಡಿತಾ ಅವರು ಆ ಸ್ಥಿತಿಗೆ ತಲುಪಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.