ಮಹೇಂದ್ರ ದೇವನೂರು

ಮೈಸೂರು(ಜು.04): ಕೊರೋನಾ ಅಟ್ಟಹಾಸದಿಂದ ಒಂದು ಕಡೆ ಸಿನಿಮಾ ಚಿತ್ರೀಕರಣ ಬಂದ್‌ ಆಗಿ, ಮತ್ತೊಂದೆಡೆ ಟ್ಯಾಕ್ಸಿಗೆ ಗ್ರಾಹಕರೆ ಇಲ್ಲದ ಸಂದರ್ಭದಲ್ಲಿ ನಟ ಶಂಕರ್‌ ಅಶ್ವತ್‌್ಥ ಅವರ ಕೈ ಹಿಡಿದಿದ್ದು ಕೇಟರಿಂಗ್‌.

ಹಿರಿಯ ನಟ ದಿವಂಗತ ಕೆ.ಎಸ್‌.ಅಶ್ವತ್‌್ಥ ಪುತ್ರರಾದ ಶಂಕರ್‌ ತಂದೆಯಂತೆಯೇ ಸ್ವಾಭಿಮಾನಿ. ಚಿತ್ರರಂಗದಲ್ಲಿ ಅವಕಾಶ ಕಡಿಮೆಯಾದಾಗ ಯಾರ ಬಳಿಯೂ ಅವಕಾಶಕ್ಕಾಗಿ ಕೈಚಾಚದೇ ಊಬರ್‌ ಚಾಲಕರಾಗಿ ಜೀವನ ಸಾಗಿಸುತ್ತಿದ್ದರು. ಇತ್ತ ಅವರ ಪತ್ನಿ ಕೇಟರಿಂಗ್‌ ನಡೆಸುತ್ತಿದ್ದರು. ನಂತರ ಅವಕಾಶ ದೊರೆತಾಗ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು.

ಕರ್ಣನಂತೆ ನಾ ಉದ್ಧಾರ ಆಗಲಿಲ್ಲ, ತಂದೆಯನ್ನು ಸುಖವಾಗಿಡಲಿಲ್ಲ; ಭಾವುಕನಾದ ನಟ!

ಆದರೆ, ಕೊರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಘೋಷಿಸಿದ ಕಾರಣ ಚಿತ್ರೀಕರಣ ಬಂದ್‌ ಆಗಿದ್ದರಿಂದ ಅವಕಾಶವಿಲ್ಲದಂತಾಗಿದೆ. ನಟನೆಯೆಂಬುದು ರಕ್ತಗತವಾಗಿರುವ ಶಂಕರ್‌ ಲಾಕ್‌ಡೌನ್‌ ಸಡಿಲಿಕೆ ಬಳಿಕ ಮತ್ತೆ ಟ್ಯಾಕ್ಸಿ ಚಾಲಕರಾಗುವತ್ತ ಮನಸ್ಸು ಮಾಡಿದರು. ಆದರೆ ದಿನವಿಡೀ ಕಾದರೂ ಯಾರೊಬ್ಬ ಗ್ರಾಹಕರು ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ಹೊಸದೊಂದು ದಾರಿ ಹುಡುಕಲು ಆರಂಭಿಸಿದರು.

ಈ ವೇಳೆ ಅವರ ಕೈ ಹಿಡಿದಿದ್ದು, ಕೇಟರಿಂಗ್‌ ವೃತ್ತಿ. ಇವರ ಕುಟುಂಬದ ಕೈ ರುಚಿ ನೋಡಿದ ಅನೇಕ ಮಂದಿ ಕರೆ ಮಾಡಿ ಅಗತ್ಯವಿರುವ ಆಹಾರ ತರಿಸಿಕೊಳ್ಳುತ್ತಾರೆ. ಈಗ ಅದೇ ಅವರ ಪೂರ್ಣ ಪ್ರಮಾಣದ ವೃತ್ತಿಯಾಗಿದೆ.

ನಮಗೆ ವೃತ್ತಿಯಾಗಿ ಕೇಟರಿಂಗ್‌ ಆದರೂ ಇದೆ. ಆದರೆ ಇನ್ನೂ ಕೆಲವರು ಯಾವುದೇ ವೃತ್ತಿ ಇಲ್ಲದೆ ಬದುಕುತ್ತಿದ್ದಾರೆ. ಪಾತ್ರೆ ತೊಳೆಯುವ ಕೆಲಸವನ್ನಾದರೂ ಕೊಡಿ ಎಂದು ಕೇಳುವ ದುಸ್ಥಿತಿಗೆ ಕೊರೋನಾ ತಳ್ಳಿದೆ.

- ಶಂಕರ್‌ ಅಶ್ವತ್‌್ಥ, ಹಿರಿಯ ನಟ